ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟದ ಹಕ್ಕೊತ್ತಾಯಗಳು

Update: 2019-08-16 18:15 GMT

ಭಾರತ ಸಂವಿಧಾನದ 370ನೇ ವಿಧಿಯ ರದ್ದತಿ, ಜಮ್ಮು ಮತ್ತು ಕಾಶ್ಮೀರದ ವಿಭಜನೆ ಮತ್ತು ಅದರ ರಾಜ್ಯ ಸ್ಥಾನಮಾನವನ್ನು ಕಿತ್ತುಹಾಕಿದ ಕೇಂದ್ರ ಸರಕಾರದ ಕ್ರಮವನ್ನು ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟವು(ಪಿಯುಸಿಎಲ್) ಖಂಡಿಸುತ್ತದೆ. ಕೇಂದ್ರದ ಈ ಕ್ರಮವೇ ವಂಚನೆಯದ್ದು. ಅದನ್ನು ಅನುಷ್ಠಾನಗೊಳಿಸಿರುವ ಪ್ರಕ್ರಿಯೆಯಂತೂ ಮತ್ತೂ ಹೆಚ್ಚಿನ ಪ್ರಕ್ರಿಯೆಯ ದಾರಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಸಂವಿಧಾನ ವಿಧಿಸಿರುವ ನಿಯಮಗಳು, ಕ್ರಮಗಳು ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಕಾಶ್ಮೀರದ ಸ್ಥಾನಮಾನದ ಬದಲಾವಣೆಯನ್ನು ಕನಿಷ್ಠ ಕಾಶ್ಮೀರದ ಜನತೆಯನ್ನು ಕೇಳದೆ, ಸಂಪೂರ್ಣ ಏಕಪಕ್ಷೀಯವಾಗಿ, ಸರಕಾರಿ ವ್ಯವಹಾರದಲ್ಲಿ ಅನುಸರಿಸಬೇಕಾದ ಸಾಂಕೇತಿಕವಾದ ಕ್ರಮಗಳನ್ನು ಅನುಸರಿಸದೆ ಕಳ್ಳತನದಿಂದ ಮಾಡಲಾಗಿದೆ ಎಂಬುದು ನಮ್ಮ ದುಃಖಕ್ಕೆ ಕಾರಣವಾಗಿದೆ.

4.8.2019 ಮತ್ತು 5.8.2019ರ ನಡುವಿನ ರವಿವಾರದ ಮಧ್ಯರಾತ್ರಿಯಲ್ಲಿ ಸುಮಾರು 35,000 ಸೈನಿಕರನ್ನು ಇಳಿಸಿದ ಆನಂತರ, ಅಮರನಾಥ ಯಾತ್ರಿಕರು ಹಾಗೂ ಪ್ರವಾಸಿಗರನ್ನು ಜಾಗಬಿಡುವಂತೆ ಮಾಡಿ ಭಯದ ವಾತಾವರಣ ಮೂಡಿಸಿದ ಬಳಿಕ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿಯವರನ್ನು ದಸ್ತಗಿರಿ ಮಾಡಿರುವ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ರೀತಿಯ ಸಂಪರ್ಕ ಮಾಧ್ಯಮಗಳು ಮತ್ತು ಕಣಿವೆಗೆ ಬರುವ, ಕಣಿವೆಯಿಂದ ಹೋಗುವ ದೂರಸಂಪರ್ಕ ಸೇವೆಯನ್ನು ರದ್ದುಗೊಳಿಸಿ, ಕರ್ಫ್ಯೂ ಹಾಕುವ ಮೂಲಕ ಜನರ ಚಲನವಲನವನ್ನು ನಿಯಂತ್ರಿಸಿ, ಇಡೀ ರಾಜ್ಯವನ್ನು ನೀರವ ಸ್ಮಶಾನ ಮೌನಕ್ಕೆ ದೂಡಲಾಗಿದೆ. ಈ ಉಪಕ್ರಮಗಳಿಂದ ದೈನಂದಿನ ಜೀವನದಲ್ಲಿ ಹಠಾತ್ ಬದಲಾವಣೆ, ಅರಾಜಕತೆ, ಕ್ಷೋಭೆಗಳನ್ನು ಹೇರಲಾಗಿದೆ. ಕಾಶ್ಮೀರದ ಒಳಗೆ ವಿದ್ಯಾರ್ಥಿಗಳ ಪ್ರವೇಶವನ್ನು ಪ್ರತಿಬಂಧಿಸಲಾಗಿದೆ. ಕಾಶ್ಮೀರದಿಂದ ಹೊರಗಿರುವವರು, ತಮ್ಮ ಕುಟುಂಬದವರ ಸಂಪರ್ಕ ಸಾಧಿಸಲಾಗದೆ ಭಯಗ್ರಸ್ತರಾಗಿದ್ದಾರೆ.

ಹಿಂದೆ ಎಂದೂ ನಡೆಯದ ಈ ಎಲ್ಲ ಕ್ರಿಯೆಗಳ ಹಿಂದಿನ ಕುತ್ಸಿತ ಯೋಜನೆ 5.8.2019ರಂದು ಜಗಜ್ಜಾಹೀರಾಯಿತು. ಕೆಂದ್ರ ಸರಕಾರ ಕ್ಷಿಪ್ರವಾಗಿ 370ನೇ ವಿಧಿಯ ಬಹು ಮುಖ್ಯ ಅಂಶಗಳನ್ನು ರದ್ದುಗೊಳಿಸಿತು. ಈ ಕಾರಣದಿಂದ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಯಿತು. ಜಮ್ಮು ಮತ್ತು (ಲಡಾಖ್ ಸೇರಿ) ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಲಾಯಿತು.

ಭಾರತ ಸಂವಿಧಾನದ 370ನೇ ವಿಧಿಯು ಸ್ವಯಂಪೂರ್ಣವಾದ ವಿಧಿಯಾಗಿದೆ. ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಹೇಗೆ ಅಳವಡಿಸಬೇಕೆಂಬುದನ್ನು ಅದು ತಿಳಿಸುತ್ತದೆ. ಅದೇ ಸಮಯ 370ನೇ ವಿಧಿಯನ್ನು ರದ್ದುಗೊಳಿಸುವ ಕ್ರಮವನ್ನೂ ಅದೇ ವಿಧಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಈ 370ನೇ ವಿಧಿಯನ್ನು ರದ್ದುಗೊಳಿಸಲು ಶಿಫಾರಸು ಮಾಡಿದರೆ ಮಾತ್ರ ರಾಷ್ಟ್ರಪತಿ 370(3)ನೇ ವಿಧಿಯನ್ನು ಬಳಸಿ, 370ನೇ ವಿಧಿಯನ್ನು ರದ್ದುಗೊಳಿಸಬಹುದು.

1957ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ, ಸರ್ವೋಚ್ಚ ನ್ಯಾಯಾಲಯದ ಎಸ್‌ಬಿಐ ವರ್ಸಸ್ ಸಂತೋಷ ಗುಪ್ತಾ ಪ್ರಕರಣ (2017) ನೀಡಿದ ತೀರ್ಪು ಮತ್ತೊಮ್ಮೆ ಸಂವಿಧಾನ ಸಭೆ ಅಸ್ತಿತ್ವಕ್ಕೆ ಬರುವವರೆಗೆ 370ನೇ ವಿಧಿ ಶಾಶ್ವತ ಎಂದು ತಿಳಿಸುತ್ತದೆ. ಈ ಅಡ್ಡಿಯನ್ನು ನಿವಾರಿಸಿಕೊಳ್ಳುವ ಸಲುವಾಗಿ ಕೇಂದ್ರ ಬಿಜೆಪಿ ಸರಕಾರ, ಅಸಾಂವಿಧಾನಿಕ ಹಾಗೂ ಅಡ್ಡದಾರಿಗಳನ್ನು ಅನುಸರಿಸಿದೆ.

ನಮ್ಮ ಸಂವಿಧಾನ ಕೊಡಮಾಡುವ ಎಲ್ಲ ಸೇವೆ ಮತ್ತು ರಕ್ಷಣೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿಸುವ ಉದ್ದೇಶದಿಂದ ಆಯಾ ಸಂದರ್ಭದಲ್ಲಿ ಆಗಾಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ 370(1)(ಡಿ) ವಿಧಿಯಲ್ಲಿ ರಾಷ್ಟ್ರಪತಿಯವರಿಗೆ ವಿಶೇಷವಾದ ಅಧಿಕಾರ ನೀಡುತ್ತದೆ. ಸಂವಿಧಾನದಲ್ಲಿ ವಿವಿಧ ನುಡಿಗಟ್ಟುಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬುದನ್ನು 367ನೇ ವಿಧಿ ಹೇಳುತ್ತದೆ. 370ನೇ ವಿಧಿಯ ರದ್ದಿಗೆ ಸಂವಿಧಾನ ಸಭೆಯ ಅಗತ್ಯ ಇದೆ.

ಈ ಪ್ರಕ್ರಿಯೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಅನುಸರಿಸಿದ ಕ್ರಮ ಕುತಂತ್ರ ಮತ್ತು ವಂಚನೆಯ ಕ್ರಮವಾಗಿದ್ದು, ಮೂರು ಹಂತಗಳ ತಿದ್ದುಪಡಿಯನ್ನು ಕೈಗೊಳ್ಳಲಾಯಿತು. 367ನೇ ವಿಧಿಯಲ್ಲಿ ಹೊಸ ಉಪ ನಿಬಂಧನೆ(4)ಅನ್ನು ಹೊರತರುವ ಮೂಲಕ 370(3)ನೇ ವಿಧಿಯಲ್ಲಿ ನಮೂದಿಸಿರುವ ಸಂವಿಧಾನ ಸಭೆ ಎಂಬುದನ್ನು ‘ಶಾಸನ ಸಭೆ’ ಎಂದು ಓದಿಕೊಳ್ಳಬಹುದು ಎಂಬ ಪ್ರಕಟನೆಯನ್ನು ರಾಷ್ಟ್ರಪತಿಯವರು 370(1)(ಡಿ) ಅನ್ವಯ ಹೊರಡಿಸಿದ್ದು ಮೊದಲ ಹಂತವಾಗಿದೆ. 370ನೇ ವಿಧಿಯ ತಿದ್ದುಪಡಿಗೆ ಸಂವಿಧಾನ ಸಭೆಯ ಶಿಫಾರಸಿನ ಅಗತ್ಯ ಇಲ್ಲದಂತೆ ಮಾಡುವುದು ಈ ಪ್ರಕಟನೆಯ ಪರಿಣಾಮವಾಗಿದೆ.

ಜಮ್ಮು ಮತ್ತು ಕಾಶ್ಮೀರವು ಡಿಸೆಂಬರ್ 2018ರಿಂದ ರಾಷ್ಟ್ರಪತಿಯವರ ಆಳ್ವಿಕೆಯಲ್ಲಿದೆ. ರಾಜ್ಯ ವಿಧಾನಸಭೆಯ ಅಧಿಕಾರಗಳು ಈಗ ರಾಷ್ಟ್ರಪತಿಯವರ ಬಳಿಯಲ್ಲಿವೆ. ಇದರಿಂದ ಜಮ್ಮು ಮತ್ತು ಕಾಶ್ಮಿರದ ವರಿಷ್ಠರಾದ ರಾಷ್ಟ್ರಪತಿಯವರ ಶಿಫಾರಸಿನ ಮೇಲೆ ರಾಷ್ಟ್ರಪತಿಯವರು 370ನೇ ವಿಧಿಯನ್ನು ರದ್ದುಗೊಳಿಸುವ ಪ್ರಹಸನ ನಡೆಯಿತು.

ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನೇರವಾಗಿ ಮಾಡಬಾರದಿದ್ದುದನ್ನೇ ಪರೋಕ್ಷವಾಗಿ ಬಿಜೆಪಿ ಸರಕಾರ ಸಾಂವಿಧಾನಿಕ ಕ್ರಮಗಳನ್ನು ಅಸಿಂಧುಗೊಳಿಸಿ ಕ್ರಮಕೈಗೊಂಡಿತು.

ಸಾಂವಿಧಾನಿಕ ಕ್ರಮಗಳು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಈ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ಮತ್ತು ಈ ಸರಕಾರದ ಇತ್ತೀಚಿನ ಎಲ್ಲ ನಡವಳಿಕೆಗಳೂ ಇದೇ ಮಾದರಿಯಲ್ಲಿರುವುದು ನಮ್ಮನ್ನು ದಿಗಿಲುಗೊಳಿಸುತ್ತಿದೆ. ಆರ್ಥಿಕ ಮಸೂದೆಯಂತಹ ಗಂಭೀರ ಪರಿಣಾಮ ಉಂಟುಮಾಡುವ ಉಪಕ್ರಮಗಳಲ್ಲಿಯೂ ಇದೇ ನಡವಳಿಕೆ ಕಂಡುಬರುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಸ್ಥಾನವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸಿರುವುದು ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನತೆಗೆ ಇದ್ದ ಕನಿಷ್ಠ ಪ್ರಜಾಸತ್ತಾತ್ಮಕ ಅವಕಾಶವನ್ನು ಇದು ಕಸಿಯುತ್ತಿದೆ. ಇದು ಭಾರತದಿಂದ ಪ್ರತ್ಯೇಕೀಕರಣಗೊಳ್ಳಲು ಇಂಬುಕೊಡಬಹುದು.

370ನೇ ವಿಧಿಯು, ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ವಿಲೀನಕ್ಕೆ ತೊಡಕಾಗಿತ್ತು ಮತ್ತು ಅಭಿವೃದ್ಧಿಗೆ ಮಾರಕವಾಗಿತ್ತು ಎಂಬುದು ಅತಾರ್ಕಿಕವಾದುದು ಮತ್ತು ಸುಳ್ಳು. 5.8.2019ರ ಹಿಂದಿನ 370ನೇ ವಿಧಿಯು ಕಾಶ್ಮೀರ ಜನತೆಯ ವಿಶಿಷ್ಟ ಅಸ್ಮಿತೆ ಮತ್ತು ಸ್ವಾಯತ್ತೆಗಳನ್ನು ಗುರುತಿಸಲು ತರಲಾದ ಕಾನೂನಾಗಿತ್ತು. ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರಗಳ ವಿಲೀನದ ಸಂದರ್ಭ ಮತ್ತು ಇತಿಹಾಸ ಇವುಗಳಿಂದ 370ನೇ ವಿಧಿಯು ಅವಶ್ಯಕವಾಗಿತ್ತು. ಭಾರತದೊಂದಿಗೆ ವಿಲೀನಕ್ಕೆ ಎಂದೂ ವಿವಾದ ಇರದ ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾಶ್ಮೀರದ ರಾಜಕೀಯ ಮತ್ತು ಪ್ರತಿಪಕ್ಷದ ನಾಯಕರನ್ನು ಮುನ್ನೆಚ್ಚರಿಕೆಯಾಗಿ ಬಂಧನದಲ್ಲಿರಿಸಿ ರಾಜ್ಯದ ಮುಖ್ಯ ಆಗುಹೋಗುಗಳಲ್ಲಿ ಅವರನ್ನು ಕತ್ತಲಲ್ಲಿ ಇರಿಸಿರುವುದು ಕಳವಳಕಾರಿಯಾಗಿದೆ. ಈ ಎಲ್ಲ ಪ್ರಕ್ರಿಯೆಗಳಿಂದ ಕಾಶ್ಮೀರಿಗಳ ಬದುಕು, ಅವರ ಆಕಾಂಕ್ಷೆ, ಭರವಸೆ ಮತ್ತು ಅವರ ಹಕ್ಕುಗಳಿಗೆ ತೀವ್ರ ಪೆಟ್ಟುಬಿದ್ದಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನ ತಪ್ಪಿಸಿರುವುದಕ್ಕೆ ಮತ್ತೊಂದು ದುಷ್ಟ ಆಯಾಮವೂ ಇರಬಹುದೆಂದು ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟವು ಕಳವಳಪಡುತ್ತದೆ. ಇದು ಇಲ್ಲಿಯ ನೈಸರ್ಗಿಕ ಸಂಪನ್ಮೂಲ, ನೀರು, ಬೆಟ್ಟ, ಪರ್ವತಗಳು, ಅರಣ್ಯ ಹೊಲಗದ್ದೆಗಳ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರವೂ ಇರುವಂತಿದೆ.

ಕಾಶ್ಮೀರದ ಸಾಮಾನ್ಯ ಪ್ರಜೆಗೆ ಇವುಗಳನ್ನು ಇಲ್ಲವಾಗಿಸಿ, ಇಡೀ ಕಾಶ್ಮೀರ ಕಣಿವೆಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಪ್ಪಿಸುವ ಉಪಕ್ರಮವೂ ಇದಾಗಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಗೃಹಸಚಿವರು ಕಾಶ್ಮೀರ ಹೇಗೆ ಕತ್ತಲಯುಗದಲ್ಲಿದೆ, ಅದನ್ನು ಮುಖ್ಯವಾಹಿನಿಗೆ ತಂದು ಬೇರೆ ರಾಜ್ಯಗಳ ಜನರು ಭೂಮಿಕೊಂಡು, ಮನೆ ನಿರ್ಮಿಸಿ, ಬದುಕುವಂತೆ ಆಗಬೇಕೆಂದು ತಮ್ಮ ಭಾಷಣದುದ್ದಕ್ಕೂ ಹೇಳಿದ್ದನ್ನು ಗಮನಿಸಬಹುದು.

ಬಿಜೆಪಿ ಸರಕಾರ, ‘ಜಮ್ಮು ಮತ್ತು ಕಾಶ್ಮೀರದ ಪುನರ್‌ರಚನೆ’ ಮಸೂದೆಯನ್ನು ಅಧ್ಯಯನ ಮಾಡಲು ಎರಡು ದಿವಸಗಳ ಅವಕಾಶವನ್ನೂ ಸಂಸದರಿಗೆ ನೀಡಲಿಲ್ಲ. ಈ ಅಂಶ ಈ ಸರಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಅಂಶಗಳಾದ ಚರ್ಚೆ ಮತ್ತು ಪರಿಶೀಲನೆಯಲ್ಲಿ ಕಿಂಚಿತ್ತೂ ವಿಶ್ವಾಸವಿಲ್ಲ ಎಂಬುದನ್ನು ತಿಳಿಸುತ್ತದೆ. ಈ ಸರಕಾರ ಸಂಸತ್ತನ್ನು ತನ್ನ ರಬ್ಬರ್ ಮೊಹರು ಮಾಡಿಕೊಂಡಿದೆ. ಇದೇ ರೀತಿ 17ನೆಯ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಆಯಿತು. ಈ ಅಧಿವೇಶನದಲ್ಲಿ ತರಾತುರಿಯಲ್ಲಿ ಜನರೊಡನೆ ಪೂರ್ವಭಾವಿ ಚರ್ಚೆಯಿಲ್ಲದೆ, ಈ ಮಸೂದೆಗಳ ಫಲಾನುಭವಿಗಳೊಡನೆ ಯಾವುದೇ ಚರ್ಚೆ ಇಲ್ಲದೆ 32 ಮಸೂದೆಗಳನ್ನು ಕಾಯ್ದೆಯಾಗಿಸಲಾಯಿತು. ಇನ್ನು ಮುಂದೆ ಸಂಭವಿಸಬಹುದಾದ ದುರಂತಕ್ಕೆ ಇದು ಸಂಕೇತ ಎಂಬುದು ನಮ್ಮ ಭಯಕ್ಕೆ ಕಾರಣ.

ಭಾರತದ ಯಾವತ್ತೂ ಪ್ರಜೆಗಳು ಸಂಸತ್ತಿನಲ್ಲಿ 5.8.2019ರಂದು ನಡೆದ ಬೆಳವಣಿಗೆಗಳನ್ನು ಪರಿಶೀಲಿಸಿ, ಇದು ಕಾಶ್ಮೀರಿಗಳ ದಮನದ ಯತ್ನ ಎಂದು ಭಾವಿಸಬೇಕೆಂದೂ ಸರಕಾರದ ಈ ಕ್ರಮಗಳನ್ನು ಶಾಂತಿಯುತವಾಗಿ ವಿರೋಧಿಸಬೇಕೆಂದೂ ಕರೆನೀಡುತ್ತದೆ. ಕಾಶ್ಮೀರದ ಜನತೆಯೊಂದಿಗೆ ನಾವು ಇದ್ದೇವೆ ಎಂದು ಅಲ್ಲಿಯ ಸೋದರ-ಸೋದರಿಯರು ಭಾವಿಸಬೇಕೆಂದೂ, ಸರಕಾರದ ಕ್ರಮಗಳಿಂದ ಆದ ಸಂಕಟ ಮತ್ತು ಹಾನಿಯಲ್ಲಿ ನಾವೂ ಪಾಲುದಾರರು ಎಂಬುದನ್ನು ಈ ಮೂಲಕ ತಿಳಿಸುತ್ತೇವೆ.

ಒಕ್ಕೂಟದ ಹಕ್ಕೊತ್ತಾಯಗಳು
1. ಕಾಶ್ಮೀರ ಕಣಿವೆಯಲ್ಲಿ ಸ್ಥಗಿತಗೊಳಿಸಿರುವ ದೂರಸಂಪರ್ಕ ಸೇವೆಗಳನ್ನು ಕೂಡಲೇ ಮರುಸ್ಥಾಪಿಸಬೇಕು.
2. ಎಲ್ಲ ರಾಜಕೀಯ ಮತ್ತು ಪ್ರತಿಪಕ್ಷಗಳ ನಾಯಕರ ಬಿಡುಗಡೆಯಾಗಬೇಕು.
3. ಕಣಿವೆಯಲ್ಲಿ ದೈನಂದಿನ ವ್ಯವಹಾರ ಸುಗಮವಾಗಿ ಸಾಗುವ ವ್ಯವಸ್ಥೆಯಾಗಬೇಕು.
4. ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು.
5. 5.8.2019ರಂದು ಅಂಗೀಕಾರವಾದ ಮೂರು ಕಾಯ್ದೆಗಳನ್ನು -
() ಸಾಂವಿಧಾನಿಕ ಆದೇಶ (ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ) 2019, ರಾಷ್ಟ್ರಪತಿಯವರ ಆದೇಶ ಸಿಒ 272
(ಚಿ) ರಾಜ್ಯಸಭೆಯಲ್ಲಿ ಮಂಡಿಸಿದ ಶಾಸನಬದ್ಧ ನಿರ್ಣಯ
(್ಚ) ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಮಸೂದೆ
- ಇವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.
6. ಕಾಶ್ಮೀರದ ಬಗ್ಗೆ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಕಾಶ್ಮೀರಿ ಜನತೆಯೊಂದಿಗೆ ಚರ್ಚಿಸಿಯೇ ತೆಗೆದುಕೊಳ್ಳಬೇಕು.

ರವಿ ಕಿರಣ್ ಜೈನ್, ರಾಷ್ಟ್ರೀಯ ಅಧ್ಯಕ್ಷರು
ಡಾ.ವಿ. ಸುರೇಶ್, ರಾಷ್ಟ್ರೀಯ ಕಾರ್ಯದರ್ಶಿ
ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್)
332, ಪ್ರತಾಪ್ ಗಂಜ್, ಆನಂದಲೋಕ್ ಅಪಾರ್ಟ್‌ಮೆಂಟ್ ಎದುರು, ಮಯೂರ್‌ವಿಹಾರ್ -1 ದಿಲ್ಲಿ 110091

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News