ಆಸ್ತಿ-ಪಾಸ್ತಿ ಕಳೆದುಕೊಂಡ ನಿರಾಶ್ರಿತರ ನೆರವಿಗೆ ಧಾವಿಸುತ್ತಿರುವ ಸಂಘ-ಸಂಸ್ಥೆಗಳು

Update: 2019-08-16 17:01 GMT

ಬೆಂಗಳೂರು, ಆ.16: ಜಲ ಪ್ರವಾಹದಿಂದ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವ ಉತ್ತರ-ಕರ್ನಾಟಕ ಭಾಗದ ಲಕ್ಷಾಂತರ ಕುಟುಂಬಗಳು ಬೀದಿಯಲ್ಲಿ ದಿನ ದೂಡುತ್ತಿವೆ. ಇವರಿಗೆ ಸಹಾಯ ಹಸ್ತ ನೀಡಲು ಬೆಂಗಳೂರಿನ ಹಲವು ಸಂಘ, ಸಂಸ್ಥೆಗಳು, ಶಾಲಾ, ಕಾಲೇಜುಗಳು ಮುಂದೆ ಬಂದಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರಿನ ಕನ್ನಡಪರ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಇತರೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಸಂಘಟನೆಗಳು ತಮ್ಮದೆ ಇತಿ -ಮಿತಿಯಲ್ಲಿ ಉತ್ತರ ಕರ್ನಾಟಕ ಜನತೆಯ ಅವಶ್ಯಕತೆಗಳನ್ನು ನೀಗಿಸಲು ಬಟ್ಟೆ, ರಗ್ಗು, ಅಕ್ಕಿ, ಧವಸ ಧಾನ್ಯಗಳು ಸೇರಿದಂತೆ ಆಹಾರ ಹಾಗೂ ಔಷಧಿಗಳನ್ನು ಸಂಗ್ರಹಿಸಿ, ಈಗಾಗಲೆ ಕಳುಹಿಸಿಕೊಟ್ಟಿವೆ. ನಗರದಲ್ಲಿ ಸಾಮಾಜಿಕ ಅರಿವಿನ ಕುರಿತು ಶಿಕ್ಷಣ ನೀಡುತ್ತಿರುವ ಬದುಕು ಕಮ್ಯುನಿಟಿ ಕಾಲೇಜು, ಉತ್ತರ ಕರ್ನಾಟಕ ಜನತೆಗೆ ತುರ್ತು ಅಗತ್ಯವಿರುವ ವಸ್ತುಗಳನ್ನು ಪಟ್ಟಿ ಮಾಡಿ, ಈ ವಸ್ತುಗಳನ್ನು ಕಳುಹಿಸಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಬೆಂಗಳೂರಿನ ಯುವಜನತೆ ಅಗತ್ಯ ವಸ್ತುಗಳನ್ನು ಸಂಸ್ಥೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಿದ್ದಾರೆಂದು ಬದುಕು ಕಾಲೇಜಿನ ಪ್ರಾಂಶುಪಾಲ ಮುರಳಿ ಮೋಹನ್ ತಿಳಿಸಿದ್ದಾರೆ.

ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಾಗಲಕೋಟೆ, ಬಾದಾಮಿ ಭಾಗದ ವಿದ್ಯಾರ್ಥಿಗಳ ಮನೆಗಳು ಜಲಪ್ರವಾಹಕ್ಕೆ ಸಿಲುಕಿ ನಾಶವಾಗಿದೆ. ಇವರಿಗೆ ತಕ್ಷಣಕ್ಕೆ ಅಗತ್ಯವಾದ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯುವ ಜನತೆ ಸಹಾಯ ಹಸ್ತ ನೀಡಿದ್ದಾರೆ ಎಂದು ಅವರು ಹೇಳಿದರು.

ಕರುನಾಡು ಕನ್ನಡಿಗರ ವೇದಿಕೆಯ ಕಾರ್ಯಕರ್ತರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕ ಹಲವು ಭಾಗಗಳಿಗೆ ತೆರಳಿ ಸಹಾಯ ಹಸ್ತ ನೀಡುತ್ತಿದ್ದಾರೆ. ಹಾಗು ಇಂದಿರಾನಗರದ ಡಾ.ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿಗಳು, ಕಾಲೇಜಿನ ಸುತ್ತಮುತ್ತಲಿರುವ ಅಂಗಡಿ ಹಾಗೂ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಮುಟ್ಟಿನ ಕಪ್ ವಿತರಣೆ: ನೆರೆ ಸಂತ್ರಸ್ತ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ, ಅದನ್ನು ನಿಭಾಯಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದರ ಕುರಿತು ಮಾಹಿತಿ ತಿಳಿದ ಜ್ಯೋತಿ ಹಿಟ್ನಾಳ್ ಹಾಗೂ ಅವರ ತಂಡ, ಮುಟ್ಟಿನ ಕಪ್‌ಗಳನ್ನು ವಿತರಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ಒಂದು ಲಕ್ಷಕ್ಕೂ ಹೆಚ್ಚು ದೇಣಿಗೆಯನ್ನು ಸಂಗ್ರಹಿಸಿ, ಅಗತ್ಯವಿರುವ ಮಹಿಳೆಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಲಪ್ರಳಯದಿಂದ ನಲುಗಿರುವ ಉತ್ತರ ಕರ್ನಾಟಕದ ಜನತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಮುಟ್ಟಾದ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಮಾಹಿತಿ ಸಿಕ್ಕಿತು. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಟ್ಟಿನ ಕಪ್‌ಗಳನ್ನು ಸರಬರಾಜು ಮಾಡಲು ಚಿಂತನೆ ನಡೆಸಿ, ಈ ಮುಟ್ಟಿನ ಕಪ್‌ಗಳನ್ನು ಕಂಡುಕೊಳ್ಳಲು ಆರ್ಥಿಕ ನೆರವು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದು ಲಕ್ಷ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿತ್ತು. ಈ ಹಣದಿಂದ ಮುಟ್ಟಿನ ಕಪ್‌ಗಳನ್ನು ಖರೀದಿಸಿ ಅಗತ್ಯವಿದ್ದವರಿಗೆ ಸರಬರಾಜು ಮಾಡಿದ್ದೇವೆ.

-ಜ್ಯೋತಿ ಹಿಟ್ನಾಳ್, ಸುಖಿಭವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News