ಬೆಂಗಳೂರು: 73ನೇ ಸ್ವಾತಂತ್ರೋತ್ಸವಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್

Update: 2019-08-13 17:29 GMT

ಬೆಂಗಳೂರು, ಆ.13: ಬೆಂಗಳೂರಿನಲ್ಲಿ ನಡೆಯುವ 73ನೇ ಸ್ವಾತಂತ್ರೋತ್ಸವದ ಭದ್ರತೆಗಾಗಿ 1,906 ಪೊಲೀಸರನ್ನು ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸೆಲ್ಫಿಯನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ಮಂಗಳವಾರ ನಗರದ ಮಾಣಿಕ್ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರೋತ್ಸವದ ಪೂರ್ವ ತಯಾರಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ-ಪಶ್ಚಿಮ ವಿಭಾಗದ ಇಬ್ಬರು ಹೆಚ್ಚುರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 11 ಮಂದಿ ಡಿಸಿಪಿಗಳು, 23 ಎಸಿಪಿಗಳು, 78 ಇನ್‌ಸ್ಪೆಕ್ಟರ್‌ಗಳು, 175 ಪಿಎಸ್‌ಐಗಳು, 221 ಎಎಸ್‌ಐಗಳು, 1,108 ಮಂದಿ ಹೆಡ್‌ಕಾನ್‌ಸ್ಪೇಬಲ್ ಮತ್ತು ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದೆ ಎಂದರು.

77 ಮಹಿಳಾ ಪೊಲೀಸ್ ಸಿಬ್ಬಂದಿ, 150 ಮಂದಿ ಸಾದಾ ಉಡುಪಿನಲ್ಲಿರುವ ಪೊಲೀಸರು ಸೇರಿದಂತೆ 1,906ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ನಿರ್ವಹಣೆಯ ಗರುಡಾ ಪಡೆ, ತುರ್ತು ಸ್ಪಂದನಾ ಪಡೆ, ರ್ಯಾಪಿಡ್ ಆ್ಯಕ್ಸನ್ ಫೋರ್ಸ್ ಸೇರಿದಂತೆ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ಮಾಣಿಕ್ ಷಾ ಪರೇಡ್ ಮೈದಾನದ ಸುರಕ್ಷತೆಗೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ಇಲಾಖೆಯಿಂದ ನಿರ್ದೇಶನ ಬಂದಿದೆ. 24 ತುಕಡಿಗಳನ್ನಾಗಿ ವಿಭಾಗಿಸಿ ಭದ್ರತೆ ಯೋಜಿಸಲಾಗಿದೆ. ಹರಿತವಾದ ಆಯುಧಗಳು, ಮದ್ಯ, ಮಾದಕ ವಸ್ತುಗಳು, ಸ್ಫೋಟಕಗಳು, ಮೊಬೈಲ್, ಕ್ಯಾಮೆರಾ, ರೇಡಿಯೋ, ಕೊಡೆಗಳು, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಕಪ್ಪು ವಸ್ತ್ರ, ತಿಂಡಿ, ತಿನಿಸುಗಳು, ಬಾವುಟಗಳು ಸೇರಿದಂತೆ ಅಸುರಕ್ಷತೆ ಎಂದು ಭಾವಿಸಲಾಗುವ ವಸ್ತುಗಳನ್ನು ತರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಬಾರಿ ಸ್ವಾತಂತ್ರ ದಿನಾಚರಣೆಯಲ್ಲಿ ಗೋವಾ ಪೊಲೀಸರು ನಮ್ಮ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಪೊಲೀಸರು ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಸೆಲ್ಫಿ ಹಾವಳಿಯಿಂದಾಗಿ ಕಾರ್ಯಕ್ರಮಕ್ಕೆ ಅಡಚಣೆಯಾಗಲಿದೆ. ಹಾಗಾಗಿ ಕಡ್ಡಾಯವಾಗಿ ಫೋಟೋಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಸ್ವಯಂ ನಿಯಂತ್ರಣದ ಮೂಲಕ ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಮನವಿ ಮಾಡಿದರು.

ಸಂಚಾರ ನಿರ್ವಹಣೆ: ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಹಳದಿ ಕಾರ್ ಪಾಸ್ ಹೊಂದಿರುವವರಿಗೆ ದ್ವಾರ ಒಂದರಲ್ಲಿ ಪ್ರವೇಶ ಪಡೆದು ಪರೇಡ್ ಮೈದಾನದ ಪಶ್ವಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಬಿಳಿ ಕಾರ್ ಪಾಸ್ ಗಣ್ಯರು, ಸಚಿವರು, ಸರಕಾರದ ಹಿರಿಯ ಅಧಿಕಾರಿಗಳು ದ್ವಾರ ಎರಡರಲ್ಲಿ ಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ ಎಂದರು.

ಹಸಿರು ಬಣ್ಣದ ಪಾಸ್ ಹೊಂದಿರುವವರು ಶಿವಾಜಿನಗರ ಬಸ್ ನಿಲ್ದಾಣದ ಒಂದನೇ ಮಹಡಿಯಲ್ಲಿ ವಾಹನ ನಿಲ್ಲಿಸಿ ದ್ವಾರ ನಾಲ್ಕರಲ್ಲಿ ಪ್ರವೇಶ ಪಡೆಯಬೇಕು. ಡಿಸಿಪಿ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ದ್ವಾರ ಮೂರರಲ್ಲಿ ಪ್ರವೇಶ ಕಲ್ಪಿಸಿ ಮೈದಾನ ಪೂರ್ವ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳಿಗೆ ಪ್ರವೇಶ ದ್ವಾರ ಒಂದರ ಬಳಿ ಮಕ್ಕಳನ್ನು ಇಳಿಸಿ ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೂ ಉತ್ತರ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News