ಶ್ರೀಲಂಕಾಕ್ಕೆ ಅಜಾಝ್ ಪಟೇಲ್ ಕಡಿವಾಣ

Update: 2019-08-15 18:32 GMT

ಗಾಲೆ, ಆ.15: ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಶ್ರೀಲಂಕಾದ ಅಗ್ರ ಸರದಿಯ ಬ್ಯಾಟ್ ್ಸಮನ್‌ಗಳನ್ನು ಕಾಡಿದ ನ್ಯೂಝಿಲ್ಯಾಂಡ್ ಸ್ಪಿನ್ನರ್ ಅಜಾಝ್ ಪಟೇಲ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

ಎರಡನೇ ದಿನವಾದ ಗುರುವಾರ ನ್ಯೂಝಿಲ್ಯಾಂಡ್‌ನ ಮೊದಲ ಇನಿಂಗ್ಸ್ 249 ರನ್‌ಗೆ ಉತ್ತರಿಸಹೊರಟಿರುವ ಶ್ರೀಲಂಕಾ ತಂಡ ಪಟೇಲ್ ಪರಾಕ್ರಮಕ್ಕೆ (5-76)ತತ್ತರಿಸಿ 227 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇನ್ನೂ 22 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡಿಮುತ್ ಕರುಣರತ್ನೆ (39) ಹಾಗೂ ಲಹಿರು ತಿರಿಮನ್ನೆ (10)ಹೊಸ ಚೆಂಡಿನ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಅವರನ್ನು ತಾಳ್ಮೆಯಿಂದ ಎದುರಿಸಿದರು. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ 11ನೇ ಓವರ್‌ನಲ್ಲಿ ದಾಳಿಗಿಳಿದ ಭಾರತ ಮೂಲದ ಎಡಗೈ ಸ್ಪಿನ್ನರ್ ಪಟೇಲ್ ತಾನೆಸೆದ ಮೊದಲ ಓವರ್‌ನಲ್ಲೇ ತಿರಿಮನ್ನೆ ವಿಕೆಟ್ ಪಡೆದರು. ಕರುಣರತ್ನೆ ಮುಂದಿನ ಓವರ್‌ಗೆ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಆಗ ಶ್ರೀಲಂಕಾದ ಸ್ಕೋರ್ 2 ವಿಕೆಟ್‌ಗೆ 66.

ಕುಸಾಲ್ ಮೆಂಡಿಸ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ 3ನೇ ವಿಕೆಟ್ ಜೊತೆಯಾಟದಲ್ಲಿ 77 ರನ್ ಸೇರಿಸಿದರು. 10ನೇ ಅರ್ಧಶತಕ ಪೂರೈಸಿದ ಬೆನ್ನಿಗೆ ಮೆಂಡಿಸ್(53)47ನೇ ಓವರ್‌ನಲ್ಲಿ ಪಟೇಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

 ಮೂವರು ಬ್ಯಾಟ್ಸ್‌ಮನ್‌ಗಳಾದ ಧನಂಜಯ ಸಿಲ್ವಾ, ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ಅಕಿಲ ಧನಂಜಯ ಆರು ರನ್ ಅಂತರದಲ್ಲಿ ಔಟಾದಾಗ ಶ್ರೀಲಂಕಾದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಆಗ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ನಿರೊಶನ್ ಡಿಕ್ವೆಲ್ಲಾ(ಔಟಾಗದೆ 39) ಹಾಗೂ ಸುರಂಗ ಲಕ್ಮಲ್(ಔಟಾಗದೆ 28) 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಇದಕ್ಕೂ ಮೊದಲು ಔಟಾಗದೆ 86 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ರಾಸ್ ಟೇಲರ್ ಇಂದು ತಾನೆದುರಿಸಿದ ಮೊದಲ ಎಸೆತದಲ್ಲೇ ಔಟಾಗಿ 19ನೇ ಶತಕದಿಂದ ವಂಚಿತರಾದರು. ಲಕ್ಮಲ್ (4-29) ಟೇಲರ್ ವಿಕೆಟ್ ಪಡೆಯಲು ಯಶಸ್ವಿಯಾದರು. ಮೊದಲ ದಿನ ಅಕಿಲ ಧನಂಜಯ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ಎರಡನೇ ದಿನ ಲಕ್ಮಲ್ ಕಿವೀಸ್‌ನ ಕೆಳ ಕ್ರಮಾಂಕದ ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆಕಳುಹಿಸಿ ಗಮನಾರ್ಹ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News