ರಾಜಕೀಯ ನಿವೃತ್ತಿ ಪಡೆಯಲು ಚಿಂತನೆ: ಅನರ್ಹ ಶಾಸಕ ಎಂಟಿಬಿ ನಾಗರಾಜ್

Update: 2019-08-14 17:17 GMT

ಬೆಂಗಳೂರು, ಆ. 14: ‘ನಾನು ಬಿಜೆಪಿ ಸೇರ್ಪಡೆ ಉದ್ದೇಶವನ್ನು ಹೊಂದಿಲ್ಲ. ಬದಲಿಗೆ ನಾನು ರಾಜಕೀಯ ನಿವೃತ್ತಿ ಪಡೆಯಲು ಚಿಂತನೆ ನಡೆಸಿದ್ದೇನೆ’ ಎಂದು ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹ ಸಂತ್ರಸ್ತರಿಗೆ ಎಂಟಿಬಿ ಸಂಸ್ಥೆಯಿಂದ 1 ಕೋಟಿ ರೂ.ನೆರವಿನ ಚೆಕ್ ಅನ್ನು ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವಿನ್ನೂ ಅನರ್ಹ ಶಾಸಕರಾಗಿಯೇ ಇರುವುದರಿಂದ ಸಚಿವ ಸಂಪುಟ ಸೇರುವ ಚರ್ಚೆ ಆಗಿಲ್ಲ. ಬಿಜೆಪಿ ಸೇರುವ ಬಗ್ಗೆ ಚರ್ಚೆಯಾಗಿಲ್ಲ. ಅನರ್ಹ ಶಾಸಕರೆಲ್ಲರೂ ಸೇರಿ ಮುಂದೆ ತೀರ್ಮಾನಿಸುತ್ತೇವೆ. ಅನರ್ಹತೆ ಸಂಬಂಧ ಈಗಾಗಲೇ ನಾವೆಲ್ಲರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್‌ನಿಂದ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಈ ಹಿಂದೆಯೇ ಘೋಷಿಸಿದಂತೆ ಎಂಟಿಬಿ ಸಂಸ್ಥೆಯ ಮೂಲಕ 1 ಕೋಟಿ ರೂ. ಪರಿಹಾರ ನೀಡಲು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೆ ಎಂದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯಲ್ಲಿ ಆಸ್ತಿ ಹಾಗೂ ಮನೆ ಕಳೆದುಕೊಂಡವರಿಗೆ ನಮ್ಮ ಕಡೆಯಿಂದ ಒಂದು ಸಣ್ಣ ಸಹಾಯ ಮಾಡಿದ್ದೇನೆ ಎಂದರು.

ಕದ್ದಾಲಿಕೆ: ನನ್ನ ಟೆಲಿಫೋನ್ ಕದ್ದಾಲಿಕೆಯಾಗಿದೆ ಎನ್ನುವುದು ಗೊತ್ತಾಗಿದೆ. ಯಾರೇ ಮುಖ್ಯಮಂತ್ರಿ, ಸಚಿವ ಆಗಲಿ ಹೀಗೆ ಮಾಡಬಾರದು. ಮಾಡಿದ್ದರೆ ಅದಕ್ಕೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಮೊದಲಿಗೆ ನಮಗೆ ಅನುಮಾನ ಬಂದಿತ್ತು ಎಂದು ಅವರು ಹೇಳಿದರು.

ಹೊಸ ಕಾರು: ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಬೇಕೆಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಇದೀಗ ಆ ಆಸೆ ಕೈಗೂಡಿದೆ. ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದೇನೆ ಎಂದು ಎಂಟಿಬಿ ನಾಗರಾಜ್ ಇದೇ ವೇಳೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News