ಪರೀಕ್ಷಾ ಶುಲ್ಕ ಏರಿಕೆ ಸರಿಯೇ ?

Update: 2019-08-15 18:22 GMT

ಮಾನ್ಯರೇ,
  
 ‘‘ಶಿಕ್ಷಣವೆಂಬುದು ಹುಲಿಯ ಹಾಲಿದ್ದ ಹಾಗೆ. ಇದನ್ನು ಕುಡಿದವನು ಘರ್ಜಿಸಲೇ ಬೇಕು’’ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಅಂತಹ ಶಿಕ್ಷಣವು ಪ್ರತಿ ಮಕ್ಕಳಿಗೂ ದೊರಕಬೇಕೆಂಬುದು ಎಲ್ಲರ ಆಶಯ. ಈ ಆಶಯಕ್ಕೆ ಸರಕಾರಗಳೂ ಸೂಕ್ತವಾಗಿ ಸ್ಪಂದಿಸಿದರೆ ಮಾತ್ರ ಈ ಆಶಯ ಕಾರ್ಯಗತವಾಗಲು ಸಾಧ್ಯ. ಆದರೆ, ಸರಕಾರಗಳೇ ವಿದ್ಯಾರ್ಥಿಗಳ ಶುಲ್ಕ ಏರಿಸುವುದರ ಮೂಲಕ ಅವರ ಕಲಿಕೆಯ ಆಸಕ್ತಿಗೆ ತಣ್ಣೀರು ಎರಚಿದರೆ ಬಡಮಕ್ಕಳು ಕಲಿಯಲು ಸಾಧ್ಯವೇ? ಇತ್ತೀಚೆಗೆ, ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ವಂಡಳಿ (ಸಿಬಿಎಸ್‌ಸಿ) 10 ಮತ್ತು 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ರೂ. 1,200 ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ. 1,500ದ ವರೆಗೆ ದುಬಾರಿ ಮಟ್ಟದಲ್ಲಿ ಏರಿಸಿದೆ. ಮಾನವ ಸಂಪನ್ಮೂಲ ಉನ್ನತಮಟ್ಟಕ್ಕೆ ಏರಬೇಕಾದರೆ ಅದು ಪ್ರತಿ ಮಕ್ಕಳ ಕಲಿಕೆಯಿಂದ ರೂಪಿತಗೊಳ್ಳುತ್ತದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕರ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾದುದು ಶಿಕ್ಷಣ ಮತ್ತು ಆರೋಗ್ಯ. ಇವೆರಡನ್ನು ಉಚಿತವಾಗಿ ನೀಡಬೇಕಾದದ್ದು ಸರಕಾರದ ಕರ್ತವ್ಯ. ಸಂವಿಧಾನ ಕಲಂ 21ಎ ಪ್ರಕಾರ ಪ್ರತಿ ಮಗುವಿಗೆ 6 ವರ್ಷದಿಂದ 14 ವರ್ಷದವರೆಗೆ ಉಚಿತ ಶಿಕ್ಷಣ ನೀಡಬೇಕು ಎಂದು ಹೇಳುತ್ತದೆ. ಅದರನ್ವಯ ಆರ್‌ಟಿಇ ಶಿಕ್ಷಣ ಕಾಯ್ದೆಯೂ ಕೂಡ ಅನುಕೂಲ ಮಾಡಿಕೊಡುತ್ತದೆ. ಆದರೆ, ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಸೀಟನ್ನು ಹೆಚ್ಚಿಸುವಿಕೆಯ ಪ್ರಕ್ರಿಯೆಯೂ ಕುಂಠಿತಗೊಂಡಿರುವುದರಿಂದ ದುಬಾರಿ ವೆಚ್ಚದ ಖಾಸಗಿ ಶಾಲೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮಗುವಿನ ಪ್ರವೇಶ ಶುಲ್ಕ, ಖಾಸಗಿ ಶಾಲೆಯ ಅಭಿವೃದ್ಧಿ ಶುಲ್ಕ, ಶಿಕ್ಷಣ ಚಟುವಟಿಕೆಯ ಶುಲ್ಕ ಮತ್ತು ಮಕ್ಕಳ ಪೋಷಣೆ ಜವಾಬ್ದಾರಿಯ ದುಬಾರಿ ವೆಚ್ಚವನ್ನು ಪೋಷಕರು ಕಷ್ಟಸಾಧ್ಯದಲ್ಲಿ ನಡೆಸುತ್ತಿದ್ದಾರೆ. ಈ ನಡುವೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಪರೀಕ್ಷಾ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿರುವುದು ಶಿಕ್ಷಣವನ್ನು ಒಂದು ರೀತಿಯ ಉದ್ದಿಮೆಯಂತೆ ಕಾಣಲಾಗುತ್ತಿದೆಯೇ ಎಂದು ಅನಿಸುತ್ತದೆ. ಶಿಕ್ಷಣವು ಪ್ರತಿ ಮಗುವಿಗೆ ಯಾವುದೇ ತಾರತಮ್ಯ ಅಥವಾ ಹೊರೆಯಾಗಬಾರದು. ಶಿಕ್ಷಣವು ನಮ್ಮ ದೇಶ ಕಟ್ಟುವಿಕೆಯಲ್ಲಿ ಭದ್ರಬುನಾದಿಯನ್ನೊದಗಿಸಬೇಕು. ಅಂತಹ ಶಿಕ್ಷಣವನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡದೆ ಎಲ್ಲರಿಗೂ ದೊರಕುವಂತಾಗಲು ಸರಕಾರಗಳು ಇನ್ನಾದರೂ ಪ್ರಯತ್ನಿಸಿಯಾವೇ?

-ಪುನೀತ್ ಎನ್., ಅಶೋಕಪುರಂ, ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News