ಗೋ ಶಾಲೆಗಳಲ್ಲಿ ಆಹಾರ ಪೂರೈಕೆ: ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2019-08-14 17:51 GMT

ಬೆಂಗಳೂರು, ಆ.14: ರಾಜ್ಯದ 109 ಬರಪೀಡಿತ ತಾಲೂಕುಗಳಲ್ಲಿ ತೆರೆಯಲಾಗಿರುವ ಗೋ ಶಾಲೆಗಳಲ್ಲಿ ಹೈಕೋರ್ಟ್ ನೀಡಿದ ಆದೇಶದಂತೆ ಪ್ರತಿ ಜಾನುವಾರುಗೆ 6 ಕೆ.ಜಿ ಒಣ ಮೇವು, 18 ಕೆ.ಜಿ ಹಸಿರು ಮೇವು ಹಾಗೂ 1 ಕೆ.ಜಿ.ಪಶು ಆಹಾರವನ್ನು ವಾಸ್ತವವಾಗಿ ಪೂರೈಸುತ್ತಿರುವ ಬಗ್ಗೆ ಆ.16ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರಕಾರದ ಪರ ವಕೀಲರು ಹೈಕೋರ್ಟ್ ಆದೇಶದಂತೆ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಅನುಪಾಲನಾ ವರದಿಯನ್ನು ಸಲ್ಲಿಸಿದರು. ವರದಿ ಗಮನಿಸಿದ ನ್ಯಾಯಪೀಠ, ಬರಪೀಡಿತ ಎಂದು ಘೋಷಣೆಯಾಗಿರುವ 156 ತಾಲೂಕುಗಳಲ್ಲಿ ಗೋ ಶಾಲೆ ತೆರೆಯಬೇಕು. 6 ಕೆಜಿ ಒಣ ಮೇವು, 18 ಕೆಜಿ ಹಸಿರು ಮೇವು ಹಾಗೂ 1 ಕೆಜಿ ಪಶು ಆಹಾರ ಪೂರೈಸಬೇಕೆಂದು ನೀಡಿದ ಆದೇಶದಂತೆ ಅನುಪಾಲನಾ ವರದಿ ಇಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಜಾನುವಾರುಗಳಿಗೆ ವಾಸ್ತವವಾಗಿ ಪೂರೈಸುತ್ತಿರುವ ಬಗ್ಗೆ ಪ್ರಮಾಣ ಸಲ್ಲಿಸಿ ಎಂದು ಸೂಚಿಸಿತು.

ಮೇವು ಪೂರೈಕೆ ಮಾಡಲಾಗುತ್ತಿದೆಯೇ ಇಲ್ಲವೊ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಲು ಸ್ವತಂತ್ರ ಸಂಸ್ಥೆಯಿಂದ ತಪಾಸಣೆ ಮಾಡಿಸಬೇಕಾಗಿದೆ. ಹೀಗಾಗಿ, 10 ಗೋಶಾಲೆಗಳ ಪಟ್ಟಿ ಕೊಡಲು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠವು, ಈ ಗೋ ಶಾಲೆಗಳಿಗೆ ನೇಮಿಸ್ಪಟ್ಟ ಪ್ರತಿನಿಧಿಗಳು ದಿಢೀರ್ ಭೇಟಿ ಕೊಟ್ಟು ತಪಾಸಣೆ ನಡೆಸಲಿದ್ದಾರೆ ಎಂದು ನ್ಯಾಯಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News