ಕೋಲ್ಕತಾ ನೈಟ್ ರೈಡರ್ಸ್‌ಗೆ ಬ್ರೆಂಡನ್ ಮೆಕಲಮ್ ಕೋಚ್

Update: 2019-08-15 11:53 GMT

ಮುಂಬೈ, ಆ.15: ಕೋಲ್ಕತಾ ನೈಟ್ ರೈಡರ್ಸ್ ತಂಡ ಇತ್ತೀಚೆಗೆ ನಿವೃತ್ತಿಯಾಗಿರುವ ಬ್ರೆಂಡನ್ ಮೆಕಲಮ್‌ರನ್ನು 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್)ತನ್ನ ಮುಖ್ಯ ಕೋಚ್ ಆಗಿ ನೇಮಿಸಿದೆ.

ಮೆಕಲಮ್ ಕೆಕೆಆರ್ ತಂಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. 2008ರಿಂದ 2010ರ ಆ ತಂಡದ ಆಟಗಾರನಾಗಿದ್ದ ಮೆಕಲಮ್ 2012-2013ರಲ್ಲಿ ಮತ್ತೊಮ್ಮೆ ಆ ತಂಡವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಐಪಿಎಲ್ ಪ್ರಶಸ್ತಿ ಜಯಿಸಿದ್ದ ಕೆಕೆಆರ್ ತಂಡದಲ್ಲಿದ್ದರು.

ಮೆಕಲಮ್ ಸಿಪಿಎಲ್‌ನಲ್ಲಿ 2016ರಿಂದ 2018ರ ತನಕ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್)ತಂಡದ ಭಾಗವಾಗಿದ್ದರು. ಈ ಅವಧಿಯಲ್ಲಿ ಟಿಕೆಆರ್ 2017 ಹಾಗೂ 2018ರಲ್ಲಿ ಸತತ ಚಾಂಪಿಯನ್‌ಶಿಪ್‌ನ್ನು ಜಯಿಸಿತ್ತು.

‘‘ಈ ಜವಾಬ್ದಾರಿ ಪಡೆಯುವುದು ಒಂದು ಮಹಾಗೌರವವಾಗಿದೆ. ಐಪಿಎಲ್ ಹಾಗೂ ಸಿಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಒಂದು ಐಕಾನಿಕ್ ಆಗಿದ್ದು, ಫ್ರಾಂಚೈಸಿ ಆಧರಿತ ಕ್ರಿಕೆಟ್‌ನಲ್ಲಿ ತನ್ನದೇ ಗುಣಮಟ್ಟ ಕಾಯ್ದುಕೊಂಡಿದೆ. ಕೆಕೆಆರ್ ಹಾಗೂ ಟಿಕೆಆರ್‌ನಲ್ಲಿ ನಮ್ಮದು ಅತ್ಯುತ್ತಮ ತಂಡಗಳಿವೆ. ನಾನು ಸಹಾಯಕ ಸಿಬ್ಬಂದಿ ಜೊತೆಗೂಡಿ ಉಭಯ ಫ್ರಾಂಚೈಸಿಗಳು ಯಶಸ್ಸು ಕಾಣಲು ನೆರವಾಗುತ್ತೇನೆ’’ ಎಂದು ಮೆಕಲಮ್ ಹೇಳಿದ್ದಾರೆ.

‘‘ಬ್ರೆಂಡನ್ ಮೆಕಲಮ್ ದೀರ್ಘ ಸಮಯದಿಂದ ನೈಟ್ ರೈಡರ್ಸ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ನಾಯಕತ್ವದ ಗುಣ, ಪ್ರಾಮಾಣಿಕತೆ, ಧನಾತ್ಮಕ ಹಾಗೂ ಆಕ್ರಮಣಕಾರಿ ಶೈಲಿ, ತಂಡಗಳಿಂದ ಶ್ರೇಷ್ಠ ಪ್ರದರ್ಶನ ಹೊರತೆಗೆಯಬಲ್ಲ ನೈಜ ಸಾಮರ್ಥ್ಯವು ಕೆಕೆಆರ್ ಹಾಗೂ ಟಿಕೆಆರ್ ತಂಡಗಳಿಗೆ ಮುಖ್ಯಕೋಚ್ ಆಗಿ ಆಯ್ಕೆ ಮಾಡಲು ಪೂರಕವಾಗಿದ್ದವು’’ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News