ಅಲೋಕ್‌ ಕುಮಾರ್ ವರ್ಗಾವಣೆ ವಿಚಾರ: ಆ.16ಕ್ಕೆ ವಿಚಾರಣೆ ಮುಂದೂಡಿದ ಸಿಎಟಿ

Update: 2019-08-14 17:23 GMT
ಅಲೋಕ್‌ ಕುಮಾರ್

ಬೆಂಗಳೂರು, ಆ.14: ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಥಾನದಿಂದ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿ ಕೊಂಡ ಸಿಸಿಎಟಿ(ಕೇಂದ್ರೀಯ ಆಡಳಿತ ನ್ಯಾಯಮಂಡಳಿ) ಕೋರ್ಟ್, ವಿಚಾರಣೆಯನ್ನು ಆ.16ಕ್ಕೆ ಮುಂದೂಡಿದೆ.

ಈ ಕುರಿತಂತೆ ನಿಕಟಪೂರ್ವ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಕೀಲರು, ನಮ್ಮ ಅಡ್ವೊಕೇಟ್ ಜನರಲ್ ವಾದ ಮಂಡಿಸುವ ಅಗತ್ಯವಿದೆ. ಆದರೆ, ಎಜಿ ಅವರು ತುರ್ತು ಕಾರ್ಯದ ನಿಮಿತ್ತ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಅನಾವಶ್ಯಕವಾಗಿ ವಿಚಾರಣೆ ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿತು.

ಈ ವೇಳೆ ಸರಕಾರದ ಪರ ವಕೀಲರು, ನಿನ್ನೆಯಷ್ಟೇ ಸರಕಾರದ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ. ಹೀಗಾಗಿ, ಎಜಿ ಅವರಿಗೆ ಕಾಲಾವಕಾಶದ ಅಗತ್ಯವಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಅಲೋಕ್‌ಕುಮಾರ್ ಪರ ವಕೀಲರೂ ಒಪ್ಪಿಗೆ ಸೂಚಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ನಗರ ಪೊಲೀಸ್ ಆಯುಕ್ತರ ಹುದ್ದೆಯಲ್ಲಿದ್ದ ಅಲೋಕ್‌ಕುಮಾರ್ ಅವರನ್ನು ರಾಜ್ಯ ಸಶಸ್ತ್ರ ಮೀಸಲು ಪಡೆ ಎಡಿಜಿಪಿಯಾಗಿ ಹಾಗೂ ಕೆಎಸ್‌ಆರ್‌ಪಿಯಲ್ಲಿದ್ದ ಭಾಸ್ಕರ್‌ರಾವ್ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಶ್ನಿಸಿ ಅಲೋಕ್‌ಕುಮಾರ್ ಸಿಎಟಿ ಮೆಟ್ಟಿಲೇರಿದರು. ರಾಜ್ಯ ಸರಕಾರ, ಗೃಹ ಇಲಾಖೆ ಮತ್ತು ಭಾಸ್ಕರ್ ರಾವ್ ಅವರನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News