ಶಿವಮೊಗ್ಗದ ಹುಡುಗಿಯ‌ ಭಾಷಣದ ಹಿಂದೆ ಸಂಘದ ಬಿಂಬ...?

Update: 2019-08-18 12:17 GMT

ಸ್ವಾತಂತ್ರ್ಯದ ದಿನ ಶಿವಮೊಗ್ಗದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಮಾಡಿದ ಭಾಷಣದ 'ಧ್ವನಿಸುರುಳಿ' ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಅರ್ಹವಾಗುತ್ತಲೇ ಇವೆ. ಆ ಪುಟ್ಟಹುಡುಗಿ ಮಾತನಾಡುವ ಶೈಲಿ ಅದ್ಭುತ, ಮೆಚ್ಚಲೇ ಬೇಕು. 

ಆದರೆ ಅವಳು ಹೇಳುವ ವಿಷಯ, ಅವಳಿಗೆ ಬರೆದು ಕೊಟ್ಟವರ ಅಥವಾ ತಿಳಿಸಿ ಕೊಟ್ಟವರ ಮನದಿಂಗಿತದ ಬಗ್ಗೆ ಯಾರೂ ಗಮನ ಹರಿಸದೇ ಇರುವುದು ವಿಷಾದನೀಯ.!

ಪುಟಾಣಿ, ಹರಳು ಹುರಿದಂತೆ ಮಾತು ಹೊರಳಿಸುವ ಚಂದಕ್ಕೆ ಜನ ದಂಗಾಗಿ, ಆ ಸುಂದರ ವಿವರಣೆಯ ಹಿಂದೆ ಹೊಂಚು ಹಾಕಿ ಕುಳಿತ  'ಸಂಘ ಮನಸ್ಸು' ಇದೆ ಎನ್ನುವುದನ್ನು ಯಾರೂ ಗುರುತಿಸಿದಂತಿಲ್ಲ.!

ಭಾಷಣವನ್ನು ಏಕಾಗ್ರತೆಯಿಂದ ಆಲಿಸಿದರೆ, ಬಾಲಕಿಯ ಹೇಳಿಕೆಗಳು ಪೂರ್ತಿ ನಿಜವಲ್ಲ ಎಂದು ತಿಳಿಯುತ್ತದೆ. ಅಂಧಶ್ರದ್ಧೆಗಳ-ಮೂಡನಂಬಿಕೆಗಳ ಮತ್ತು ಜೀವನೋತ್ಸಾಹ ಕಸಿದು ಕೊಳ್ಳುವ ಜೋತಿಷ್ಯ, ಕವಡೆ ಶಾಸ್ತ್ರಗಳ ಶ್ರೇಷ್ಠತೆ, ಶುದ್ಧ ಸುಳ್ಳಲ್ಲವೇ ?  ಆತ್ಮಹತ್ಯೆ, ಹತ್ಯೆ-ಹಲ್ಲೆಗಳಿಗೆ ಹೇತುವಾಗಿದ್ದೇ ಈ ಬುರುಡೆ ಶಾಸ್ತ್ರಗಳ ಈ ತನಕದ ಹೆಗ್ಗಳಿಕೆ.

ಭಾರತ, ಪರಾಕ್ರಮಿ ಅರಸರ ತವರಾಗಿತ್ತು ಎನ್ನುವ ವಿವರಣೆ ಸತ್ಯ ಎಂದು ಒಪ್ಪಿದರೆ, ಹದಿನೇಳು ಬಾರಿ 'ಘಝ್ನಿ ಮುಹಮ್ಮದ್' ಬಂದು ಲೂಟಿ ಮಾಡಿದ ಎನ್ನುವ ಇತಿಹಾಸ ಬೊಗಳೆಯೇ ? ವಿಜ್ಞಾನ  ವಿಜ್ರಂಭಿಸಿತ್ತು ಎಂದು ನಂಬುವುದಾದರೆ, ಅಸ್ಪ್ರಶ್ಯತೆ, ಸಹಗಮನ, ದೇವದಾಸಿ, ವಿಧವಾ ವಿವಾಹಕ್ಕೆ ನಿರಾಕರಣೆ, ಗಂಡ ಸತ್ತರೆ ಹೆಂಡತಿ ಅಮಂಗಳೆಯಾಗಿರಬೇಕೆಂಬ ಕಟ್ಟಲೆಗಳೆಲ್ಲಾ ಆ ಶ್ರೇಷ್ಠ ವಿಜ್ಞಾನದ ಕೊಡುಗೆಗಳೇ ?

ಬಾಲಕಿ ಹೇಳಿ ಕೊಂಡ ಮಾಹಿತಿಗಳಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ  ಪ್ರಮುಖ ಪಾತ್ರ ನಿರ್ವಹಿಸಿದ ನೆಹರೂ ಕುಟುಂಬದ ಸುಳಿವೇ ಇಲ್ಲ, ನೆಹರೂ ಹೆಸರೆತ್ತದೇ ನೀಡಿದ ವರದಿ ಭಾರತೀಯರ ಸ್ವಾತಂತ್ರ್ಯದ ಸಮರ ವಿವರವಾಗಲು ಹೇಗೆ ಸಾಧ್ಯ ? ಇದು ಷಡ್ಯಂತ್ರ ಅಲ್ಲದೆ ಇನ್ನೇನು ?

ಸ್ವಾತಂತ್ರ್ಯ ಪೂರ್ವದಲ್ಲಿ ನೆಹರೂ ಕುಟುಂಬದಷ್ಟು ಶ್ರೀಮಂತ, ಪ್ರಭಾವಿ ಭಾರತೀಯ ಕುಟುಂಬ ಇನ್ನೊಂದಿರಲಿಲ್ಲ. ಮೋತಿಲಾರರ ಮನೆಯ ವಸ್ತ್ರಗಳು ಒಗೆದು ಇಸ್ತ್ರಿ ಮಾಡಲು ಜರ್ಮನಿಯ ಪ್ಯಾರೀಸ್ ಗೆ ಕಳುಹಿಸಲಾಗುತ್ತದೆ ಎಂಬ ಪ್ರತೀತಿಯೂ ಆಗ ಇತ್ತು.

ಮೋತಿಲಾಲ್ ರನ್ನು ಮೀರಿಸುವ ವಕೀಲರೇ ಆ ಕಾಲದಲ್ಲಿ ಇರಲಿಲ್ಲ ! 'ನೆಹರೂ' ಕುಟುಂಬ, ಬ್ರಿಟಿಷ್ ದೊರೆಗಳ ವಿನಂತಿಯನ್ನು ಮನ್ನಿಸಿದ್ದರೆ, ಅರ್ಧ ದೇಶವೇ ಬ್ರಿಟಿಷರಿಂದ ಖಾಸಗಿ ಸೊತ್ತಾಗಿ ಪಡೆಯಬಹುದಿತ್ತು. ನೆಹರು ಕುಟುಂಬ, ದೇಶ ಬಾಂಧವರ ನಿಕೃಷ್ಠ ಬದುಕಿಗೆ ಮರುಗಿ, ಸ್ವತಂತ್ರ ಭಾರತ ಸ್ಥಾಪಿಸಲು ತನ್ನ ಆಸ್ತಿ -ಪಾಸ್ತಿಯ ಬಹುಭಾಗವನ್ನು ದೇಶದ ಸ್ವಾತಂತ್ರ್ಕ್ಕಾಗಿ ವಿನಿಯೋಗಿಸಿದೆ.

ಜವಾಹರಲಾಲ್ ರಂತಹ ಆಗರ್ಭ ಶ್ರೀಮಂತ, ಸುಖಲೋಲುಪ್ತತೆಯಲ್ಲಿ, ಬದುಕತ್ತಿದ್ದ ಸ್ಪುರದ್ರೂಪಿ, ಹತ್ತು ವರ್ಷಗಳ ಕಾಲ, ಕನಿಷ್ಠ ಸೌಕರ್ಯದೊಂದಿಗೆ ಜೈಲಿನಲ್ಲಿ ಕಳೆದ ಶ್ಲಾಘನಾರ್ಹ ನಡೆಯನ್ನು ಸ್ಮರಿಸದ ಭಾಷಣವನ್ನು, ಭಾರತದ ಸ್ವಾತಂತ್ರ್ಯ ಹೋರಾಟದ ಅವಲೋಕನ ಎಂದು ಹೇಳಲಾದೀತೇ ? ಸ್ವಾತಂತ್ರ್ಯ ಹೋರಾಟದ ಮುಖ್ಯ ಭೂಮಿಕೆಯನ್ನೇ ಮರೆ ಮಾಚಿದ ಹುಡುಗಿಯ ಭಾಷಣ ಹೇಗೆ ಅಮೂಲ್ಯವಾಗ ಬಲ್ಲುದು?

ಮಹಮ್ಮದಾಲಿ ಸಹೋದರರ ಕುರಿತು, ಅವರನ್ನು ಸ್ವಾತಂತ್ರ್ಯ ಸಮರದ ಕಣಕ್ಕೆ ಧುಮುಕಲು ಕಾರಣರಾದ ಅವರ ತಾಯಿಯ ಬಗ್ಗೆ, 'ಬ್ರಿಟಿಷರೇ ಭಾರತದಿಂದ ತೊಲಗಿ', 'ಜೈ ಹಿಂದ್ ಮತ್ತು ಭಾರತದ 'ರಾಷ್ಟ್ರ ಧ್ವಜ' ರಚಿಸಿದವರನ್ನು, ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್, ಅಬುಲ್ ಕಲಾಂ ಅಝಾದ್,  50 ವರ್ಷ ಜೈಲು ಶಿಕ್ಷೆ ಅನುಭವಿಸಿದ ಖಾನ್ ಗಫಾರ್ ಖಾನ್, ಕೇರಳದ ಉಮರ್ ಖಾಝಿ ಮತ್ತು ಇತರ ನೂರಾರು ಮುಸ್ಲಿಂ ನೇತಾರರಲ್ಲಿ ಒಬ್ಬರನ್ನೂ ಹಿಜಾಬ್ ಧರಿಸಿದ ಆ ಮುಸ್ಲಿಂ ಬಾಲೆ, ತನ್ನ ಸುಲಲಿತ ಭಾಷಣದಲ್ಲಿ ಪ್ರಸ್ತಾಪಿಸಲೇ ಇಲ್ಲ!

ಇದು ಆಕೆಯ ತಪ್ಪಲ್ಲ, ತಪ್ಪಾಗಿದೆ ಎಂದು ತಿಳಿಯುವ ವಯಸ್ಸೂ ಆಕೆಯದ್ದಲ್ಲ. ಶಿಕ್ಷಕನೋ, ಶಿಕ್ಷಕಿಯೋ ಬರೆದು, ಕಂಠಪಾಠ ಮಾಡಿಸಿದನ್ನು ಅವಳು ಮೋಹಕವಾಗಿ ಹೇಳಿ ಮುಗಿಸಿದ್ದಾಳೆ.  ಒಳ್ಳೆಯದರ ನಡುವೆ ಕೆಟ್ಟದನ್ನೂ ಇಟ್ಟು, ವ್ಯಾಪಾರ ಕುದುರಿಸುವ ಇಂತಹ 'ಹೀನ ಸುಳಿ' ಸುಲಭದಲ್ಲಿ ಪತ್ತೆ ಮಾಡಲಾಗದು. ಇದು ಸಂಘದ ಜನ ಪ್ರಯೋಗಿಸುವ ನಾಜೂಕುತನದ, ನಿಧಾನ ವಿಷ ಸಿಂಚನ. ಮುಸ್ಲಿಂ ವ್ಯಕ್ತಿ ಯ ಬಾಯಲ್ಲಿ ಸಂಘದ ಹಿಂದುತ್ವ ನೆಲೆಯೂರಿಸುವ ವ್ಯವಸ್ಥಿತ ತಂತ್ರಗಾರಿಕೆ ಇತ್ತೀಚಿನ ದಿನಗಳಲ್ಲಿ ಸಂಘದವರ 'ಹಿಟ್ ಶಾಟ್'.

'ತ್ರಿವಳಿ ತಲಾಖ್ ಮಸೂದೆಯ ಆಂತರ್ಯದಲ್ಲಿ ಇದೇ 'ಫಾರ್ಮುಲಾ' ಅಡಗಿದೆ. 370ರ ವಿಧಿಯ ನಿರಾಕರಣೆಯನ್ನು ಸಮರ್ಥಿಸಲು 'ಕಾಶ್ಮೀರಿ ಮುಸ್ಲಿಮ'ನ  ಕೈಗೆ ಅರ್ಜಿ  ಕೊಟ್ಟು, ಸುಪ್ರೀಂ ಕೋರ್ಟ್ ಮೆಟ್ಟಿಲು  ಹತ್ತಿಸಿಸುವ ಕೆಲಸವನ್ನೂ  ಸಂಘ ಮಾಡಬಹುದು,  ಇಲ್ಲ ಎನ್ನುವಂತಿಲ್ಲ.

ಮುಂದೆ, ತಮ್ಮ ಬತ್ತಳಿಕೆಯಲ್ಲಿರುವ ಇಂತಹ ಇನ್ನೂ ಹತ್ತು- ಹಲವು 'ಜಾದೂ" ಗಳನ್ನು ಮೋದಿ ಬಳಗ ನಡೆಸುತ್ತಲೇ ಇರಬಹುದು.

Writer - ಫಾರೂಕ್ ಉಳ್ಳಾಲ್

contributor

Editor - ಫಾರೂಕ್ ಉಳ್ಳಾಲ್

contributor

Similar News