ಕನಸಿಗೆ ಬಣ್ಣ ಬಂದಾಗ...

Update: 2019-08-18 09:49 GMT

ಎಷ್ಟೋ ಹೊತ್ತಿನಿಂದ ಅವಳು ಮಗುವನ್ನು ಎತ್ತಿಕೊಂಡು ತಿರುಗಾಡುತ್ತಿದ್ದಳು.‘ಜೋ, ಜೋ ಲಾಲಿ... ಜೋ ಮುದ್ದು ಕಂದಾ..’ ಹೀಗೆ ಹಾಡಿ ಹಾಡಿ ಅವಳಿಗೆ ಸುಸ್ತಾಗಿತ್ತು. ಅಂತೂ ಮಗು ಅವಳ ತೋಳಲ್ಲಿ ನಿದ್ರೆಗೆ ಜಾರಿತು. ಮೆಲ್ಲನೆ ತೊಟ್ಟಿಲಲ್ಲಿ ಮಲಗಿಸಿದಳು. ಇನ್ನು ಯಾವುದಾದರೂ ಶಬ್ದದಿಂದ ಅದು ಪುನಃ ಎಚ್ಚರಗೊಂಡು ಅಳುವುದು ಬೇಡವೆಂದು ಪಿಸುಮಾತಲ್ಲಿ ಗಂಡನ ಬಳಿ ‘ಮಗುವನ್ನು ಸ್ವಲ್ಪ ನೋಡಿಕೊಳ್ಳಿ’ ಎಂದು ಹೇಳಿ ಸ್ನಾನಕ್ಕೆ ಹೊರಡಲನುವಾದಳು. ಅವಳ ಗಂಡ ಸೃಜನ್ ವಿದೇಶದಲ್ಲಿ ಉದ್ಯೋಗಿ. ರಜೆಗೆ ಮನೆಗೆ ಬಂದಿದ್ದ. ಗಡಿಬಿಡಿಯಿಂದ ಬಾತ್ ರೂಮ್ ಕಡೆ ಹೊರಟ ಹೆಂಡತಿಯನ್ನು ತುಂಟತನದಿಂದ ಕೈ ಹಿಡಿದೆಳೆದ. ಹುಸಿಮುನಿಸಿನಿಂದ ಅವನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವಳ ತಲೆ ಗೋಡೆಗೆ ಬಡಿಯಿತು.

‘ಅಮ್ಮಾ..’ ಮೆಲ್ಲನೆ ಕಿರುಚಿಕೊಂಡಳು. ಒಂದು ಕ್ಷಣ ಅವಳಿಗೆ ತಾನೆಲ್ಲಿದ್ದೇನೆಂದೇ ಅರ್ಥವಾಗಲಿಲ್ಲ.‘ನನ್ನ ಮಗು, ಗಂಡ...ಎಲ್ಲಿ?’ ಸ್ವಲ್ಪ ಹೊತ್ತಿನ ಬಳಿಕ ಅವಳು ವಾಸ್ತವ ಲೋಕಕ್ಕೆ ಬಂದಳು.‘ಅಂದರೆ, ನಾನೀಗ ಕಂಡದ್ದು ಬರೀ ಕನಸು!...’ ಅವಳಿಗೆ ಅಳು ಬಂತು. ರಜೆಗೆ ಬಂದಿದ್ದ ಸೃಜನ್ ಒಂದೂವರೆ ತಿಂಗಳ ಹಿಂದೆ ಮರಳಿ ಹೋಗಿದ್ದ. ಪ್ರತಿಸಲ ಅವನು ರಜೆಗೆ ಬಂದಾಗಲೂ ದಿವ್ಯಾ ತಾನು ಈ ಸಲವಾದರೂ ಗರ್ಭ ಧರಿಸುವಂತಾಗಲೆಂದು ಕಂಡಕಂಡ ದೇವರಿಗೆಲ್ಲಾ ಹರಕೆ ಹೊತ್ತುಕೊಳ್ಳುತ್ತಿದ್ದಳು. ಆದರೆ ಇನ್ನೂ ಆ ಪ್ರಾರ್ಥನೆಗೆ ಉತ್ತರ ಸಿಕ್ಕಿರಲಿಲ್ಲ. ಮದುವೆಯಾಗಿ ಎರಡೇ ತಿಂಗಳಲ್ಲಿ ಸೃಜನ್ ವಿದೇಶಕ್ಕೆ ಮರಳಿದಾಗ ಅವನನ್ನು ಬಿಟ್ಟಿರಬೇಕಲ್ಲ ಎಂಬ ಕೊರಗಷ್ಟೇ ಅವಳಿಗಿತ್ತು. ಆದರೆ ಮದುವೆಯಾಗಿ ಈಗ ನಾಲ್ಕು ವರ್ಷಗಳಾಗುತ್ತಾ ಬಂದಿತ್ತು. ವರ್ಷಂಪ್ರತಿ ಸೃಜನ್ ರಜೆ ಪಡೆದು ಊರಿಗೆ ಬಂದು ಸುಮಾರು ಒಂದು ತಿಂಗಳ ಕಾಲ ಉಳಿದು ಹಿಂದಿರುಗುತ್ತಿದ್ದ. ಅವನಿಗೆ ತನ್ನ ಮಡದಿಯ ಮೇಲೆ ಅತೀವ ಪ್ರೀತಿಯಿತ್ತು. ಅವನೆಷ್ಟು ಸಮಾಧಾನಿಸಲು ಯತ್ನಿಸಿದರೂ ಮಗುವಾಗಿಲ್ಲ ಎಂಬ ಕೊರಗು ಮಾತ್ರ ದಿವ್ಯಾಳನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಸೃಜನ್ ಹಿಂದಿರುಗಿದ ಮೇಲೆ ಈ ಪ್ರಪಂಚದಲ್ಲೇ ತಾನು ಒಂಟಿಯಾಗಿಬಿಟ್ಟಿದ್ದೇನೆ ಎಂಬ ಭಾವನೆ ಅವಳನ್ನು ಆವರಿಸುತ್ತಿತ್ತು. ಪ್ರತಿದಿನ ಅವನಿಗೆ ಫೋನ್ ಮಾಡುವಾಗಲೂ ಖುಷಿಯಿಂದ ಮಾತು ಪ್ರಾರಂಭಿಸಿ, ಮಗುವಾಗಿಲ್ಲ ಎಂಬ ನೋವನ್ನು ತೋಡಿಕೊಂಡು ಅಳುತ್ತಾ ಫೋನಿಡುತ್ತಿದ್ದಳು. ಇವಳ ನೋವನ್ನು ನೋಡಲಾಗದೇ ಸೃಜನ್ ಹಿಂದಿನ ಬಾರಿ ಬಂದಾಗ ಪ್ರಖ್ಯಾತ ಗೈನಕಾಲಜಿಸ್ಟ್ ಒಬ್ಬರನ್ನು ಭೇಟಿ ಮಾಡಿಸಿದ್ದ. ಎಲ್ಲಾ ವಿಧವಾದ ಟೆಸ್ಟುಗಳನ್ನೂ ಮಾಡಿದ ಡಾಕ್ಟರ್ ಇಬ್ಬರಿಗೂ ಯಾವುದೇ ತೊಂದರೆಯಿಲ್ಲ ಎಂದಿದ್ದರು. ಆದರೂ ದಿವ್ಯಾಳಿಗೆ ಕೊರಗು ದೂರವಾಗಿರಲಿಲ್ಲ.

 ಹಿಂದಿನ ರಾತ್ರಿ ಸೃಜನ್‌ಗೆ ಫೋನ್ ಮಾಡಿ ಮಾತಾಡಿದವಳು ನಂತರ ಸುಮಾರು ಮಧ್ಯರಾತ್ರಿಯವರೆಗೂ ದಿಂಬಿಗೆ ಒರಗಿ ಕುಳಿತು ಯೋಚನೆ ಮಾಡುತ್ತಿದ್ದಳು. ಅಲ್ಲೇ ನಿದ್ರೆಗೆ ಜಾರಿದ ಅವಳು ತೂಕಡಿಸಿದಾಗ ಮಂಚದ ಬದಿಗೆ ತಲೆತಾಗಿತ್ತು. ಕನಸು ಹರಿದಿತ್ತು. ತನಗಿನ್ನೂ ಮಗುವಾಗಿಲ್ಲ, ಸೃಜನ್ ಬಳಿಯಲ್ಲಿಲ್ಲ ಎಂಬುದು ನೆನಪಾದಾಗ ಕಣ್ಣಲ್ಲಿ ನೀರು ಹರಿಯತೊಡಗಿತ್ತು. ಗಂಡನ ಎದೆಗೊರಗಿ ಮನಸಾರೆ ಅತ್ತುಬಿಡಬೇಕೆನಿಸಿತು. ತಾನು ಮಗುವಿನ ವಿಷಯ ಮಾತನಾಡಿ ಅಳುವಾಗೆಲ್ಲಾ ಅವನು ತನ್ನನ್ನು ಅಪ್ಪಿಕೊಂಡು ಸಾಂತ್ವನ ಪಡಿಸುವುದನ್ನು ನೆನೆದು ಅವನ ಸಾಮೀಪ್ಯಕ್ಕಾಗಿ ಹಂಬಲಿಸಿದಳು.‘ಸೃಜನ್, ನನಗೆ ಹಣ, ಐಶ್ವರ್ಯ ಏನೂ ಬೇಡ. ನೀವೊಬ್ರು ಜೊತೆಗಿದ್ದರೆ ಸಾಕು.. ಪ್ಲೀಸ್ ಬಂದ್ಬಿಡಿ.. ನನಗೆ ಈ ಏಕಾಂತ ಸಹಿಸಲಾಗ್ತಿಲ್ಲ..’ ದಿಂಬಲ್ಲಿ ಮುಖ ಹುದುಗಿಸಿ ಅತ್ತಳು. ಮನಸ್ಸು ಹಳೆಯದ್ದನ್ನೆಲ್ಲ ಮೆಲುಕು ಹಾಕತೊಡಗಿತು.

 ದಿವ್ಯಾಳ ಚಿಕ್ಕಪ್ಪ ಸೃಜನ್‌ನ ಕುರಿತು ಹೇಳಿದಾಗ ಮನೆಯವ ರೆಲ್ಲರಿಗೂ ಒಪ್ಪಿಯಾಗಿತ್ತು. ಹುಡುಗಿ ನೋಡುವ ಶಾಸ್ತ್ರ ಮುಗಿದು, ನಿಶ್ಚಿತಾರ್ಥವೂ ನಡೆದು ಹೋಯಿತು. ತಕ್ಕಮಟ್ಟಿಗೆ ಸುಂದರನಾದ, ವಿದೇಶದಲ್ಲಿರುವ ಹುಡುಗ ಸಿಕ್ಕಿದರೆ ಇನ್ನೇನು ಬೇಕು ಎಂದು ಅವಳು ಬೀಗಿದಳು. ನಿಶ್ಚಿತಾರ್ಥದ ದಿನ ಅವನು ತನಗೆ ನೀಡಿದ ವಿದೇಶಿ ಉಡುಗೊರೆಗಳನ್ನು ನೋಡಿದಾಗ ತನಗಿಂತ ಅದೃಷ್ಟವಂತರು ಪ್ರಪಂಚದಲ್ಲಿ ಬೇರೆ ಇಲ್ಲ ಎಂದು ಹಿಗ್ಗಿದ್ದಳು. ಅವಳ ಓರಗೆಯ ಹುಡುಗಿಯರೆಲ್ಲಾ ಇವಳ ಸೌಭಾಗ್ಯಕ್ಕೆ ಕರುಬಿದ್ದರು.‘ನೀನು ಲಕ್ಕಿ..ಮದುವೆಯಾದರೆ ಫಾರಿನ್‌ನಲ್ಲಿರುವವನನ್ನೇ ಆಗಬೇಕು’ ಎಂದು ಅವರು ಹೇಳಿದಾಗ ತನ್ನ ಅದೃಷ್ಟಕ್ಕೆ ಖುಷಿಪಟ್ಟಿದ್ದಳು. ಸೃಜನ್ ಪ್ರೀತಿಯಲ್ಲೂ ಕಡಿಮೆಯಿರಲಿಲ್ಲ. ಅವನ ಗಾಢವಾದ ಪ್ರೀತಿಗೆ ಅವಳು ತಾನು ಸ್ವರ್ಗದಲ್ಲಿದ್ದೇನೆ ಎಂಬ ಭಾವನೆ ಬಂದಿತ್ತು. ಎರಡು ತಿಂಗಳು ಕಳೆದದ್ದೇ ತಿಳಿಯಲಿಲ್ಲ. ಸೃಜನ್‌ನ ರಜೆ ಮುಗಿಯಿತು. ಅವನು ವಿದೇಶಕ್ಕೆ ಹೊರಟು ನಿಂತಾಗ ಅವಳಿಗೆ ಅವನು ವಿದೇಶದಲ್ಲಿರಬಾರದಿತ್ತು ಎಂದು ಮೊದಲ ಬಾರಿ ಎನಿಸಿತ್ತು. ಆ ವಿರಹವನ್ನು ತಡೆಯಲಾರದೇ ಬಹಳಷ್ಟು ಅತ್ತಳು. ಅವನು ಹೋಗಿ ಒಂದು ವಾರವಾಗುವ ತನಕ ಮಂಕಾಗಿದ್ದಳು. ನಂತರ ನಿಧಾನವಾಗಿ ಪರಿಸ್ಥಿತಿಗೆ ಹೊಂದಿಕೊಂಡಳು. ಗೆಳತಿಯರ ಮದುವೆಗೆ, ಸಂಬಂಧಿಕರ ಮದುವೆಗೆ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಸೃಜನ್ ಇಲ್ಲದೇ ಒಬ್ಬಂಟಿಯಾಗಿ ಹೋಗುವಾಗ ಅವಳಿಗೆ ಪುನಃ ಬೇಸರವಾಗುತ್ತಿತ್ತು. ಯುವ ದಂಪತಿಗಳು ಒಟ್ಟಾಗಿ ನಗುನಗುತ್ತಾ ಕಾರ್ಯಕ್ರಮಗಳಿಗೆ ಬರುವುದನ್ನು ನೋಡುವಾಗ ಅವಳ ದುಃಖ ಇಮ್ಮಡಿಸುತ್ತಿತು. ಆದರೂ ಸೃಜನ್‌ನಂತಹ ಪ್ರೀತಿಸುವ ಗಂಡ ತನಗಿದ್ದಾನೆ ಎಂಬ ಹೆಮ್ಮೆಯೂ ಅವಳಿಗಿತ್ತು. ಆ ದಿನ ಸುನೀತಾಳ ಮದುವೆಯಲ್ಲಿ ಪ್ರಕೃತಿ ಸಿಕ್ಕಿದ್ದಳು.‘ಹಾಯ್ ದಿವ್ಯಾ, ಹೇಗಿದ್ದೀಯಾ? ಗುಡ್ ನ್ಯೂಸ್ ಏನಾದ್ರೂ ಇದೆಯಾ. ನಿನ್ನ ನಂತರ ಮದುವೆಯಾದ ಶ್ವೇತಾಳಿಗೆ ಈಗ ಮೂರು ತಿಂಗಳು. ನಿಂದೇನು ಪ್ಲಾನಿಂಗಾ?’ ಅವಳು ಛೇಡಿಸಿದಾಗ ಜೊತೆಗಿದ್ದ ಉಳಿದವರು ನಕ್ಕರು. ದಿವ್ಯಾ ಕೂಡಾ ನಕ್ಕಳು. ಆದರೆ ಮನಸ್ಸಿನೊಳಗೆ ಸೂಜಿ ಚುಚ್ಚಿದ ಹಾಗಾಯಿತು. ಕಳೆದ ವೆಡ್ಡಿಂಗ್ ಆ್ಯನಿವರ್ಸರಿಗೆ ಸೃಜನ್ ಕಳಿಸಿದ್ದ ವಜ್ರದ ಕಿವಿಯೋಲೆಯನ್ನು ನೋಡಿ ಗೆಳತಿಯರು ಆಶ್ಚರ್ಯದಿಂದ ಉದ್ಗರಿಸುತ್ತಿದ್ದರೆ ಇವಳು ಸೃಜನ್‌ಗಾಗಿ ಹಂಬಲಿಸುತ್ತಿದ್ದಳು. ಬೇರೆ ಯಾರೂ ತನಗೆ ಮಗುವಾಗಿಲ್ಲ ಎಂಬುದರ ಕುರಿತು ಮಾತೆತ್ತದಿರಲಿ ಎಂದು ಮನದಲ್ಲೇ ಪ್ರಾರ್ಥಿಸಿದಳು. ಇವತ್ತು ಗೆಳತಿ ನಿರ್ಮಲಾಳ ಮಗುವಿನ ನಾಮಕರಣಕ್ಕೆ ಹೋಗಿದ್ದಳು. ಆ ಮಗುವಿನ ಮುದ್ದಾದ ಪುಟ್ಟ ಕೈಕಾಲುಗಳು, ಹಾಲುಗೆನ್ನೆ ಅವಳ ಮನಸ್ಸಲ್ಲಿ ಅಚ್ಚೊತ್ತಿತ್ತು. ಅದೇ ನೆನಪಲ್ಲಿ ಮಲಗಿದ್ದಕ್ಕಿರಬೇಕು ಈ ತರ ಕನಸು ಬಿದ್ದಿದೆ ಅಂದುಕೊಂಡಳು. ಗಡಿಯಾರದ ಕಡೆಗೆ ನೋಡಿದಳು. ಬೆಳಗ್ಗೆ ಐದೂವರೆ ಗಂಟೆಯಾಗಿತ್ತು. ಇನ್ನು ಮಲಗಿದರೂ ನಿದ್ರೆ ಬರಲಿಕ್ಕಿಲ್ಲ. ಬಾತ್ ರೂಮಿಗೆ ಹೋಗಿ ಬರೋಣವೆಂದು ಎದ್ದಳು. ತಲೆ ಸುತ್ತು ಬಂದ ಹಾಗಾಯ್ತು. ಬೆಡ್ಡಲ್ಲೇ ಕುಳಿತಳು.‘ಬಹುಶಃ ನನ್ನ ಚಿಂತೆ ಹೆಚ್ಚಾಗಿ ಸರಿಯಾಗಿ ನಿದ್ರೆ ಮಾಡದ್ದಕ್ಕಿರಬೇಕು, ಕೆಲವು ದಿನಗಳಿಂದ ಊಟವೂ ಸರಿಯಾಗಿ ಸೇರುತ್ತಿಲ್ಲ, ಸುಸ್ತು, ತಲೆ ಸುತ್ತುವುದು ಆಗ್ತಿದೆ’ ಅಂದುಕೊಂಡಳು. ಹತ್ತು ನಿಮಿಷದ ಬಳಿಕ ಎದ್ದು ಹೋಗಿ ಬ್ರಶ್‌ಗೆ ಪೇಸ್ಟ್ ಹಚ್ಚಿಕೊಂಡು ಬ್ರಶ್ ಬಾಯಿಗಿಟ್ಟು ಹಲ್ಲುಜ್ಜಲು ಆರಂಭಿಸಿದ್ದೇ ಹೊಟ್ಟೆ ತೊಳಸಿದಂತಾಗಿ ವಾಕರಿಕೆ ಬಂತು. ಹೇಗೋ ಬ್ರಶಿಂಗ್ ಮುಗಿಸಿ ಬಂದು ಕುಳಿತವಳ ಮನಸ್ಸಲ್ಲಿ ಮಿಂಚೊಂದು ಮೂಡಿತು.‘ಅರೇ, ತಾನು ಈ ತಿಂಗಳು ಮುಟ್ಟಾಗಿಲ್ಲ..’ ಅಷ್ಟರಲ್ಲಿ ಮನಸ್ಸು ಹೇಳಿತು,‘ಇದರ ಮೊದಲೂ ನಿಂಗೆ ಮುಟ್ಟು ತಡವಾಗಿಲ್ವಾ. ಆದರೆ ಕೆಲವು ದಿನಗಳಲ್ಲಿ ಮತ್ತೆ ಮುಟ್ಟಾಯ್ತಲ್ಲ.’‘ಏ, ಇಲ್ಲ , ಈ ಸಲ ಹಾಗಲ್ಲ, ಅದಕ್ಕಿಂತ ತಡವಾಗಿದೆ. ಜೊತೆಗೆ ವಾಕರಿಕೆ, ತಲೆ ಸುತ್ತು ಎಲ್ಲಾ ಇದೆ..ಅಂದರೆ ನನಗೆ...? ನಾನು ತಾಯಿಯಾಗ್ತಿದ್ದೇನೆ.’ ಸೃಜನ್‌ಗೆ ಫೋನ್ ಮಾಡೋಣವೆಂದು ಮೊಬೈಲ್ ಕೈಗೆತ್ತಿಕೊಂಡಳು.‘ಬೇಡ, ಯಾವುದಕ್ಕೂ ಡಾಕ್ಟರ್ ಬಳಿ ಹೋಗಿ ಕನ್ಫರ್ಮ್ ಮಾಡಿಕೊಂಡು ನಂತರ ಫೋನ್ ಮಾಡುವುದೊಳಿತು’ ಫೋನಿಟ್ಟು ಬೇಗಬೇಗ ಮನೆಕೆಲಸ ಮುಗಿಸಿ ಆಸ್ಪತ್ರೆಗೆ ಹೊರಟು ನಿಂತಳು. ತನ್ನಲ್ಲಿದ್ದ ಬಹುದೊಡ್ಡ ಭಾರವೊಂದು ಕಳಚಿದಂತಾಗಿ, ಸಂತೋಷದಲ್ಲಿ ತೇಲಾಡಿದಳು. ಮನಸ್ಸು ಅವಳ ಕನಸುಗಳಿಗೆ ಬಣ್ಣ ತುಂಬ ತೊಡಗಿತ್ತು.

Writer - ಜೆಸ್ಸಿ ಪಿ.ವಿ. ಪುತ್ತೂರು

contributor

Editor - ಜೆಸ್ಸಿ ಪಿ.ವಿ. ಪುತ್ತೂರು

contributor

Similar News