ಫೋನ್ ಕದ್ದಾಲಿಕೆ ನನ್ನ ಗಮನಕ್ಕೆ ಬಂದಿಲ್ಲ: ಡಾ.ಜಿ.ಪರಮೇಶ್ವರ್

Update: 2019-08-16 14:55 GMT

ಬೆಂಗಳೂರು, ಆ.16: ಮೈತ್ರಿ ಸರಕಾರದಲ್ಲಿ ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ, ಫೋನ್ ಕದ್ದಾಲಿಕೆ ವಿಚಾರ ನನ್ನ ಇಲಾಖೆ ವ್ಯಾಪ್ತಿಗೆ ಬರಲ್ಲ, ಅದು ಗುಪ್ತಚರ ಇಲಾಖೆಯ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗೃಹ ಸಚಿವನಾಗಿದ್ದ ವೇಳೆ ಫೋನ್ ಕದ್ದಾಲಿಕೆ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ಎರಡು ಬೇರೆ ಬೇರೆ. ಗುಪ್ತಚರ ಇಲಾಖೆ ಮುಖ್ಯಮಂತ್ರಿಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದರು.

ಸಾಮಾನ್ಯವಾಗಿ ಭಯೋತ್ಪಾದಕರು ಹಾಗೂ ಕ್ರಿಮಿನಲ್‌ಗಳ ಚಲನವಲನಗಳ ಮೇಲೆ ನಿಗಾ ಇಡಲು ಗುಪ್ತಚರ ವಿಭಾಗದ ಅಧಿಕಾರಿಗಳು, ಫೋನ್ ಕದ್ದಾಲಿಕೆ ಮಾಡುತ್ತಾರೆ. ಆದರೆ, ಯಾವುದೇ ವ್ಯಕ್ತಿಯ ಫೋನ್ ಕದ್ದಾಲಿಕೆ ಮಾಡುವ ಮುನ್ನ ಗೃಹ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ನಾನು ಗೃಹ ಸಚಿವನಾಗಿದ್ದಾಗ ಅಂತಹ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಅವರು ಹೇಳಿದರು.

ಫೋನ್ ಕದ್ದಾಲಿಕೆ ಕುರಿತು ಎಲ್ಲೆಡೆ ಅನುಮಾನ ವ್ಯಕ್ತವಾಗುತ್ತಿದೆ. ಆದುದರಿಂದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂಬಂಧ ತನಿಖೆಗೆ ಆದೇಶಿಸಲಿ. ಸೂಕ್ತ ರೀತಿಯಲ್ಲಿ ತನಿಖೆ ನಡೆದರೆ, ಯಾರು? ಯಾವ ಕಾರಣಕ್ಕೆ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಎಂಬುದು ಬಹಿರಂಗವಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News