ಸರಕಾರದ ವರ್ಗಾವಣೆ ಆದೇಶ: ಸಿಎಟಿಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅಲೋಕ್‌ ಕುಮಾರ್

Update: 2019-08-16 16:26 GMT

ಬೆಂಗಳೂರು, ಆ.16: ನಗರ ಪೊಲೀಸ್ ಆಯುಕ್ತ ಸ್ಥಾನದಿಂದ ವರ್ಗಾವಣೆ ಮಾಡಿದ್ದ ಬಿಜೆಪಿ ಸರಕಾರದ ಆದೇಶ ಪ್ರಶ್ನೆ ಮಾಡಿ ಸಿಎಟಿಯಲ್ಲಿ ಅಲೋಕ್‌ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಅವರು ಹಿಂಪಡೆದಿದ್ದಾರೆ.

ಅಲೋಕ್‌ ಕುಮಾರ್ ಪರ ವಕೀಲರು, ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ಮೊಮೊ ಸಲ್ಲಿಸಿ ಅರ್ಜಿ ವಾಪಸ್ ಪಡೆಯುವುದಾಗಿ ತಿಳಿಸಿದರು. ನ್ಯಾಯಮಂಡಳಿಯು ಮೊಮೊ ಸ್ವೀಕರಿಸಿ ಅರ್ಜಿ ವಜಾ ಮಾಡಿದರು. ಕೋರ್ಟ್ ಸಮಯ ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ಅಲೋಕ್‌ ಕುಮಾರ್‌ಗೆ ದಂಡ ವಿಧಿಸುವ ವಿಚಾರ ಕುರಿತ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಅಲೋಕ್‌ ಕುಮಾರ್ ಅವರು ಸರಕಾರದ ಅಧಿಕಾರಿಯೇ ಆಗಿದ್ದರಿಂದ ಅವರಿಗೆ ದಂಡ ವಿಧಿಸುವುದು ಬೇಡವೆಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ದಂಡ ವಿಧಿಸುವ ವಿಚಾರ ಕಲಾಪಪಟ್ಟಿಯ ಸರದಿ ಬಂದಾಗ ತಿಳಿಸಿ ಎಂದು ಹೇಳಿ ಅರ್ಜಿ ವಜಾಗೊಳಿಸಿತು.

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ ಅಲೋಕ್‌ ಕುಮಾರ್ ಅವರನ್ನು ಜೂನ್‌ನಲ್ಲಿ ಬೆಂಗಳೂರು ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಇದಾದ ಬಳಿಕ ಮೈತ್ರಿ ಸರಕಾರ ಪತನಗೊಂಡು, ಬಿಜೆಪಿ ಸರಕಾರ ರಚನೆಯಾಯಿತು. ಮೈತ್ರಿ ಸರಕಾರದ ಅವಧಿಯಲ್ಲಿ ವರ್ಗಾವಣೆಗೊಂಡಿದ್ದ ಸಾಕಷ್ಟು ಅಧಿಕಾರಿಗಳನ್ನು ಸಿಎಂ ಬಿಎಸ್‌ವೈ ವರ್ಗಾವಣೆ ಮಾಡಿದ್ದರು. ಅವರಲ್ಲಿ ಅಲೋಕ್‌ಕುಮಾರ್ ಅವರೂ ಒಬ್ಬರು. ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಇವರನ್ನು ಸಶಸ್ತ್ರ ಮೀಸಲು ಪಡೆಗೆ ವರ್ಗಾವಣೆ ಮಾಡಲಾಯಿತು. ಇವರ ಸ್ಥಾನಕ್ಕೆ ಭಾಸ್ಕರ್‌ರಾವ್ ಅವರನ್ನು ನೇಮಿಸಲಾಯಿತು. ಸರಕಾರದ ಈ ವರ್ಗಾವಣೆ ಆದೇಶ ಪ್ರಶ್ನೆ ಮಾಡಿ ಅಲೋಕ್‌ ಕುಮಾರ್ ಸಿಎಟಿ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News