ಕೆಂಗೇರಿ ಇನ್‌ಸ್ಪೆಕ್ಟರ್, ಎಸಿಪಿ ವಿರುದ್ಧ ಕ್ರಮಕ್ಕೆ ಶಿಫಾರಸು: ಹೈಕೋರ್ಟ್‌ಗೆ ಹೇಳಿಕೆ

Update: 2019-08-13 17:36 GMT

ಬೆಂಗಳೂರು, ಆ.13: ಕೆಂಗೇರಿ ಉಪನಗರದ ಸಂರಕ್ಷಣಾ ಅನಾಥ ಆಶ್ರಮದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಸಿದ್ಧಾಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿಯನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸಿದ್ಧಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಿದಂತೆ ಕೆಂಗೇರಿ ಇನ್‌ಸ್ಪೆಕ್ಟರ್ ಮತ್ತು ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರಿಗೆ ಶಿಫಾರಸು ಮಾಡಲಾಗಿದೆ ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೊ ಅವರು, ಸಂರಕ್ಷಣಾ ಅನಾಥ ಆಶ್ರಮದಲ್ಲಿ ಒಂಬತ್ತು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅವರೆಲ್ಲಾ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ತನಿಖೆ ಕೂಡ ಸಮರ್ಪಕವಾಗಿ ನಡೆದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಡಿಸಿಪಿ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ. ಸಂತ್ರಸ್ತ ಬಾಲಕಿಯರಿಗೆ ಸಾಂತ್ವನ ನೀಡಲಾಗಿದೆಯೆ, ಅವರಿಗೆ ಮಾನಸಿಕ ವೈದ್ಯರಿಂದ ಏನಾದರೂ ಚಿಕಿತ್ಸೆ ನೀಡಲಾಗಿದೆಯೆ ಎಂಬುದರ ಕುರಿತು ತಿಳಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಆ.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News