ಖೇಲ್‌ರತ್ನ ಪ್ರಶಸ್ತಿಗೆ ಕುಸ್ತಿಪಟು ಬಜರಂಗ್ ಪೂನಿಯಾ ನಾಮನಿರ್ದೇಶನ

Update: 2019-08-16 12:25 GMT

ಹೊಸದಿಲ್ಲಿ, ಆ.16: ಏಶ್ಯ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಜಸ್ಟಿಸ್(ನಿವೃತ್ತ)ಮುಕುಂದಕಮ್ ಶರ್ಮಾ ನೇತೃತ್ವದ 12 ಸದಸ್ಯರನ್ನು ಒಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿ ಶುಕ್ರವಾರ ದ್ವಿದಿನ ಸಭೆಯ ಮೊದಲ ದಿನ ಪೂನಿಯಾ ಹೆಸರನ್ನು ಖೇಲ್‌ರತ್ನಕ್ಕೆ ಅಂತಿಮಗೊಳಿಸಿತು. ಸಮಿತಿಯು ಶನಿವಾರ ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರುಗಳನ್ನು ಅಂತಿಮಗೊಳಿಸಲಿದೆ.

ಕುಸ್ತಿ ಕ್ಷೇತ್ರದಲ್ಲಿ ಸ್ಥಿರ ಪ್ರದರ್ಶನ ನೀಡಿ ದೇಶಕ್ಕೆ ಹೆಮ್ಮೆ ತಂದಿರುವ ಪೂನಿಯಾರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಒಮ್ಮತದಿಂದ ನಾಮನಿರ್ದೇಶನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪೂನಿಯಾ ಜೊತೆ ವಿನೇಶ್ ಫೋಗಾಟ್‌ರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಭಾರತದ ಕುಸ್ತಿ ಒಕ್ಕೂಟ(ಡಬ್ಲುಎಫ್‌ಐ)ಶಿಫಾರಸು ಮಾಡಿತ್ತು.

 ಪೂನಿಯಾ ಇತ್ತೀಚೆಗಷ್ಟೇ ಟಿಬಿಲಿಸಿ ಗ್ರಾನ್‌ಪ್ರಿ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಪ್ರಸ್ತುತ ನಂ.1 ಕುಸ್ತಿಪಟುವಾಗಿರುವ ಪೂನಿಯಾ ಚೀನಾದಲ್ಲಿ ನಡೆದ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿ ಮಿಂಚಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಪೂನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಫೇವರಿಟ್ ಕುಸ್ತಿಪಟು ಆಗಿದ್ದಾರೆ.

ಪೂನಿಯಾ ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ನಗೆ ಬೀರಿದ್ದರು.

ಕಳೆದ ವರ್ಷ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್‌ಲಿಫ್ಟರ್ ಮಿರಾಬಾಯಿ ಚಾನು ಖೇಲ್‌ರತ್ನ ಪ್ರಶಸ್ತಿಯನ್ನು ಜಂಟಿಯಾಗಿ ಸ್ವೀಕರಿಸಿದ್ದರು.

 ಕಳೆದ ವರ್ಷ ಏಶ್ಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರೂ ಖೇಲ್‌ರತ್ನ ಪ್ರಶಸ್ತಿಗೆ ತನ್ನನ್ನು ಕಡೆಗಣಿಸಿರುವುದಕ್ಕೆ ಆಕ್ರೋಶಗೊಂಡಿದ್ದ ಪೂನಿಯಾ ಕೋರ್ಟ್ ಮೆಟ್ಟಿಲೇರುವುದಾಗಿ ಬೆದರಿಸಿದ್ದರು.

1991-92ರಲ್ಲಿ ಚೆಸ್ ಗ್ರಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಮೊದಲ ಬಾರಿ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಖೇಲ್‌ರತ್ನ ಪ್ರಶಸ್ತಿಯು ಪದಕ, ಪ್ರಮಾಣಪತ್ರ ಹಾಗೂ 7.5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News