ಮೊದಲ ಟೆಸ್ಟ್‌ನಲ್ಲಿ ಲಂಕೆಗೆ ಜಯ

Update: 2019-08-18 08:38 GMT

ಗಾಲೆ, ಆ.18: ನಾಯಕ ದಿಮುತ್ ಕರುಣರತ್ನೆ ಬಾರಿಸಿದ ಶತಕದ ನೆರವಿನಲ್ಲಿ ಶ್ರೀಲಂಕಾ ಇಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 6 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.

   ಗಾಲೆಯಲ್ಲಿ ಪಂದ್ಯದ ಐದನೇ ಹಾಗೂ ಅಂತಿಮ ದಿನವಾಗಿರುವ ರವಿವಾರ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 268 ರನ್ ಗಳಿಸಬೇಕಿದ್ದ ಶ್ರೀಲಂಕಾ 86.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿತು. ಇದರೊಂದಿಗೆ ಶ್ರೀಲಂಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಟೆಸ್ಟ್‌ನ ನಾಲ್ಕನೇ ದಿನವಾಗಿರುವ ಶನಿವಾರ ಆಟ ನಿಂತಾಗ ಶ್ರೀಲಂಕಾ 50 ಓವರ್‌ಗಳಲ್ಲಿವಿಕೆಟ್ ನಷ್ಟವಿಲ್ಲದೆ 133 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆರಂಭಿಕ ದಾಂಡಿಗರಾದ ದಿಮುತ್ ಕರುಣರತ್ನೆ (ಔಟಾಗದೆ 71) ಮತ್ತು ಲಹಿರು ತಿರಿಮನ್ನೆ (ಔಟಾಗದೆ 57) ಗಳಿಸಿ ಕ್ರೀಸ್‌ನಲ್ಲಿದ್ದರು. ಅಂತಿಮ ದಿನ ಶ್ರೀಲಂಕಾ 135 ರನ್ ಸೇರಿಸಿ ಗೆಲುವಿನ ನಗೆ ಬೀರಿತು. ದಿಮುತ್ ಮತ್ತು ಲಹಿರು ಆಟ ಮುಂದುವರಿಸಿ ಮೊದಲ ವಿಕೆಟ್‌ಗೆ 161 ರನ್‌ಗಳ ಜೊತೆಯಾಟ ನೀಡಿದರು. ಲಹಿರು ತಿರಿಮನ್ನೆ ನಿನ್ನೆಯ ಮೊತ್ತಕ್ಕೆ 7 ರನ್ ಸೇರಿಸಿದರು. 64 ಗಳಿಸಿದ ತಿರಿಮನ್ನೆ ಅವರನ್ನು ವಿಲಿಯಮ್ ಸೊಮೆರ್‌ವಿಲ್ಲೆ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ನಾಯಕ ದಿಮುತ್ ಕರುಣರತ್ನೆ ತನ್ನ 9ನೇ ಶತಕ ದಾಖಲಿಸಿದರು. ಅವರು 243 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 122 ರನ್ ಗಳಿಸಿ ಔಟಾದರು. ಕುಸಲ್ ಮೆಂಡಿಸ್ 10ರನ್, ಕುಸಲ್ ಪೆರೆರಾ 23ರನ್ ಗಳಿಸಿ ಔಟಾದರು. ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 28 ರನ್ ಮತ್ತು ಧನಂಜಯ ಡಿ ಸಿಲ್ವ ಔಟಾಗದೆ 14 ರನ್ ಗಳಿಸಿ ತಂಡದ ಗೆಲುವಿನ ವಿಧಿವಿಧಾನವನ್ನು ಪೂರೈಸಿದರು.

ಶ್ರೀಲಂಕಾ ಈ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಖಾತೆಗೆ 60 ಪಾಯಿಂಟ್‌ಗಳನ್ನು ಸೇರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News