ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಕನ್ನಡದ ಅಸ್ಮಿತೆಗೆ ಧಕ್ಕೆ: ಚಂದ್ರಶೇಖರ ಕಂಬಾರ

Update: 2019-08-14 16:47 GMT

ಬೆಂಗಳೂರು, ಆ.14: ಪಾಶ್ಚಿಮಾತ್ಯ ಸಂಸ್ಕೃತಿಯ ಅತಿಯಾದ ಅವಲಂಬನೆಯಿಂದ ಕನ್ನಡನಾಡು ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದರು.

ಬುಧವಾರ ನಗರದ ಆಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಉಪನ್ಯಾಸ ಮಾಲಿಕೆ-8 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಜಾರಿಗೊಳಿಸಿದ ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದ ಅನೇಕ ಬದಲಾವಣೆ ಜೊತೆಗೆ ಭಾರತೀಯರು ಮುಕ್ತವಾಗಿ ಬೆಳೆಯಲು ಕಾರಣವಾಯಿತು. ಆದರೆ, ಅತಿಯಾದ ಈ ಪಾಶ್ಚಿಮಾತ್ಯ ಅವಲಂಬನೆ ನಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಮರೆ ಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕನಿಷ್ಠ 10ನೇ ತರಗತಿಯವರಿಗೂ ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡಿಗರಲ್ಲಿ ಕನ್ನಡ ಭಾಷೆಯ ಅಸ್ಮಿತೆ ಅಂತರಾಳದಿಂದ ಹೊರಹೊಮ್ಮಿದಾಗ ಮಾತ್ರ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯ. ಮಾತೃ ಭಾಷೆ ಶಿಕ್ಷಣ ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿ ಕೊಡುತ್ತದೆ. ಅನ್ಯ ಭಾಷೆಯ ಮಿಶ್ರಣದಿಂದ ಭಾಷೆ ತನ್ನ ಅಸ್ತಿತ್ವ ಹಾಗೂ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು.

ಹಿರಿಯ ಸಾಹಿತಿ ಪ್ರೊ.ಎಲ್.ಎನ್.ಮುಕುಂದ್‌ರಾಜ್ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆ ಜೊತೆಗೆ ಕನ್ನಡ ಸಾಹಿತ್ಯದ ರಸಾನುಭವವನ್ನು ಪಡೆಯಬೇಕು. ಚಂದ್ರಶೇಖರ ಕಂಬಾರ ಕನ್ನಡ ಭಾಷೆಯನ್ನು ಇಂಗ್ಲಿಷ್‌ನಷ್ಟೇ ಪ್ರಭಾವಿ ಭಾಷೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಎಂದರು.

ಕಂಬಾರರು ತಮ್ಮ ಪುಸ್ತಕ, ನಾಟಕಗಳ ಮೂಲಕ ಮನುಷ್ಯನಲ್ಲಿರಬೇಕಾದ ಗುಣಗಳು ಮತ್ತು ದುರಾಸೆಯಿಂದ ಉಂಟಾಗುವ ಪರಿಣಾಮಗಳನ್ನು ತಿಳಿಸುವ ಮೂಲಕ ಸಮಾಜದ ಪರಿವರ್ತನೆ ಸಂದೇಶಗಳನ್ನು ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಎ.ಪಿ ಆಚಾರ್ಯ, ಡಾ.ವಿಷ್ಣುಭರತ್, ಪ್ರೊ.ಕೆ.ಪಿ.ನರಸಿಂಹಮೂರ್ತಿ, ಅನಿಲ್‌ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News