ಬೆಂಗಳೂರು ಕೇಂದ್ರ ವಿವಿಗೆ ಶೇ.15 ರಷ್ಟು ಬೇಡಿಕೆ ಕುಸಿತ

Update: 2019-08-16 14:26 GMT

ಬೆಂಗಳೂರು, ಆ.16: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆರಂಭಿಸಿದ ಬಳಿಕ ಶೇ.15 ರಷ್ಟು ಬೇಡಿಕೆ ಕಳೆದುಕೊಂಡಿದ್ದು, ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ಎರಡನೆ ಶೈಕ್ಷಣಿಕ ವರ್ಷ ಆರಂಭಿಸಿರುವ ಬೆಂಗಳೂರು ಕೇಂದ್ರ ವಿವಿ, ಪ್ರಸಕ್ತ ಸಾಲಿನಿಂದ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಹೀಗಾಗಿ ವಿವಿಯಲ್ಲಿರುವ 18 ವಿಭಾಗದ 19 ಕೋರ್ಸ್‌ಗಳಿಗೆ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.

ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದ ವಿವಿ, ಕೇವಲ ಆರು ಸಾವಿರ ಅರ್ಜಿ ಪಡೆದು ಆರಂಭಿಕ ಹಿನ್ನಡೆ ಅನುಭವಿಸಿತ್ತು. ನಂತರದ ಪ್ರವೇಶಾತಿ ಪರೀಕ್ಷೆಯಲ್ಲಿ ಒಟ್ಟು ಅರ್ಜಿದಾರರ ಪೈಕಿ ಕೇವಲ 4,600 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದು, ಇನ್ನಿತರರು ಸಿಇಟಿ ವ್ಯವಸ್ಥೆಯಿಂದ ದೂರು ಉಳಿದಿದ್ದಾರೆ.

ಬೇಡಿಕೆ ಹೆಚ್ಚು: ಬೆಂಗಳೂರು ಕೇಂದ್ರ ವಿವಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೇರಲು ಪ್ರವೇಶ ಪರೀಕ್ಷೆಯಿದ್ದರೂ ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ವಿವಿ ಮತ್ತು ವಿಶ್ವವಿದ್ಯಾಲಯ ಸ್ವಾಯತ್ತತೆ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗದ ಎಂಕಾಂ, ಎಂಬಿಎ, ಎಂಎಫ್‌ಎ, ಎಂಟಿಎ ಕೋರ್ಸ್‌ಗಳಿಗೆ 1550 ಸೀಟುಗಳಿದ್ದು, 2053 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಾರೆ.

ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಬಯೋಕೆಮಿಸ್ಟ್ರಿ, ಪ್ಲಾಂಟ್‌ಸೈನ್ಸ್, ಅನಿಮಲ್ ಸೈನ್ಸ್, ಬಯೋ ಟೆಕ್ನಾಲಜಿ, ಗಣಿತ, ಮೈಕ್ರೋ ಬಯೋಲಜಿ, ಸೈಕಾಲಜಿ, ಸೈಕೋಲಾಜಿಕಲ್ ಕೌನ್ಸೆಲಿಂಗ್ ಕೋರ್ಸ್‌ಗಳಲ್ಲಿ 693 ಸೀಟುಗಳಿದ್ದು, 2098 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಮೂಲಕ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ.

19 ಕೋರ್ಸ್‌ಗೆ 16 ಸಿಬ್ಬಂದಿ: ಬೆಂಗಳೂರು ವಿವಿ ವಿಭಜನೆ ಬಳಿಕ ಬೆಂಗಳೂರು ಕೇಂದ್ರ ಮತ್ತು ಉತ್ತರ ವಿವಿಗಳಲ್ಲಿ ಕೋರ್ಸ್‌ಗಳಿಗೆ ಅನುಗುಣವಾಗಿ ಬೋಧಕರಿಲ್ಲ. ಬಹುತೇಕ ಎಲ್ಲಾ ಕೋರ್ಸ್‌ಗಳು ಅತಿಥಿ ಉಪನ್ಯಾಸಕರ ನೇತೃತ್ವದಲ್ಲಿ ನಡೆಯುತ್ತಿವೆ. ಇನ್ನು ಬೆಂಗಳೂರು ಕೇಂದ್ರ ವಿವಿಯಲ್ಲಿರುವ 19 ಕೋರ್ಸ್‌ಗೆ ಕುಲಪತಿ, ಕುಲಸಚಿವ, ಮೌಲ್ಯಮಾಪನ ಕುಲಸಚಿವ, ಹಣಕಾಸು ಅಧಿಕಾರಿ ಸೇರಿ ಕೇವಲ 16 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News