ಪ್ರಾಣಿಗಳಂತೆ ಪಂಜರದಲ್ಲಿರಿಸಲಾಗಿದೆ: ಅಮಿತ್ ಶಾಗೆ ಮೆಹಬೂಬಾ ಪುತ್ರಿಯ ಪತ್ರ

Update: 2019-08-16 07:37 GMT

ಶ್ರೀನಗರ, ಆ.16: ಗೃಹಬಂಧನದಲ್ಲಿರುವ ಜಮ್ಮು ಕಾಶ್ಮೀರದ  ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಝಾ ಜಾವೇದ್ ಅವರು ಎರಡನೇ ವಾಯ್ಸ್ ಸಂದೇಶ ಬಿಡುಗಡೆಗೊಳಿಸಿದ್ದು, ತಮ್ಮ ತಾಯಿಯನ್ನು ಸರಕಾರ ಬಂಧಿಸಿದ ಕೆಲವೇ ದಿನಗಳಲ್ಲಿ ತನ್ನನ್ನೂ ಮನೆಯಲ್ಲಿ ದಿಗ್ಬಂಧನದಲ್ಲಿರಿಸಲಾಗಿದೆ ಎಂದು ದೂರಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವ ಆಕೆ, “ಮಾಧ್ಯಮದ ಜತೆ ಮತ್ತೊಮ್ಮೆ ಮಾತನಾಡಿದರೆ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಲಾಗಿದೆ” ಎಂದೂ ಆರೋಪಿಸಿದ್ದಾರೆ.

“ಇಂದು ದೇಶದ ಇತರೆಡೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದ್ದರೆ, ಕಾಶ್ಮೀರಿಗಳನ್ನು ಪಂಜರದ ಪ್ರಾಣಿಗಳಂತೆ ಇರಿಸಲಾಗಿದ್ದು ಮೂಲಭೂತ ಮಾನವ ಹಕ್ಕುಗಳನ್ನೂ ಅವರಿಗೆ ನಿರಾಕರಿಸಲಾಗಿದೆ'' ಎಂದು ಆಕೆ ಬರೆದಿದ್ದಾರೆ.

ತಮ್ಮನ್ನು ಭೇಟಿಯಾಗಲು ಬರುವವರನ್ನು ಗೇಟಿನಿಂದಲೇ ಹೊರಕ್ಕೆ ಕಳುಹಿಸಲಾಗುತ್ತದೆ ಹಾಗೂ ತಮಗೆ ಯಾವುದೇ ಮಾಹಿತಿ ನೀಡಲಾಗುತ್ತಿಲ್ಲ, ಮನೆಯ ಹೊರಗೆ ಕಾಲಿಡಲೂ ಅನುಮತಿಯಿಲ್ಲ ಎಂದು ಅವರು ದೂರಿದ್ದಾರೆ.

ತಮ್ಮನ್ನು ದಿಗ್ಬಂಧನದಲ್ಲಿರಿಸಲು ಕಾರಣವೇನೆಂದು ಅವರು ಗೃಹ ಸಚಿವರನ್ನು ಕೇಳಿದ್ದಾರಲ್ಲದೆ ತಾವು ಮಾಧ್ಯಮಕ್ಕೆ ನೀಡಿದ ಸಂದರ್ಶನಗಳೇ ಇದಕ್ಕೆ ಕಾರಣವೆಂದು ತಮ್ಮ ಮನೆಯ ಸುತ್ತಮುತ್ತಲಿರುವ ಭದ್ರತಾ ಸಿಬ್ಬಂದಿ ಹೇಳುತ್ತಿದ್ದಾರೆ. “ಮತ್ತೊಮ್ಮೆ  ಬಾಯ್ದೆದೆರೆದರೆ ಪರಿಣಾಮ ನೆಟ್ಟಗಾಗದು'' ಎಂದೂ ಬೆದರಿಸಲಾಗಿದೆ ಎಂದು ಅವರು ಬರೆದಿದ್ದಾರೆ.

“ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಇಂತಹ ದೌರ್ಜನ್ಯಕರ ವಾತಾವರಣದಲ್ಲಿ ಮಾತನಾಡಲು ಅನುಮತಿಯಿಲ್ಲವೇ?. ಅಹಿತಕರ ಸತ್ಯ ಹೇಳಿದ್ದಕ್ಕಾಗಿ ನನ್ನನ್ನು ಯುದ್ಧಾಪರಾಧಿ ಎಂಬಂತೆ ನೋಡಲಾಗುತ್ತಿದೆ'' ಎಂದು ಆಡಿಯೋ ಸಂದೇಶದ ಜತೆ ಬಿಡುಗಡೆಗೊಳಿಸಲಾಗಿರುವ ಪತ್ರದಲ್ಲಿ ಆಕೆ ಬರೆದಿದ್ದಾರೆ.

“ನನ್ನನ್ನು ಅಪರಾಧಿ ಎಂಬಂತೆ ನೋಡಲಾಗುತ್ತಿದೆ, ಸದಾ ನನ್ನ ಮೇಲೆ ನಿಗಾ ಇಡಲಾಗಿದೆ. ದನಿಯೆತ್ತಿದ ಇತರ ಕಾಶ್ಮೀರಿಗಳಂತೆಯೇ ನನಗೂ ಜೀವಭಯವಿದೆ'' ಎಂದು ಇಲ್ತಿಝಾ ತಮ್ಮ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News