ಬೆಂಗಳೂರು: ನಿಷೇಧದ ನಡುವೆಯೂ ಪ್ಲಾಸ್ಟಿಕ್ ಧ್ವಜದ ಮಾರಾಟ ಜೋರು

Update: 2019-08-13 17:34 GMT

ಬೆಂಗಳೂರು, ಆ.13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಧ್ವಜಗಳ ನಿಷೇಧದ ನಡುವೆಯೂ ಮಾರಾಟದ ಭರಾಟೆ ಹೆಚ್ಚಾಗಿದೆ.

ರಾಷ್ಟ್ರ ಧ್ವಜಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸುವಂತಿಲ್ಲ ಎಂಬ ನಿಯಮ ಇದೆಯಾದರೂ, ನಗರದಲ್ಲಿ ಅವುಗಳ ಮಾರಾಟ ನಿಂತಿಲ್ಲ. ಬಿಬಿಎಂಪಿ ಪ್ಲಾಸ್ಟಿಕ್ ಬಳಸದಂತೆ ವಿದ್ಯಾರ್ಥಿಗಳ ಮೂಲಕ ಜಾಥಾ, ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಅರಿವು ಮೂಡಿಸುತ್ತಿದೆ. ಆದರೆ ಸ್ವಾತಂತ್ರೋತ್ಸವ ಅಂಗವಾಗಿ ನಗರದಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಿಂತಿಲ್ಲ. ಯಾವುದೇ ಗುಣಮಟ್ಟದ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡಬಾರದೆಂದು ಆದೇಶವಿದ್ದರೂ, ಅಂಗಡಿ ಮತ್ತು ಬೀದಿಬದಿ ವ್ಯಾಪಾರಿಗಳು ಯಾವುದನ್ನು ಲೆಕ್ಕಿಸದೇ, ಮಾರಾಟ ಮುಂದುವರಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆ ನಿಯಂತ್ರಿಸದಿದ್ದರೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಪಾಲಿಕೆ ವಿರುದ್ಧ ದೂರು ನೀಡುವುದಾಗಿ ಇತ್ತೀಚೆಗೆ ರಾಜ್ಯ ಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಆಡಿ ಅವರು ಮೇಯರ್ ಮತ್ತು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಪಾಲಿಕೆ ವಿಶೇಷ ತಂಡ ರಚಿಸಿಲ್ಲ.
ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಮಾಣಿಕ್ ಷಾ ಪರೇಡ್ ಮೈದಾನದ ಬಳಿ, ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಕೊಳ್ಳುತ್ತಿದ್ದಾರೆ. ಜತೆಗೆ, ಶಾಲೆಗಳ ಸಮೀಪದ ಅಂಗಡಿಗಳಲ್ಲೂ ಇವೇ ಧ್ವಜಗಳು ಮಾರಾಟವಾಗುತ್ತಿವೆ.

ಶಾಲಾ ಮಕ್ಕಳಿಗೂ ಬಟ್ಟೆ ಧ್ವಜ ಬಳಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದರೆ ಕನಿಷ್ಠ 500 ರೂ. ದಂಡ ಹಾಕಲಾಗುವುದು.
-ರಂದೀಪ್, ವಿಶೇಷ ಆಯುಕ್ತ

ಸ್ವಾತಂತ್ರ ದಿನಾಚರಣೆ ವೇಳೆ ಬಟ್ಟೆ ಧ್ವಜಗಳ ಬಳಕೆಗೆ ಮಾತ್ರ ಅವಕಾಶ ನೀಡುವಂತೆ ಜು.20ರ ಸಭೆಯಲ್ಲಿ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೂ, ಮಾರುಕಟ್ಟೆಗೆ ಪ್ಲಾಸ್ಟಿಕ್ ಧ್ವಜಗಳು ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದು, ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News