ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮ್ ಮಹಿಳೆಯರು

Update: 2019-08-15 05:49 GMT

‘‘ಭಾರತೀಯ ಮಹಿಳೆಯರನ್ನು ಹೊರತು ಪಡಿಸಿ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬಣ್ಣಿಸಲು ಸಾಧ್ಯವಿಲ್ಲ’’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಇದೇ ಸಂದರ್ಭದಲ್ಲಿ ಎಲ್ಲ ಜಾತಿ ಧರ್ಮದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವುದನ್ನು ಇತಿಹಾಸ ಗುರುತಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರಗಳನ್ನು ವಿಶೇಷವಾಗಿ ಬಣ್ಣಿಸಲಾಗುತ್ತದೆಯಾದರೂ, ಮುಸ್ಲಿಮ್ ಮಹಿಳೆಯರ ಅಗಾಧ ಧೈರ್ಯ ಸಾಹಸಗಳು ಇನ್ನೂ ತೆರೆಮರೆಯಲ್ಲೇ ಇದೆ. ಡಾ. ಆಬಿದಾ ಸಮೀಉದ್ದೀನ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮ್ ಮಹಿಳೆಯರ ಕೊಡುಗೆಗಳ ಕುರಿತಂತೆ ಅಧ್ಯಯನ ಮಾಡಿ ಪುಸ್ತಕವೊಂದನ್ನು ಹೊರತಂದಿದ್ದಾರೆ. ಡಾ. ಷಾಕಿರಾ ಖಾನಂ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ನವಕರ್ನಾಟಕ ಪ್ರಕಾಶನ ಬೆಳಕಿಗೆ ತಂದಿದೆ. ಕ್ರಿ.ಶ. 1937ರಲ್ಲಿ ಖ್ಯಾತ ಕವಿ ದಿ. ಮಜಾಜ್ ಭಾರತದ ಮಹಿಳೆಯರನ್ನು ಹೀಗೆಂದು ಬಣ್ಣಿಸಿದ್ದರು ‘‘ನಿನ್ನ ಹಣೆಯ ಮೇಲಿನ ಸೆರಗು ಬಹಳ ಸುಂದರ/ ಅದನ್ನೇ ನೀನು ಬಾವುಟವನ್ನಾಗಿಸಿದರೆ ಇನ್ನೂ ಸುಂದರ’’ ಬಹುಶಃ ಭಾರತೀಯ ಮುಸ್ಲಿಮ್ ಮಹಿಳೆಯರು ತಮ್ಮ ಸೆರಗನ್ನು ಅಕ್ಷರಶಃ ಭಾರತದ ಬಾವುಟವನ್ನಾಗಿಸಿದರು.

ಹಝರತ್ ಮಹಲ್:
ಬ್ರಿಟಿಷರ ವಿರುದ್ಧ ಭಾರತೀಯ ಅರಸೊತ್ತಿಗೆಗಳು ನಿಸ್ಸಹಾಯಕವಾಗಿದ್ದಾಗ ಸಿಡಿದು ಬಂದವರು ಅವಧ್‌ನ ರಾಣಿ ಹಝರತ್ ಮಹಲ್. ಆಕೆ ತನ್ನ ಪುತ್ರ ಬಿರ್‌ಜೀಸ್ ಖಾದರ್ ಪರವಾಗಿ ಆಡಳಿತ ನಡೆಸುತ್ತ್ತಿದ್ದರು. ರಾಜ್ಯದ ಆಗುಹೋಗುಗಳನ್ನು ಹಿಂದೂ-ಮುಸ್ಲಿಮ್ ಪರಾಮರ್ಶ ಸಮಿತಿಯ ಸಲಹೆಗಳ ಮೇರೆಗೆ ನಿರ್ವಹಿಸುತ್ತಿದ್ದರು. ಚೌಲಖಿಯಲ್ಲಿ ಅವರ ನಿವಾಸವಿತ್ತು. ಅಲ್ಲಿಂದಲೇ ಅವರು ತಮ್ಮ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಬ್ರಿಟಿಷರ ಬೆಳವಣಿಗೆಗಳನ್ನು ಗಮನಿಸಿ, ಅವರು ಲಕ್ನೋ ನಗರದ ನಾಲ್ಕೂ ಕಡೆ ರಕ್ಷಣಾ ಗೋಡೆ ಕಟ್ಟಲು ಐದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದರು. ನೇಪಾಳದ ರಾಜನಿಗೆ ಗೋರಖಪುರ, ಆರ, ಅಜಂಗಢ, ಛಾಪರ ಹಾಗೂ ಬನಾರಸಿನ ಕೆಲವೊಂದು ಪ್ರಾಂತಗಳನ್ನು ಕೊಟ್ಟು ಅವರ ಬೆಂಬಲವನ್ನು ಗಳಿಸಿಕೊಂಡರು. ಅವರು ಯುದ್ಧ ಕಲೆಯಲ್ಲಿ ಎಷ್ಟು ನಿಪುಣರಾಗಿದ್ದರು ಎಂಬುದನ್ನು ಅವರ ರಣನೀತಿಗಳಿಂದ ತಿಳಿಯಬಹುದು. ಅಲ್ಲದೆ ಕಾನ್ಪುರದ ಬ್ರಿಟಿಷರ ತುಕಡಿಯಲ್ಲಿದ್ದ ಇಂಡಿಯನ್ ರೆಜಿಮೆಂಟಿನ ಅಧಿಕಾರಿಗಳನ್ನು ಸಂಪರ್ಕಿಸಿ ಮೊದಲು ವಾಯುದಾಳಿ ಮಾಡಿ ಆನಂತರ ತಮ್ಮ ದಾಳಿಯ ದಿಕ್ಕನ್ನು ಬ್ರಿಟಿಷರ ಕಡೆಗೆ ತಿರುಗಿಸಿ ದಾಳಿ ಮಾಡಿ ಎಂದು ಮನವೊಲಿಸಿಕೊಂಡರು.
‘‘ಲಕ್ಷ್ಮೀಬಾಯಿಯಂತೆ ಬೇಗಂ ಹಝರತ್ ಮಹಲ್, ಸ್ತ್ರೀಯರ ಸೈನ್ಯದ ಒಂದು ತುಕಡಿಯನ್ನೇ ಸಂಘಟಿಸಿದ್ದರು. ಈ ಮಹಿಳಾ ಸೈನಿಕರಲ್ಲಿ ಸುಮಾರು ಮಹಿಳೆಯರು ಗೂಢಚಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂತಹ ಅವಿಶ್ವಾಸಪೂರ್ಣ ನಿರಾಶಾಜನಕ ಪರಿಸ್ಥಿತಿಗಳಲ್ಲೂ ಅವಧ್‌ನ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಬಂಡಾಯದ ಜ್ವಾಲೆ ಎರಡೂವರೆ ವರ್ಷಗಳವರೆಗೆ ಉರಿಯುತ್ತಿರಲು ಹಝರತ್ ಮಹಲ್ ಅವರೇ ಕಾರಣ...’’(ಅಮೃತ್ ಲಾಲ್ ನಗರ್, ಗದರ್ ಕೆ ಫೂಲ್-260).
ಹಝರತ್ ಮಹಲ್ ಸುಮಾರು 10 ತಿಂಗಳವರೆಗೆ ಬ್ರಿಟಿಷ್ ಸೈನ್ಯದೊಂದಿಗೆ ಎದೆಗಾರಿಕೆಯಿಂದ ಕಾದಾಡಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಒಂದು ಸುವರ್ಣ ಪರಂಪರೆಯನ್ನು ನಿರ್ಮಿಸಿದ್ದಾರೆ (ತುಫೈಲ್ ಮಂಗಳೂರಿ, ಮುಸಲ್ಮಾನೋ ಕಾ ಕಾಶನ್ ಮುಸ್ತಖ್ ಬಿಲ್, ಪುಟ-71).
ಯುದ್ಧದ ಸಂದರ್ಭದಲ್ಲಿ ಜನರಲ್ ಒಟ್ರಿಮ್ ಸುಮಾರು ಸಂಧಿ ಪ್ರಸ್ತಾವನೆಗಳನ್ನು ನೀಡಿದ್ದರೂ ಅದನ್ನು ಮಹಲ್ ತಿರಸ್ಕರಿಸಿದ್ದರು. ಒಟ್ರಿಮ್‌ನ ಶರತ್ತು ಹೀಗಿತ್ತು ‘‘ಯುದ್ಧವನ್ನು ನಿಲ್ಲಿಸಿದರೆ ಸೋತ ರಾಜ್ಯ ಹಾಗೂ ಸರಕಾರದ ನಡುವಿನ ಒಪ್ಪಂದದ ಪ್ರಕಾರ ಸಂಪತ್ತೆಲ್ಲವನ್ನೂ ನವಾಬ ಶುಜಾಉದೌಲನಿಗೆ ಕೊಡಲಾಗುವುದು ಮತ್ತು ಸೆರೆಹಿಡಿದಿರುವ ಬಂದಿಗಳನ್ನು ಬಿಡುವ ಉಪಾಯ ಮಾಡುವುದು, ಅಲ್ಲದೆ ಕಲ್ಕತ್ತಾ ಹಾಗೂ ಲಂಡನ್ನಿಗೆ ಕಳುಹಿಸಿರುವವರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗುವುದು’’
ಖೈಸರ್‌ಬಾಗ್‌ನಿಂದ ಸೋತು ಹಝರತ್ ಮಹಲ್ ತನ್ನ ಅಳಿದುಳಿದ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾಗ ಒಟ್ರಿಮ್ ಎರಡನೇ ಸಂಧಿಪತ್ರ ಕಳುಹಿಸಿದ್ದ ‘‘ನಾವು ವಾಜಿದ್ ಅಲಿ ಷಾನ ರಾಜ್ಯವನ್ನು ನಿಮಗೆ ಕೊಟ್ಟು ಬಿಡುತ್ತೇವೆ. ಯುದ್ಧದಿಂದ ಹಿಂದೆ ಸರಿಯಿರಿ. ಸೋತ ಸೈನ್ಯದೊಂದಿಗೆ ಪಲಾಯನ ಮಾಡುವುದು ಸರಿಯಲ್ಲ’’ ಆದರೆ ಸಂಧಿ ಪತ್ರಕ್ಕೂ ಸಹಿ ಹಾಕಲು ಮಹಲ್ ತಿರಸ್ಕರಿಸಿದರು. ಮೂರನೆಯ ಸಂಧಿ ಪತ್ರದಲ್ಲಿ ಆಕೆ ತಿಂಗಳಿಗೆ ನಗದು ಹಣವನ್ನು ಇಷ್ಟೆಂದು ಉಡುಗೊರೆ ರೂಪದಲ್ಲಿ ನೀಡುವ ಕೊಡುಗೆ ನೀಡಲಾಗಿತ್ತು. ಆದರೆ ಆಕೆ ಯುದ್ಧವನ್ನೇ ಆಯ್ಕೆ ಮಾಡಿಕೊಂಡರು. ಸ್ವಾಭಿಮಾನ, ಆತ್ಮಾಭಿಮಾನ ಎಲ್ಲಕ್ಕಿಂತ ದೊಡ್ಡದಾಗಿತ್ತು.
ಹಝರತ್ ಮಹಲ್ ಬಳಿಕ ಹತ್ತು ಹಲವು ಸಂಕಷ್ಟಗಳನ್ನು ಎದುರಿಸಿದರು. ಆಸಿಫ್‌ದೌಲಾನ ಭ್ರಾತೃತ್ವದಲ್ಲಿ ಬತೌಲಿ ಪರ್ವತದ ಮೇಲೆ ಆಶ್ರಯ ಪಡೆದಿದ್ದಾಗ ನೇಪಾಳದ ರಾಜ ಅವರಿಗೆ ಹೀಗೆ ಎಚ್ಚರಿಸಿದ ‘‘ನೀವು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಳ್ಳಿ. ಇಲ್ಲವಾದರೆ ಬೇರೆ ಕಡೆ ಹೊರಟು ಹೋಗಿ. ನಮ್ಮಿಂದ ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸಬೇಡಿ. ನಾವು ಬ್ರಿಟಿಷರನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲ’’
ಆಗ ಹಝರತ್ ಮಹಲ್ ಹೀಗೆ ಉತ್ತರವನ್ನು ಕಳುಹಿಸಿದರು ‘‘ಇಲ್ಲಿಂದ ನಾವು ಎಲ್ಲೂ ಹೋಗುವುದಿಲ್ಲ. ಇಲ್ಲಿಂದಲೇ ಬ್ರಿಟಿಷರ ವಿರುದ್ಧ ಹೋರಾಡುತ್ತೇವೆ. ನಾವು ನಿಮ್ಮನ್ನು ನಂಬಿ ಅವರನ್ನು ಎದುರು ಹಾಕಿಕೊಂಡಿಲ್ಲ’’(ಖೈಸರುತ್ತಾವಾರೀಖ್, ಪುಟ 341)
ಸುಮಾರು ಪತ್ರವ್ಯವಹಾರಗಳ ಬಳಿಕ ಕೇವಲ ಹಝರತ್ ಮಹಲ್, ಬಿರ್‌ಜೀಸ್ ಖಾದರ್, ಕೆಲವು ಹೆಂಗಸರು ಹಾಗೂ ಮಕ್ಕಳಿಗೆ ನೇಪಾಳದಲ್ಲಿರಲು ಅನುಮತಿ ನೀಡಲಾಯಿತು. ಆದರೆ ಬೇರೆ ಹೋರಾಟಗಾರರು ಆ ಘೋರಾರಣ್ಯದ ಮೃಗಗಳಿಗೆ ಆಹಾರವಾದರು. ಹಝರತ್ ಮಹಲ್ ಮತ್ತು ಬಿರ್‌ಜೀಸ್ ಖಾದರ್‌ರನ್ನು ತಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಎರಡು ಕಾರಣಗಳಿದ್ದವು. ಒಂದು, ಆಕೆ ಒಬ್ಬ ಮಹಿಳೆಯಾಗಿ ತೋರಿಸಿದ ಅಸಾಧಾರಣ ಸಾಹಸ ಹಾಗೂ ದೃಢ ಸಂಕಲ್ಪಕ್ಕೆ ನೇಪಾಳದ ದೊರೆ ಜಂಗ್ ಬಹದ್ದೂರ್ ಸಹಜವಾಗಿ ಮಾರು ಹೋಗಿದ್ದ. ಎರಡನೆಯ ಕಾರಣ ಅವರು ಭಾರೀ ಪ್ರಮಾಣದಲ್ಲಿ ವಜ್ರ ವೈಢೂರ್ಯಗಳನ್ನು ಕಾಣಿಕೆಯಾಗಿ ನೀಡಿದ್ದರು.(ಮಶರಿಖೀ ತಮದ್ದನ್ ಕಾ ಆಖರಿ ನಮೂನ, ಪುಟ 155)
ಹಝರತ್ ಮಹಲ್ ಜೊತೆಗೆ ಸ್ವಾತಂತ್ರ್ಯದ ಈ ಹೋರಾಟದಲ್ಲಿ ಭಾಗವಹಿಸಿದ ಅನೇಕ ನಾಯಕರು ಅವಧ್ ನಗರವನ್ನು ಬಿಟ್ಟು ಹೋದರೆ, ಇನ್ನೂ ಅನೇಕ ನಾಯಕರು ಬ್ರಿಟಿಷರಿಗೆ ಬಲಿಯಾದರು. ಹಝರತ್ ಮಹಲ್ ಲಕ್ನೋ ತ್ಯಜಿಸಿದ ಆನಂತರ ವೌಲ್ವಿ ಅಹಯದುಲ್ಲಾ ಶಾ ಮೂರು ತಿಂಗಳ ಕಾಲ ಅವರ ಸಂಪರ್ಕದಲ್ಲಿದ್ದರು. ಆದರೆ ಅವರೂ ಬ್ರಿಟಿಷರಿಗೆ ಬಲಿಯಾಗಬೇಕಾಯಿತು. ನೇಪಾಳದಲ್ಲಿ ಹಝರತ್ ಮಹಲ್ ಒಂದು ಅರಮನೆಯನ್ನು ಕಟ್ಟಿ, ಅಲ್ಲಿಂದಲೇ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸಿದರು. 1874ರಲ್ಲಿ ಅದೇ ನೆಲದಲ್ಲಿ ಆಕೆ ಪ್ರಾಣಾರ್ಪಣೆ ಮಾಡಿದರು.
***
ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನಗೈದ ಮುಸ್ಲಿಮ್ ಮಹಿಳೆಯಾಗಿ ಹಝರತ್ ಮೊದಲಿಗಳೂ ಅಲ್ಲ, ಕೊನೆಯವಳೂ ಅಲ್ಲ. ಇಂತಹ ಮಹಿಳೆಯರಲ್ಲಿ ಅಝೀಝಾನ್ ಒಬ್ಬಳು. ಈಕೆಯ ತಂದೆ ಹಸೀನ್ ಖಾನ್. ತಾಯಿ ಹಮೀದಾ ಬೇಗಂ. ಅಝೀಝಾನ್ ಸುಪ್ರಸಿದ್ಧ ನರ್ತಕಿ ಉಮ್ರಾವ್ ಜಾನ್‌ಳ ಸಾರಂಗಿ ಅರಮನೆಯಲ್ಲಿದ್ಧಳು. ಕೆಲವೊಂದು ಮೂಲಗಳು ಹೇಳುವಂತೆ ಬ್ರಿಟಿಷರ ಸೈನ್ಯದಲ್ಲಿ ಸುಬೇದಾರನಾಗಿದ್ದು ಅನಂತರ ನಾನಾ ಸಾಹೇಬ ಪೇಶ್ವೆಯರ ಗುಂಪಿನೊಂದಿಗೆ ಸೇರಿಕೊಂಡ ಶಂಸುದ್ದೀನ್ ಎಂಬವನನ್ನು ಈಕೆ ಪ್ರೀತಿಸಿದಳು. ಈ ಕಾರಣದಿಂದ ಬಳಿಕ ಶಂಸುದ್ದೀನ್ ಜೊತೆಗೆ ಕಾನ್ಪುರಕ್ಕೆ ಬಂದು ನೆಲೆಸಿದಳು. ನಾನಾ ಸಾಹೇಬನ ಕರೆಯಂತೆ, ತನ್ನ ಸ್ನೇಹಿತರೊಂದಿಗೆ ಯುದ್ಧ ರಂಗಕ್ಕೆ ಧುಮುಕಿದಳು. ಶಂಸುದ್ದೀನ್ ಸಹಕಾರದಿಂದ ಸ್ತ್ರೀಯರ ಒಂದು ಚಿಕ್ಕ ಸೈನ್ಯವನ್ನು ತರಬೇತುಗೊಳಿಸಿದಳು. ಮನೆಮನೆಗೆ ಹೋಗಿ ಹೆಂಗಸರಿಗೆ ಕುದುರೆ ಸವಾರಿ, ಶಸ್ತ್ರಾಭ್ಯಾಸಗಳನ್ನು ಮಾಡಿಸುತ್ತಿದ್ದಳು. ಒಂದು ಸೇನಾ ತುಕಡಿಯ ನಾಯಕಿಯಾಗಿದ್ದಳು.
ಅಝೀಝಾನ್ ‘ಇಂಕ್ವಿಲಾಬ್’ ತಂಡದ ಸಕ್ರಿಯ ಸದಸ್ಯೆಯಾಗಿದ್ದರು. ನಾನಾ ಸಾಹೇಬರ ಬಲಗೈ ಭಂಟ ಎನಿಸಿಕೊಂಡಿದ್ದ ಅಝೀಮುಲ್ಲಾ ಖಾನ್ ಮತ್ತು ತಾತ್ಯಾ ಟೋಪಿಗೆ ಅಝೀಝಾನ್ ಮೇಲೆ ಅಪಾರ ವಿಶ್ವಾಸವಿತ್ತು. ಆದರೆ ಬೇರೆಲ್ಲ ದಂಗೆಗಳಂತೆ 1857ರ ಕಾನ್ಪುರದ ದಂಗೆ ವಿಫಲಗೊಂಡಾಗ, ಕರ್ನಲ್ ವಿಲಿಯಂ ಸಿದ್ಧಪಡಿಸಿದ ವಿದ್ರೋಹಿಗಳ ಪಟ್ಟಿಯಲ್ಲಿ ಅಝೀಝಾನ್ ಹೆಸರು ಮೊದಲನೆಯದಾಗಿತ್ತು. ಅಝೀಝಾನ್‌ಳನ್ನು ಬಂಧಿಸಿ ಜನರಲ್ ಹ್ಯೂಲಕ್ ಮುಂದೆ ತಂದು ನಿಲ್ಲಿಸಿದಾಗ ಆಕೆಯ ಸೌಂದರ್ಯಕ್ಕೆ ಹ್ಯೂಲಕ್ ದಂಗಾಗಿ ಹೋದನಂತೆ. ಆಕೆಯ ಸೌಂದರ್ಯಕ್ಕೆ ಮಾರು ಹೋಗಿ, ಕ್ಷಮೆಯಾಚಿಸಿದರೆ ಆರೋಪಗಳನ್ನೆಲ್ಲಾ ಹಿಂದೆೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದ.
ಬ್ರಿಟಿಷರು ಒಡ್ಡಿದ ಆಮಿಷಕ್ಕೆ ಬಲಿಯಾದರೆ, ಅಳಿದುಳಿದ ಕ್ರಾಂತಿಕಾರಿ ಸಹೋದರರ ಉತ್ಸಾಹ ಕುಗ್ಗಿ ಅವರು ಬಲಹೀನರಾಗುತ್ತಾರೆ ಎಂಬ ಎಚ್ಚರಿಕೆ ಆಕೆಗಿತ್ತು. ಆದುದರಿಂದ ಹ್ಯೂಲಕ್ ಆಮಿಷವನ್ನು ಅಝೀಝಾನ್ ತಿರಸ್ಕರಿಸಿದರು.
ಹ್ಯೂಲಕ್ ಹತಾಶನಾಗಿ ‘‘ನಿನ್ನ ಉದ್ದೇಶವೇನು?’’ ಎಂದು ಕೇಳಿದನಂತೆ.
‘‘ಬ್ರಿಟಿಷ್ ಸಾಮ್ರಾಜ್ಯವನ್ನು ಕಿತ್ತೊಗೆಯುವುದು’’ ಆಕೆ ಉತ್ತರಿಸಿದಳಂತೆ.
ಒಲ್ಲದ ಮನಸ್ಸಿನಿಂದ ಹ್ಯೂಲಕ್ ಸೈನಿಕರಿಗೆ ಫಯರ್ ಮಾಡಲು ಆದೇಶಿಸಿದ. ಮೊದಲ ಫೈರಿಂಗ್‌ಗೆ ಆಕೆಯ ಕೂಗು ಮುಗಿಲು ಮುಟ್ಟಿತು ‘‘ನಾನಾ ಸಾಹೇಬ್ ಜಿಂದಾಬಾದ್’’ ಅಝೀಝಾನ್ ಒಂದು ಅವಿಸ್ಮರಣೀಯ ನೆನಪಾಗಿದ್ದಾಳೆ. ಬಿಧೋರಿನ ಪ್ರತಿಯೊಂದು ಊಹಿನಲ್ಲೂ ಆಕೆಯ ಶೌರ್ಯ, ಕಾರ್ಯಕ್ಷಮತೆ, ಬಲಿದಾನಗಳ ಕಥೆಗಳನ್ನು ಸುಮಾರು ವರ್ಷಗಳವರೆಗೂ ಸ್ಮರಿಸಲಾಗುತ್ತಿತ್ತು.
***
ಥಾನ ಭವನದ ದಂಗೆಕೋರ ಸೈನ್ಯದ ಮುಖಂಡ ಅಬ್ದುಲ್ ರೆಹಮಾನ್‌ರ ತಾಯಿ ಅಸ್ಗರಿ ಬೇಗಂ 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟರು. ಆಕೆಯನ್ನು ಜೀವಂತ ಸುಡಲಾಯಿತು. ಮುಸ್ಲಿಮ್ ಗುಜರ್ ಪರಿವಾರಕ್ಕೆ ಸೇರಿದ ಹಬೀಬಾ ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಡಿದ ಆರೋಪದಲ್ಲಿ 1857ರಲ್ಲಿ ಗಲ್ಲಿಗೇರಿಸಲ್ಪಟ್ಟರು.
 ಮುಸ್ಲಿಮ್ ರಜಪೂತ ಪರಿವಾರದಿಂದ ಬಂದ ರಹೀಮಿ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇನ್ನೊಂದು ಹೆಸರು. ಈಕೆಯನ್ನೂ ಗಲ್ಲಿಗೇರಿಸಲಾಯಿತು. ಈಕೆಯ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡಿದ ಸುಮಾರು ಇನ್ನೂರ ಎಪ್ಪತ್ತೈದು ಮಹಿಳೆಯರು ಪ್ರಾಣವನ್ನು ಕಳೆದುಕೊಂಡರು. ಹನ್ನೊಂದು ಮಹಿಳೆಯರನ್ನು ಗಲ್ಲಿಗೇರಿಸಲಾಯಿತು.
 ‘ಬೀ ಅಮ್ಮ’ ಸ್ವಾತಂತ್ರ್ಯಾ ಹೋರಾಟದ ಉಮ್ಮಾ ಎಂದೇ ಕರೆಯಲ್ಪಟ್ಟವರು. ಬೀ ಅಮ್ಮ ಅವರ ನಿಜವಾದ ಹೆಸರು ಆಬಾದಿ ಬಾನು. ಇವರು ಅಮರೋಹ ಜಿಎ ಮುರಾದಾಬಾದಿನ ನಿವಾಸಿಯಾಗಿದ್ದರು. ಮುಸ್ಲಿಮ್ ಲೀಗ್ ಸಹಿತ ವಿವಿಧ ಸಂಘಟನೆಗಳ ಜೊತೆಗೆ ನಂಟು ಬೆಸೆಯುತ್ತಾ ಸುಮಾರು 27 ವರ್ಷಗಳನ್ನು ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸವೆಸಿದರು. ಮಹಾತ್ಮಾಗಾಂಧೀಜಿ ಸೇರಿದಂತೆ ಹಲವು ನಾಯಕರ ಮೇಲೆ ಇವರು ತಮ್ಮ ಪ್ರಭಾವವನ್ನು ಬೀರಿದ್ದರು. ಇವರು ನಿಧನರಾಗಿದ್ದಾಗ ಮಹಾತ್ಮಾಗಾಂಧೀಜಿ ಹೀಗೆ ಬರೆಯುತ್ತಾರೆ ‘‘ಬೀ ಅಮ್ಮ ಸಾವನ್ನಪ್ಪಿದ್ದಾರೆ ಎಂದು ಊಹಿಸುವುದು ಕಷ್ಟವಾಗಿದೆ. ಅವರ ಧೈರ್ಯ, ನಿಷ್ಠೆ, ದೇಶಭಕ್ತಿ ಪ್ರಾಮಾಣಿಕತೆಯ ಮಹಿಮೆಯನ್ನು ಕೇಳರಿಯದವರು ಯಾರಿದ್ದಾರೆ? ಅವರು ಮೃತರಾದ ರಾತ್ರಿ ನಾನು ಅವರ ಬಳಿಯೇ ಇದ್ದೆ. ಇದು ನನ್ನ ಸೌಭಾಗ್ಯ. ವಿಷಯ ತಿಳಿದ ತಕ್ಷಣ ನಾನು ಮತ್ತು ಸರೋಜಿನಿ ಅಲ್ಲಿಗೆ ತಲುಪಿದೆವು. ವೌಲಾನ ಮುಹಮ್ಮದ್ ಅಲಿ ಅಳುತ್ತಿದ್ದರು. ಆದರೆ ಶೌಕತ್ ಅಲಿ ವೌನವಾಗಿ ನಿಂತಿದ್ದರು.ಅವರು ದುಃಖವನ್ನು ನುಂಗಿಕೊಂಡು ಭಗವಂತನನ್ನು ಸ್ಮರಿಸುತ್ತಿದ್ದರು. ಕಾಮ್ರೇಡ್ ಪ್ರೆಸ್ ಬೀ ಅಮ್ಮರ ಕೊಠಡಿಯ ಪಕ್ಕದಲ್ಲೇ ಇತ್ತು. ಆದರೆ ಅದರ ಕೆಲಸ ಒಂದು ಕ್ಷಣಕ್ಕೂ ನಿಲ್ಲಲಿಲ್ಲ. ವೌಲಾನ ಮುದ್ರಣದ ಕೆಲಸವನ್ನೂ ನಿಲ್ಲಿಸಿರಲಿಲ್ಲ....’’
ಅನಿಬೆಸೆಂಟ್ ತಮ್ಮ ಶೋಕ ಸಂದೇಶದಲ್ಲಿ ಹೀಗೆಂದು ಹೇಳಿದರು ‘‘...ನಾನು ಸಹ ಎಲ್ಲರಂತೆ ಇವರ ಶ್ರದ್ಧಾಂಜಲಿಯಲ್ಲಿ ಭಾಗಿಯಾಗುತ್ತೇನೆ. ಈ ಧರ್ಮನಿಷ್ಠ ಸಿಂಹಿಣಿ ಯಾವುದೇ ಗಂಡಾಂತರಗಳಿಗೂ ಹೆದರಲಿಲ್ಲ. ತನ್ನ ನಂಬಿಕೆಯ ಎದುರು ಈ ಲೋಕದ ಯಾವ ವಸ್ತುವಿಗೂ ಪ್ರಾಧಾನ್ಯತೆ ನೀಡಲಿಲ್ಲ...’’
ಸ್ವಾಮಿ ಶ್ರದ್ಧಾನಂದರು ಹೀಗೆಂದು ಶೋಕ ವ್ಯಕ್ತಪಡಿಸಿದ್ದಾರೆ ‘‘ಎಲ್ಲರೂ ಬಲ್ಲಂತೆ ಅಲಿ ಸಹೋದರರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಆದುದರಿಂದ ಅವರ ತಾಯಿ ಅವರೊಂದಿಗೆ ಸೇರಿಕೊಂಡರು ಎಂದು. ಆದರೆ ನನ್ನ ಅನುಭವ ಹೇಳುವುದೇ ಬೇರೆ. ನಿಜವಾದ ಹಿಂದೂ-ಮುಸ್ಲಿಮ್ ಸೌಹಾರ್ದದದ ಕಳಕಳಿ ಇದ್ದುದು ಬೀ ಅಮ್ಮ ಅವರ ಹೃದಯದಲ್ಲಿ. ಅವರ ಈ ಸ್ವಭಾವ ಈಗ ಮುಹಮ್ಮದ್ ಅಲಿ ಹಾಗೂ ಶೌಕತ್ ಅಲಿ ಅವರ ಹೃದಯಗಳಲ್ಲಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ತೋರಿದ ಧೈರ್ಯ, ಸಾಹಸಕ್ಕಿಂತ ಹೆಚ್ಚಿನದನ್ನು ಬೇರಾವ ರಾಜಕೀಯ ಧುರೀಣರೂ ತೋರಿಸಲು ಸಾಧ್ಯವಿರಲಿಲ್ಲ.
***
ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮುಸ್ಲಿಮ್ ಮಹಿಳೆಯರ ಸಂಖ್ಯೆ ಸಹಸ್ರಾರು. ಅವರಲ್ಲಿ ಮುಖ್ಯರಾದವರು ಬೇಗಂ ಹಸರತ್ ಮೊಹಾನಿ, ಅಮ್ಜದಿ ಬೇಗಂ, ಸೌದತ್ ಬಾನು ಕಿಚಲು, ಬೇಗಂ ಖುರ್ಷಿದಾ ಖ್ವಾಜ, ಝುಲೇಖಾ ಬೇಗಂ, ಜಾಹಿದಾ ಖಾತುನ್ ಶೆರ್‌ವಾನಿಯಾ, ಖದೀಜಾಬೇಗಂ, ಜುಬೇದಾ ಬೇಗಂ, ಕನೀಜಾ ಸೈಯದಾ ಬೇಗಂ, ಮುನೀರಾ ಬೇಗಂ, ಇಸ್ಮತ್ ಆರಾ ಬೇಗಂ, ರೊಹರಾ ಖಾತುನ್, ಆಮನ ಖುರೈಷಿ, ಫಾತಿಮಾ ಆರೀಜಿ, ಆಮಿನಾ ತೈಯಬ್‌ಜೀ, ಬೇಗಂ ಸಕೀನಾ ಲುಖ್ಮಾನಿ, ರೊಹರಾ ಅನ್ಸಾರಿ....ಹೀಗೆ ಬರೆದಷ್ಟು ಮುಗಿಯದ ಹೆಸರುಗಳಿವೆ.

ಆಕರ ಗ್ರಂಥ: ಡಾ. ಆಬಿದಾ ಸಮೀಉದ್ದೀನ್ ಅವರ ‘ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News