ಒಕ್ಕೂಟ ವ್ಯವಸ್ಥೆಯ ಮೌಲ್ಯ

Update: 2019-08-15 18:32 GMT

ಎಲ್ಲವನ್ನೂ ತನ್ನ ಕಟ್ಟುನಿಟ್ಟಿನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಬಯಕೆಗಳು ಕೆಲವೊಮ್ಮೆ ಸಾಧ್ಯವೂ ಆಗುವುದಿಲ್ಲ ಹಾಗೂ ಕೆಲವೊಮ್ಮೆ ಪ್ರತಿಕೂಲ ಪರಿಣಾಮಗಳನ್ನೂ ಉಂಟು ಮಾಡಬಹುದು. ತನ್ನೆಲ್ಲಾ ಗಮನವನ್ನು ಕಾಶ್ಮೀರದ ಸಂಘರ್ಷದ ಮೇಲೆ ಕೇಂದ್ರೀಕರಿಸುವ ಮೂಲಕ ಸರಕಾರವು ಇನ್ನಿತರ ಹಾಗೂ ಇನ್ನೂ ಹೆಚ್ಚಿನ ಸಂಘರ್ಷಕಾರಿ ತಾಣಗಳಾದ ಕೃಷಿ, ಉದ್ಯೋಗ ಮತ್ತು ನಗರಾಡಳಿತಗಳಂತಹ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ.


ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜನೆ ಮಾಡಿದ ಕೇಂದ್ರ ಸರಕಾರದ ದಿಢೀರ್ ಕ್ರಮಗಳು ಏಕಕಾಲದಲ್ಲಿ ಪ್ರಶಂಸೆಗಳನ್ನೂ ಮತ್ತು ಹಲವಾರು ಟೀಕೆಗಳನ್ನು ಹುಟ್ಟುಹಾಕಿರುವುದು ಸಹಜವೇ ಆಗಿದೆ. ನಾಗರಿಕ ಸಮಾಜದ ಸದಸ್ಯರು, ಜನಪರ ಬುದ್ಧಿಜೀವಿಗಳು ಮತ್ತು ವಿರೋಧ ಪಕ್ಷಗಳ ನಾಯಕರು ಮಾಡುತ್ತಿರುವ ಟೀಕೆಗಳು ಈಗಾಗಲೇ ವಿಸ್ತೃತವಾಗಿ ದಾಖಲಾಗಿದ್ದು ಅದನ್ನು ಮತ್ತೆ ಇಲ್ಲಿ ಪುನರುಚ್ಚರಿಸುವ ಅಗತ್ಯವಿಲ್ಲ. ವಿರೋಧದ ನೆಲೆಯಿಂದ ಬಂದಿರುವ ಪ್ರತಿಕ್ರಿಯೆಗಳನ್ನು ಗ್ರಹಿಸುವುದಾದರೆ ಅವು ಸಂವಿಧಾನಾತ್ಮಕ ಕ್ರಮಗಳನ್ನು ಸಮಾಲೋಚನಾ ಪ್ರಜಾತಂತ್ರದ ನಡೆಗಳನ್ನು ಉಲ್ಲಂಘಿಸಲಾಗಿದೆಯೆಂಬ ಭಾಷೆಯಲ್ಲಿದೆ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಸರಕಾರವು ಬಳಸಿರುವ ಭಾಷೆಯಲ್ಲಿರುವ ಅನ್ಯಾಯದ ಸಹಜತೆಯನ್ನೂ ವಿರೋಧಿಸುತ್ತದೆ. ಇಂತಹ ದಿಢೀರ್ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರಕಾರವು ಕೊಟ್ಟ ಪ್ರಾರಂಭಿಕ ಕಾರಣಗಳು ಊಹಿಸಬಹುದಾದದ್ದೇ ಆಗಿದ್ದವು. ಕಾಶ್ಮೀರವನ್ನು ಭಾರತದಲ್ಲಿ ಸಮಗ್ರವಾಗಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಆ ಪ್ರದೇಶದ ಮತ್ತು ಅಲ್ಲಿನ ಜನರ ಅಭಿವೃದ್ಧಿಯಾಗುತ್ತದೆ ಎಂಬುದು ಈ ಕ್ರಮದ ಹಿಂದಿರುವ ಘೋಷಿತ ಸಮರ್ಥನೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಆ ಪ್ರದೇಶದ ಮತ್ತು ಜನರ ಅಭಿವೃದ್ಧಿಯಾಗದಿರುವುದಕ್ಕೆ ಈವರೆಗೆ ಅಸ್ತಿತ್ವದಲ್ಲಿದ್ದ ಆರ್ಟಿಕಲ್ 370 ಮತ್ತು ಅದರೊಂದಿಗಿನ ಆರ್ಟಿಕಲ್ 35-ಎ ಕಾರಣವಾಗಿತ್ತೆಂಬುದು ಸರಕಾರದ ಅಧಿಕೃತ ತಿಳುವಳಿಕೆಯಾಗಿದೆ. ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳಲು ತೆಗೆದುಕೊಂಡ ಈ ಕ್ರಮವು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಬಲವಾದ ಸರಕಾರವಿರಲು ಬೇಕಾಗಿದ್ದ ಅತ್ಯಗತ್ಯ ಕ್ರಮವೆಂದು ಕೇಂದ್ರ ಸರಕಾರ ಮತ್ತು ರಾಜಕೀಯ ಪಕ್ಷಗಳ ಗಡಿಗಳಾಚೆಗೂ ಹರಡಿಕೊಂಡಿರುವ ಅದರ ಬೆಂಬಲಿಗರು ಭಾವಿಸುತ್ತಾರೆ. ಈ ವಿಲೀನದ ಬಗ್ಗೆ ಮತ್ತು ಬಲಶಾಲಿ ರಾಷ್ಟ್ರದ ಬಗೆಗಿನ ಅಧಿಕೃತ ವಿವರಣೆಯನ್ನು ಸಕಾರಾತ್ಮಕ ಧೋರಣೆಯಿರುವ ಭಾಷೆಯಲ್ಲಿ ಕಟ್ಟಿಕೊಡಲಾಗುತ್ತಿದೆ. ಆ ಧೋರಣೆಯು ವಿಲೀನ, ದೇಶ ಮತ್ತು ಪ್ರದೇಶಗಳ ಅಭಿವೃದ್ಧಿ, ಕಣಿವೆಯಲ್ಲಿರುವ ಜನರ ಅಭಿವೃದ್ಧಿಗಳೆಂಬ ಪದಪುಂಜಗಳನ್ನು ಒಳಗೊಂಡಿದೆ. ಕೇಂದ್ರ ಸರಕಾರವು ಮುಂದಿಡುತ್ತಿರುವ ಈ ನಿಲುವು ಮತ್ತು ಅದನ್ನು ಸಮರ್ಥಿಸುತ್ತಿರುವ ದುರ್ಬಲ ಪ್ರಜಾತಾಂತ್ರಿಕ ಪ್ರಜ್ಞೆಯುಳ್ಳ ಅದರ ಬೆಂಬಲಿಗರ ನಿಲುವುಗಳು ವಾಸ್ತವದಲ್ಲಿ ಕೇವಲ ಶಬ್ದಾಡಂಬರಗಳಾಗಿವೆಯೇ ವಿನಃ ವಾಸ್ತವ ಸತ್ಯಗಳಲ್ಲ. ಅಭಿವೃದ್ಧಿಶೀಲ ರಾಷ್ಟ್ರೀಯವಾದದ ಮಾದರಿಯ ಹಿಂದಿನ ಅನುಭವಗಳು ಈ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ.

ಭಾರತ ಒಕ್ಕೂಟದ ಘಟಕಗಳ ನಡುವೆ ಮತ್ತು ಅವುಗಳೊಳಗೆ ಮುಂದುವರಿಯುತ್ತಿರುವ ಪ್ರಾದೇಶಿಕ ಸಂಘರ್ಷಗಳಲ್ಲಿ ಇದು ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುತ್ತಲೇ ಇದೆ. ಭಾರತದ ಒಕ್ಕೂಟದ ಘಟಕಗಳ ಮೌಲ್ಯವು ರಾಜ್ಯ-ರಾಜ್ಯಗಳ ನಡುವಿನ ಸೌಹಾರ್ದ ಮತ್ತು ಶಾಂತಿಯನ್ನು ಆಧರಿಸಿದೆಯೇ ವಿನಃ ಆ ಪ್ರದೇಶಗಳಲ್ಲಿ ವಾಸ ಮಾಡುವ ಜನರ ವೇದನೆ ಮತ್ತು ಪರಾಯೀಕರಣಗಳನ್ನಲ್ಲ ಎಂಬುದನ್ನು ನಾವು ಅರಿಯಬೇಕಿದೆ. ಅಧಿಕಾರದ ಕೇಂದ್ರೀಕರಣವು ಜನತೆಯ ಕಲ್ಯಾಣವನ್ನೇನೂ ಹೆಚ್ಚಿಸುವುದಿಲ್ಲ. ಅದು ನಿಜವೇ ಆಗಿದ್ದಲ್ಲಿ ತನ್ನೆಡೆಗೆ ವಲಸೆ ಬರುವ ಜನರಿಗೆ ಗುಣಮಟ್ಟದ ಜೀವನವನ್ನು ಖಾತರಿ ಮಾಡುವಷ್ಟು ಸಾಮರ್ಥ್ಯವಿಲ್ಲದ ನಗರಗಳೆಡೆಗೆ ಗ್ರಾಮೀಣ ಪ್ರದೇಶದಿಂದ ರೈತಾಪಿ ಜನರು ಬದುಕನ್ನರಿಸಿ ವಲಸೆ ಬರಬೇಕಾದ ಸಂದರ್ಭವೇ ಉಂಟಾಗುತ್ತಿರಲಿಲ್ಲ. ಒಂದು ಸಮತೋಲಿತ ಮತ್ತು ನ್ಯಾಯಯುತವಾದ ಅಭಿವೃದ್ಧಿಯ ಕೊರತೆಯಿಂದ ಆಗುತ್ತಿರುವ ಹೊರ ವಲಸೆಯು ಒಂದು ದೊಡ್ಡ ಮಟ್ಟದ ನಾಗರಿಕತೆಯ ನಷ್ಟವನ್ನೇ ಉಂಟುಮಾಡುತ್ತಿದೆ. ಉದಾಹರಣೆಗೆ ಉತ್ತರಾಖಂಡದ ಸಾವಿರಾರು ಹಳ್ಳಿಗಳಲ್ಲಿ ಅಂಥ ಬೆಳವಣಿಗೆಗಳು ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲಿನ ಸಾವಿರಾರು ಹಳ್ಳಿಗಳಲ್ಲಿ ಈಗ ಜನವಸತಿಯೇ ಇಲ್ಲ. ಹೀಗಾಗಿ ಅವು ‘‘ದೆವ್ವಗಳ ಹಳ್ಳಿ’’ಗಳೆಂದು ಹೆಸರು ಪಡೆದಿವೆ. ಹೀಗಾಗಿ ಒಂದು ಭೌತಿಕ ಪ್ರದೇಶದ ಆಂತರಿಕ ಮೌಲ್ಯವು ಅದು ಮನುಷ್ಯ ಜೀವನದ ಮತ್ತು ನಿಸರ್ಗದ ಸಹಜ ವಿಕಾಸಕ್ಕೆ ಎಷ್ಟು ಪೂರಕವಾಗಿದೆಯೆಂಬುದನ್ನು ಆಧರಿಸಿರುತ್ತದೆ. ಆರ್ಟಿಕಲ್ 370ನ್ನು ರದ್ದುಮಾಡುವ ಮೂಲಕ ಅಭಿವೃದ್ಧಿಯ ಅವಕಾಶಗಳನ್ನು ತೆರೆಯಲಾಗಿದೆಯೆಂದು ಕೇಂದ್ರ ಸರಕಾರವು ಹೇಳುತ್ತಿದೆ.

ಆದರೆ ನಗರದ ಅವಕಾಶಗಳ ಸಮಾನ ಹಂಚಿಕೆಯ ಮೇಲೆ ಸರಕಾರಕ್ಕೆ ಹಿಡಿತವಿಲ್ಲವೆಂಬುದನ್ನು ಮತ್ತು ಅವು ಕೇವಲ ಹೆಸರಿಗೆ ಮಾತ್ರ ಮುಕ್ತ ಆರ್ಥಿಕ ವಹಿವಾಟಗಳನ್ನು ಹೊಂದಿರುತ್ತದೆಂಬ ಸತ್ಯವನ್ನು ಸರಕಾರವು ಮರೆಮಾಚುತ್ತಿದೆ. ತಾನು ತೆಗೆದುಕೊಂಡಿರುವ ಕ್ರಮಕ್ಕೆ ಸಮರ್ಥನೆಯಾಗಿ ಸರಕಾರ ಅಭಿವೃದ್ಧಿಯ ಹೆಸರನ್ನು ಬಳಸುತ್ತಿದೆ. ಆದರೆ ಈ ಅಭಿವೃದ್ಧಿಗೆ ತನ್ನ ಲಾಭಗಳು ಸಾಮಾನ್ಯ ಮನುಷ್ಯನಿಗೆ ದಕ್ಕದಂತೆ ಮಾಡುವ ಆಂತರಿಕ ತರ್ಕವಿದೆ. ನಗರಾಭಿವೃದ್ಧಿಯ ಅನುಭವಗಳು ಹೇಳುವಂತೆ ಅದು ನಗರದ ಅತಿ ಶ್ರೀಮಂತರಿಗೆ ಮಾತ್ರ ಅವಕಾಶಗಳನ್ನು ತೆರವು ಮಾಡುತ್ತದೆ ಮತ್ತು ಅದರ ಸುತ್ತ ಬೇಲಿಯನ್ನೂ ಸಹ ನಿರ್ಮಿಸಿ ಆಧುನಿಕ ಅಗ್ರಹಾರಗಳನ್ನಾಗಿಸುತ್ತದೆ. ಅಂತಹ ಅಗ್ರಹಾರಗಳಿಗೆ ಸಾಮಾಜಿಕ ಶ್ರೇಣಿಯಲ್ಲಿ ಮೇಲಿರುವ ದ್ವಿಜರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆಯೇ ವಿನಃ ಅರ್ಹತೆ ಇದ್ದರೂ ಕೆಳಜಾತಿಗಳಿಗೆ ಅದರೊಳಗೆ ಪ್ರವೇಶಾವಕಾಶ ಸಿಗುವುದಿಲ್ಲ. ಅನ್ಯಾಯದ ವಿರುದ್ಧ ಧ್ವನಿಗಳನ್ನು, ಅದರಲ್ಲೂ ಕಾಶ್ಮೀರ ಕಣಿವೆಯ ಧ್ವನಿಗಳನ್ನು, ಅಧಿಕೃತ ಧ್ವನಿಗಳು ನುಂಗಿಹಾಕುತ್ತವೆ. ಕಾಶ್ಮೀರಿಗಳಿಗೆ ಅಗತ್ಯವಿದ್ದುದೆಲ್ಲಾ ಒಂದು ಕನಿಷ್ಠ ನೈತಿಕ ಪ್ರಜ್ಞೆಯಿದ್ದ ಕ್ರಮಗಳು. ಆರ್ಟಿಕಲ್ 370ರ ವಿಷಯದ ಹಿನ್ನೆಲೆಯಲ್ಲಿ ಸರಕಾರವು ತಮ್ಮ ಭವಿಷ್ಯದ ಬಗ್ಗೆ ಏನು ತೀರ್ಮಾನ ಮಾಡುತ್ತಿದೆಯೆಂಬುದನ್ನಾದರೂ ಕೇಂದ್ರ ಸರಕಾರ ತಿಳಿಸುತ್ತದೆಂದು ಅವರು ಭಾವಿಸಿದ್ದರು.

ಯಾವುದೇ ಸಮಾಲೋಚನೆಯ ಪ್ರಕ್ರಿಯೆ ಗಳಿಲ್ಲದೆ ಹೇರಿಕೆಯ ಕ್ರಮಗಳ ಮೂಲಕ ತನ್ನ ಅಧಿಕಾರವನ್ನು ಸದೃಢೀಕರಿಸಿಕೊಂಡ ಹಾಲಿ ಸರಕಾರದ ಕ್ರಮಗಳು ಅಧಿಕಾರವನ್ನೆಲ್ಲಾ ಕೇಂದ್ರೀಕರಿಸಿಕೊಳ್ಳಬೇಕೆಂಬ ತನ್ನ ಗುರಿಯನ್ನು ಈಡೇರಿಸಿಕೊಳ್ಳಲು ಕೇಂದ್ರವು ಎಷ್ಟು ತರಾತುರಿ ಯಲ್ಲಿದೆ ಎನ್ನುವುದನ್ನು ಸಾಬೀತು ಮಾಡುತ್ತಿದೆ. ಇಂತಹ ಕ್ರಮಗಳ ಪರಿಣಾಮಗಳನ್ನು ಯಾರು ಬೇಕಾದರೂ ಊಹಿಸಬಹುದು. ಎಲ್ಲವನ್ನೂ ತನ್ನ ಕಟ್ಟುನಿಟ್ಟಿನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಬಯಕೆಗಳು ಕೆಲವೊಮ್ಮೆ ಸಾಧ್ಯವೂ ಆಗುವುದಿಲ್ಲ ಹಾಗೂ ಕೆಲವೊಮ್ಮೆ ಪ್ರತಿಕೂಲ ಪರಿಣಾಮಗಳನ್ನೂ ಉಂಟು ಮಾಡಬಹುದು. ತನ್ನೆಲ್ಲಾ ಗಮನವನ್ನು ಕಾಶ್ಮೀರದ ಸಂಘರ್ಷದ ಮೇಲೆ ಕೇಂದ್ರೀಕರಿಸುವ ಮೂಲಕ ಸರಕಾರವು ಇನ್ನಿತರ ಹಾಗೂ ಇನ್ನೂ ಹೆಚ್ಚಿನ ಸಂಘರ್ಷಕಾರಿ ತಾಣಗಳಾದ ಕೃಷಿ, ಉದ್ಯೋಗ ಮತ್ತು ನಗರಾಡಳಿತಗಳಂತಹ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಹೀಗಾಗಿಯೂ ಕೇಂದ್ರೀಕರಣದ ಬಯಕೆಗಳು ಈಡೇರಲಾಗದೆ ಹೋಗಬಹುದು.

ಒಕ್ಕೂಟ ವ್ಯವಸ್ಥೆಯು ಅಧಿಕಾರವನ್ನು ಹಂಚಿಕೊಳ್ಳುವ ಮೂಲಕ ಸಂಘರ್ಷಕ್ಕೆ ಪರಿಹಾರ ಮೂಡುವ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಅಧಿಕಾರವನ್ನು ಕೇಂದ್ರೀಕರಿಸಿಕೊಂಡು ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿಸುವುದರಿಂದ ಅದು ಸಾಧ್ಯವಾಗುವುದಿಲ್ಲ. ಆದರೆ ಹಾಲಿ ಕೇಂದ್ರ ಸರಕಾರವು ಸಂಘರ್ಷಗಳನ್ನು ಕೇಂದ್ರೀಕರಣದ ಮೂಲಕ ಬಗೆಹರಿಸುವ ಕ್ರಮಗಳನ್ನು ಅನುಸರಿಸುತ್ತಿದೆ. ವಿಕೇಂದ್ರೀಕೃತ ಸಂಘರ್ಷಗಳ ನಿರ್ಲಕ್ಷ್ಯಗಳು ಅದರ ವಿರುದ್ಧ ಸಂತ್ರಸ್ತರು ಎಷ್ಟರ ಮಟ್ಟಿಗೆ ದನಿ ಎತ್ತಬಲ್ಲರು ಎಂಬುದನ್ನು ಆಧರಿಸಿ ಮತ್ತೆ ಸ್ಫೋಟಗೊಳ್ಳಬಲ್ಲವು. ಕೊಡುಕೊಳ್ಳು ನೀತಿಯ ಒಕ್ಕೂಟ ವ್ಯವಸ್ಥೆಯು ಈ ಸಂಘರ್ಷಗಳಿಗೆ ಗಮನಹರಿಸುವುದನ್ನು ಕೇಂದ್ರ ಸರಕಾರಕ್ಕೆ ಕಡ್ಡಾಯ ಮಾಡುತ್ತದೆ. ಅದೇ ರೀತಿ ಮಾನವ ಬದುಕು ಸಹಜವಾಗಿ ಅರಳಿ ವಿಕಸನಗೊಳ್ಳುವ ತರ್ಕಕ್ಕೆ ಬದ್ಧವಾಗಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಆದರ್ಶವಾದಿ ಮೌಲ್ಯಗಳೂ ಇರುತ್ತವೆ. ಅದನ್ನು ಉತ್ತೇಜಿಸುವ ಮೂಲಕ ಜನವಸತಿಯ ಭೌತಿಕ ಪ್ರದೇಶಗಳು ಸಜೀವ ನಾಗರಿಕತೆಯ ದೃಷ್ಟಿಯಿಂದ ಬಾಳಯೋಗ್ಯವನ್ನಾಗಿಸಬೇಕಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News