ತೊಂದರೆಯಲ್ಲಿರುವ ಜನರಿಗೆ ಮಾನವೀಯ ಸ್ಪಂದನೆ ದೊರೆಯುತ್ತಿರುವುದು ಶ್ಲಾಘನೀಯ: ಮೇಯರ್ ಗಂಗಾಂಬಿಕೆ

Update: 2019-08-16 17:13 GMT

ಬೆಂಗಳೂರು, ಆ.16: ತೀವ್ರ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ತೊಂದರೆಯಲ್ಲಿರುವ ಜನರಿಗೆ ಮಾನವೀಯ ಸ್ಪಂದನೆ ದೊರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅಭಿಪ್ರಾಯಪಟ್ಟರು.

ಶುಕ್ರವಾರ ಜಯನಗರದಲ್ಲಿ ನೆರೆ ಸಂತ್ರಸ್ತರಿಗೆ, ಬಾಂಧವ ಸ್ವಯಂ ಸೇವಾ ಸಂಸ್ಥೆ ತಂಡದಿಂದ ಹತ್ತು ಲಕ್ಷ ರೂ ಮೌಲ್ಯದ ಅಗತ್ಯ ವಸ್ತುಗಳು ಸಂಗ್ರಹಸಿ ಬಾಗಲಕೋಟೆಗೆ ಹೊತ್ತ ಸರಕು ಸಾಗಾಣೆ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಸಮಸ್ಯೆಗೆ ಸಿಲುಕಿರುವವರಿಗೆ ಬಿಬಿಎಂಪಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಸಂತಸದ ಸಂಗತಿ ಎಂದು ಹೇಳಿದರು.

ಇನ್ನು, ನಗರದಲ್ಲಿ ಮಳೆ ಸಂಬಂಧಿತ ಅನಾಹುತ ತಪ್ಪಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿ ರಜೆ ಪಡೆಯದೇ ಕೆಲಸ ಮಾಡುತ್ತಿದ್ದು, ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೇವೆ ಎಂದರು.

ಬಿಬಿಎಂಪಿ ಸದಸ್ಯ ಎನ್.ನಾಗರಾಜು ಮಾತನಾಡಿ, ಇಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ಬಾಗಲಕೋಟೆಗೆ ರವಾನಿಸುತ್ತಿದ್ದು, ಅಲ್ಲಿ ತೀವ್ರ ಬಾಧಿತವಾಗಿರುವ ಗ್ರಾಮಗಳಲ್ಲಿ ನಮ್ಮ ನಾಯಕರಾದ ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾರೆಡ್ಡಿ ಖುದ್ದಾಗಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.

ಸಂತ್ರಸ್ಥರಿಗೆ ತಲುಪಲಿರುವ ವಸ್ತುಗಳು: ಒಂದು ಸಾವಿರ ಸೀರೆ, ಒಂದು ಸಾವಿರ ರೇಮಂಡ್ಸ್ ಪ್ಯಾಂಟ್, ಶರ್ಟ್, 1,500 ಕಂಬಳಿ, ಮಕ್ಕಳಿಗೆ ಸ್ವೆಟರ್‌ಗಳು, ಬಟ್ಟೆ, ಮಹಿಳೆಯರು ಬಳಸುವ ಉಡುಪು, ವಸ್ತುಗಳು, ಎರಡು ಸಾವಿರ ಕಿಟ್ ಬ್ಯಾಗ್‌ಗಳನ್ನು ವಿತರಿಸುತ್ತಿದ್ದು, ಈ ಬ್ಯಾಗ್‌ನಲ್ಲಿ ಒಂದು ಲೀಟರ್ ರೀಫೈಂಡ್ ಆಯಿಲ್, ಐದು ಕೆ.ಜಿ. ಅಕ್ಕಿ, 250 ಗ್ರಾಂ ಸಾಂಬಾರ್ ಪದಾರ್ಥ, ಹುಣಸೆ ಹಣ್ಣು ಇರಲಿದೆ. ಇದರ ಜತೆಗೆ ಬಿಸ್ಲೆರಿ ನೀರಿನ ಬಾಟೆಲ್‌ಗಳನ್ನು ತೀವ್ರ ಹಾನಿಗೀಡಾಗಿರುವ ಬಾಗಲಕೋಟೆಗೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News