ರಾಜ್ಯದ ಮಳೆ, ಪ್ರವಾಹ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಕೋಡಿಹಳ್ಳಿ ಚಂದ್ರಶೇಖರ್

Update: 2019-08-17 16:44 GMT

ಬೆಂಗಳೂರು, ಆ.17: ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ರಾಜ್ಯ ಸರಕಾರ ಇವರ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗಿದೆ. ಸರಕಾರ ಒಂದು ಕುಟುಂಬಕ್ಕೆ ಹತ್ತು ಸಾವಿರ ನೀಡುವುದಾಗಿ ಹೇಳುತ್ತಿರುವುದು ರಾಜ್ಯದ ರೈತರಿಗೆ ಸರಕಾರ ಮಾಡುತ್ತಿರುವ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರವಾಹದಿಂದ ನಷ್ಟವಾಗಿರುವ ಸ್ಥಳ ಪರಿಶೀಲನೆ ಮಾಡಿ ನಷ್ಟಕ್ಕೆ ಸರಿಸಮಾನವಾಗಿ ಪರಿಹಾರ ನೀಡಬೇಕು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, 5 ಸಾವಿರ ಕೋಟಿ ರೂಗಳನ್ನು ವಿಪತ್ತು ನಿಧಿಯಾಗಿ ಮೀಸಲಿಡಬೇಕು. ಬೆಳೆ ನಷ್ಟ, ದನ ಕರುಗಳನ್ನು ಕಳೆದುಕೊಂಡವರಿಗೆ ಮತ್ತು ಮನೆ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು. ಮುಳುಗಡೆಯಾಗಿರುವ ಗ್ರಾಮಗಳನ್ನು ಶಾಶ್ವತವಾಗಿ ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ಜನರಿಗೆ ಸೌಲಭ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News