ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್‌ ರನ್ನು ದೇಶದಿಂದ ಹೊರಹಾಕಲು ಮಲೇಶ್ಯ ಸಚಿವರ ಆಗ್ರಹ

Update: 2019-08-15 11:15 GMT

ಕೌಲಲಾಂಪುರ, ಆ.15: ಭಾರತದ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್‌ ಅವರಿಗೆ ಮಲೇಶ್ಯದಲ್ಲಿ ಶಾಶ್ವತ ಪೌರತ್ವ ನೀಡುವ ವಿಚಾರದ ಬಗ್ಗೆ ಮಲೇಶ್ಯದ ಸಚಿವ ಸಂಪುಟ ಬುಧವಾರ ಚರ್ಚೆ ನಡೆಸಿದ್ದು ಜನಾಂಗೀಯ ಭಾವನೆಗೆ ಘಾಸಿ ತರುವ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಝಾಕಿರ್ ನಾಯ್ಕ್‌ ‌ರನ್ನು ದೇಶದಿಂದ ಹೊರಹಾಕಬೇಕೆಂದು ಮೂವರು ಸಚಿವರು ಆಗ್ರಹಿಸಿದ್ದಾರೆ.

ಭಾರತದಲ್ಲಿ ದ್ವೇಷ ಭಾಷಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ಝಾಕಿರ್ ನಾಯ್ಕ್‌ ಸುಮಾರು 3 ವರ್ಷದಿಂದ ಮಲೇಶ್ಯಾದಲ್ಲಿ ವಾಸಿಸುತ್ತಿದ್ದಾರೆ. ಮಲೇಶ್ಯಾದಲ್ಲಿ ಹಿಂದುಗಳು ಭಾರತದ ಅಲ್ಪಸಂಖ್ಯಾತ ಮುಸ್ಲಿಮರಿಗಿಂತ 100 ಪಟ್ಟು ಹೆಚ್ಚು ಹಕ್ಕುಗಳನ್ನು ಹೊಂದಿದ್ದಾರೆ ಎಂದು ನಾಯ್ಕ್‌ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮಲೇಶ್ಯಾದಲ್ಲಿ ಧರ್ಮ ಮತ್ತು ಜಾತಿ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು 32 ಮಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಶೇ.60ರಷ್ಟು ಮುಸ್ಲಿಮರು. ಉಳಿದವರು ಚೀನಾ ಮತ್ತು ಭಾರತ ಮೂಲದವರಾಗಿದ್ದು ಇವರಲ್ಲಿ ಹೆಚ್ಚಿನವರು ಹಿಂದುಗಳಾಗಿದ್ದಾರೆ. ಮಲೇಶ್ಯಾದಲ್ಲಿರುವ ಮುಸ್ಲಿಮ್ ಮತ್ತು ಮುಸ್ಲಿಮೇತರರ ಮಧ್ಯೆ ದ್ವೇಷ ಹುಟ್ಟಿಸುವ ಉದ್ದೇಶದ ಹೇಳಿಕೆ ಇದಾಗಿದೆ ಎಂದು ಮಲೇಶ್ಯದ ಸಚಿವರು ಹೇಳಿದ್ದಾರೆ.

 ಆದರೆ ಇದನ್ನು ನಿರಾಕರಿಸಿರುವ ನಾಯ್ಕ್‌, ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದ್ದು ಇದು ತನ್ನ ಹೆಸರು ಕೆಡಿಸುವ ಉದ್ದೇಶದಿಂದ ವಿರೋಧಿಗಳು ಮಾಡಿರುವ ಷಡ್ಯಂತ್ರವಾಗಿದೆ. ಮಲೇಶ್ಯ ಸರಕಾರ ಮುಸ್ಲಿಮ್ ಮತ್ತು ಹಿಂದು ಅಲ್ಪಸಂಖ್ಯಾತರನ್ನು ಸಮಾನವಾಗಿ ಕಾಣುತ್ತಿದ್ದು ಶ್ಲಾಘನೀಯವಾಗಿದೆ ಎಂಬ ತನ್ನ ಹೇಳಿಕೆಯನ್ನು ರಾಜಕೀಯ ಕಾರಣಕ್ಕಾಗಿ ತಿರುಚಲಾಗಿದೆ ಎಂದು ನಾಯ್ಕ್‌ ಹೇಳಿದ್ದಾರೆ.

ಸಭೆಯಲ್ಲಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಝಾಕಿರ್ ಮಲೇಶ್ಯಾದಲ್ಲಿ ವಾಸಿಸಲು ಬಿಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ಇದನ್ನು ಪ್ರಧಾನಿಯ ಗಮನಕ್ಕೆ ತಂದಿದ್ದು ಈ ಬಗ್ಗೆ ಅವರು ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯಿದೆ ಎಂದು ಮಲೇಶ್ಯಾದ ಸಂಪರ್ಕ ಮತ್ತು ಮಲ್ಟಿಮೀಡಿಯ ಇಲಾಖೆಯ ಸಚಿವ ಗೋಬಿಂದ್ ಸಿಂಗ್ ದಿಯೊ ಹೇಳಿದ್ದಾರೆ.

ಝಾಕಿರ್ ನಾಯ್ಕ್‌ ರನ್ನು ಉಚ್ಛಾಟಿಸಬೇಕೆಂದು ಮಾನವ ಸಂಪನ್ಮೂಲ ಸಚಿವ ಎಂ. ಕುಲಸೇಗರನ್, ಜಲ, ಭೂಮಿ ಮತ್ತು ಪ್ರಾಕೃತಿಕ ಸಂಪನ್ಮೂಲ ಇಲಾಖೆ ಸಚಿವ ಕ್ಸೇವಿಯರ್ ಜಯಕುಮಾರ್ ಅವರೂ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News