ಏನಿದು ವರ್ಟಿಗೋ...? ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

Update: 2019-08-18 14:22 GMT

ನಿಮ್ಮ ಸುತ್ತಲಿನ ಪರಿಸರ ಚಲಿಸುತ್ತಿದೆ, ಗಿರಗಿರನೆ ತಿರುಗುತ್ತಿದೆ ಎಂದು ಅನ್ನಿಸಿದರೆ, ನಿಂತುಕೊಂಡಾಗ ಅಥವಾ ಕುಳಿತುಕೊಂಡಾಗ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದ್ದರೆ, ಒಂದು ಪಕ್ಕಕ್ಕೆ ಬೀಳುವಂತಾಗುತ್ತಿದ್ದರೆ ಅದು ವರ್ಟಿಗೋ. ತಲೆಸುತ್ತಿಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ ವರ್ಟಿಗೋ ಕೇವಲ ಚಲನೆಯ ಭ್ರಮೆಯಾಗಿದೆ. ವರ್ಟಿಗೋ ಸೌಮ್ಯವಾಗಿರಬಹುದು ಅಥವಾ ವಾಕರಿಕೆ ಮತ್ತು ವಾಂತಿಯನ್ನುಂಟು ಮಾಡುವಷ್ಟು ತೀವ್ರ ಸ್ವರೂಪದ್ದಾಗಿರಬಹುದು.

ವರ್ಟಿಗೋಕ್ಕೆ ಕಾರಣಗಳು

ವರ್ಟಿಗೋ ಸಾಮಾನ್ಯವಾಗಿ ‘ಬಿನೈನ್ ಪ್ಯಾರಾಕ್ಸಿಸ್ಮಲ್ ಪೊಸಿಷನಲ್ ವರ್ಟಿಗೋ(ಬಿಪಿಪಿವಿ)’ ಎಂಬ ಒಳಗಿವಿಯ ಸಮಸ್ಯೆಯಿಂದ ಉಂಟಾಗುತ್ತದೆ.

ಬಿಪಿಪಿವಿ ಉಂಟು ಮಾಡುವ ವರ್ಟಿಗೋ ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಡುವುದಿಲ್ಲ ಮತ್ತು ಹಠಾತ್ ಅಥವಾ ಒಂದು ನಿರ್ದಿಷ್ಟ ಭಂಗಿಯಲ್ಲಿ ತಲೆಯ ಚಲನೆ ವರ್ಟಿಗೋವನ್ನುಂಟು ಮಾಡುತ್ತದೆ. ಒಳಗಿವಿಯಲ್ಲಿನ ದ್ರವವು ತುಂಬಿರುವ ಅರ್ಧ ವೃತ್ತಾಕಾರದ ನಾಲೆಗಳಲ್ಲಿ ತ್ಯಾಜ್ಯವು ಸಂಗ್ರಹಗೊಂಡಾಗ ಬಿಪಿಪಿವಿ ಉಂಟಾಗುತ್ತದೆ. ವಯಸ್ಸಾಗುವಿಕೆ,ತಲೆಗೆ ಗುದ್ದಿನಂತಹ ಪೆಟ್ಟು ಅಥವಾ ವೈರಲ್ ಸೋಂಕಿನ ಪರಿಣಾಮವಾಗಿ ತ್ಯಾಜ್ಯವು ಸಂಗ್ರಹಗೊಳ್ಳಬಹುದು.

ಹೆಚ್ಚಿನ ಪ್ರಕರಣಗಳಲ್ಲಿ ಬಿಪಿಪಿವಿಗೆ ನಿರ್ದಿಷ್ಟ ಕಾರಣವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ ಯಾವುದೇ ಚಿಕಿತ್ಸೆ ಅಥವಾ ವ್ಯಾಯಾಮವಿಲ್ಲದೆ ಕೆಲವು ದಿನಗಳಲ್ಲಿ ಶಮನಗೊಳ್ಳುತ್ತದೆ.

ಒಳಗಿವಿಯ ಉರಿಯೂತಗಳು ದಿಢೀರ ವರ್ಟಿಗೋವನ್ನುಂಟು ಮಾಡಬಹುದು,ಜೊತೆಗೆ ವಾಕರಿಕೆ ಮತ್ತು ವಾಂತಿ ಉಂಟಾಗುತ್ತವೆ.

ಶ್ರವಣಶಕ್ತಿಯೂ ದಿಢೀರ್ ನಷ್ಟಗೊಳ್ಳಬಹುದು

ಒಳಗಿವಿಯಲ್ಲಿನ ದ್ರವದ ಒತ್ತಡದಲ್ಲಿ ಬದಲಾವಣೆಗಳು ಮೆನಿಯರ್ಸ್ ರೋಗಕ್ಕೆ ಕಾರಣವಾಗುತ್ತವೆ. ಇಂತಹ ರೋಗಿಗಳಲ್ಲಿ ವರ್ಟಿಗೋ ಪದೇ ಪದೇ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವು ದಿನಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಶ್ರವಣ ಶಕ್ತಿ ಕಡಿಮೆಯಾಗುತ್ತದೆ ಮತ್ತು ಕಿವಿಯಲ್ಲಿ ಗಂಟೆ ಹೊಡೆದಂತೆ ಶಬ್ದವಾಗುತ್ತಿರುತ್ತದೆ. ವರ್ಷಗಳುರುಳಿದಂತೆ ಇಂತಹ ದಾಳಿಗಳ ಆವರ್ತನಗಳು ಮತ್ತು ಶ್ರವಣ ಶಕ್ತಿ ನಷ್ಟ ಹೆಚ್ಚುತ್ತ ಹೋಗುತ್ತವೆ.

ಸೆರೆಬಲಮ್ ಅಥವಾ ಹಿಮ್ಮಿದುಳಿನ ನರವೈಜ್ಞಾನಿಕ ಸ್ಥಿತಿಗಳಿಂದಲೂ ವರ್ಟಿಗೋ ಉಂಟಾಗಬಹುದು. ಮಿದುಳಿನ ಆಘಾತ, ಮಲ್ಟಿಪಲ್ ಸ್ಲೆರೊಸಿಸ್ ಅಥವಾ ಬಹು ಅಂಗಾಂಶ ಗಟ್ಟಿಗೊಳ್ಳುವ ರೋಗ,ಸೆಳವು ಅಥವಾ ಅಪರೂಪಕ್ಕೆ ಪಾರ್ಕಿನ್ಸನ್‌ನಂತಹ ನರಸಂಬಂಧಿ ರೋಗಗಳೂ ವರ್ಟಿಗೋಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವರ್ಟಿಗೋದೊಂದಿಗೆ ಇತರ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವಿಕೆಯಿಂದ ಮಿದುಳು ಮತ್ತು ಹಿಮ್ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದೂ ಕೆಲವೊಮ್ಮೆ ವರ್ಟಿಗೋ ಮತ್ತು ಸಮತೋಲನ ನಷ್ಟಕ್ಕೆ ಕಾರಣವಾಗುತ್ತದೆ.

ವರ್ಟಿಗೋದ ಲಕ್ಷಣಗಳು

ವ್ಯಕ್ತಿಗೆ ತನ್ನ ಸುತ್ತಲಿನ ಪರಿಸರ ಗರಗರನೆ ತಿರುಗುತ್ತಿದೆ ಅಥವಾ ತಲೆಯೇ ತಿರುಗುತ್ತಿದೆ ಎಂದು ಭಾಸವಾಗುತ್ತಿದ್ದರೆ ಅದು ವರ್ಟಿಗೋದ ಮುಖ್ಯ ಲಕ್ಷಣವಾಗಿದೆ.

ಬಿಪಿಪಿವಿಯಲ್ಲಿ ನಿರ್ದಿಷ್ಟ ತಲೆಯ ಚಲನೆಯ ಅಥವಾ ನಿರ್ದಿಷ್ಟ ಭಂಗಿಯ ಬಳಿಕ ವರ್ಟಿಗೋ ಆರಂಭಗೊಳ್ಳುತ್ತದೆ. ಹೆಚ್ಚಿನ ಸಲ ತಲೆಯ ಚಲನೆ ಮತ್ತು ವರ್ಟಿಗೋ ಆರಂಭದ ನಡುವೆ ಸ್ವಲ್ಪ ಸಮಯವಿರುತ್ತದೆ. ಇದನ್ನು ಸುಪ್ತತೆ ಎಂದು ಕರೆಯಲಾಗುತ್ತದೆ.

ವರ್ಟಿಗೋ ಸಾಮಾನ್ಯವಾಗಿ ಒಂದು ನಿಮಿಷಕ್ಕೂ ಕಡಿಮೆ ಅವಧಿಗೆ ಇರುತ್ತದೆ,ಹೆಚ್ಚಿನ ಸಂದರ್ಭಗಳಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಮಾಯವಾಗುತ್ತದೆ. ಇದು ಸೌಮ್ಯವಾಗಿರಬಹುದು ಅಥವಾ ವಾಕರಿಕೆ ಮತ್ತು ವಾಂತಿಗೆ ಕಾರಣವಾಗು ವಷ್ಟು ತೀವ್ರ ಸ್ವರೂಪದ್ದೂ ಆಗಿರಬಹುದು. ವರ್ಟಿಗೋಕ್ಕೆ ಕಾರಣವಾದ ಚಲನೆಯನ್ನು ಪುನರಾವರ್ತಿಸಿದರೆ ಪ್ರತಿಬಾರಿಯೂ ಪರಿಣಾಮವು ಕಡಿಮೆ ಗಮನೀಯವಾಗಬಹುದು. 3-4 ಬಾರಿ ಪುನರಾವರ್ತನೆಯ ಬಳಿಕ ಚಲನೆಯು ವರ್ಟಿಗೋವನ್ನುಂಟು ಮಾಡದಿರಬಹುದು ಮತ್ತು ಹಲವಾರು ಗಂಟೆಗಳ ಬಳಿಕ ಇದೇ ರೀತಿಯ ಚಲನೆ ಮತ್ತೆ ವರ್ಟಿಗೋವನ್ನುಂಟು ಮಾಡಬಹುದು.

ತಲೆ ಹಗುರವಾಗುವಿಕೆ,ತೀವ್ರ ತಲೆನೋವು,ಕಡಿಮೆ ರಕ್ತದೊತ್ತಡ,ಹೃದಯವು ತೀರ ನಿಧಾನ ಗತಿ ಅಥವಾ ತೀರ ವೇಗದಲ್ಲಿ ಬಡಿದುಕೊಳ್ಳುವುದು ವರ್ಟಿಗೋದ ಇತರ ಲಕ್ಷಣಗಳಾಗಿವೆ. ಒಳಗಿವಿಯ ಉರಿಯೂತಗಳಿಂದ ಉಂಟಾಗುವ ವರ್ಟಿಗೋ ತೀವ್ರಸ್ವರೂಪದ್ದಾಗಿರುತ್ತದೆ ಮತ್ತು ಹೆಚ್ಚು ಸಮಯ ಬಾಧಿಸುತ್ತದೆ. ಇದನ್ನು ಚಿಕಿತ್ಸೆಯಿಂದ ಮಾತ್ರ ನಿಯಂತ್ರಿಸಬಹುದು ಮತ್ತು ಕಣ್ಣುಗಳನ್ನು ಮುಚ್ಚಿಕೊಂಡು ಮಲಗಿದಾಗ ರೋಗಿಗೆ ಸ್ವಲ್ಪ ನೆಮ್ಮದಿಯ ಭಾವನೆ ಉಂಟಾಗುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ವರ್ಟಿಗೋ ತನ್ನಷ್ಟಕ್ಕೆ ಗುಣವಾಗುತ್ತದೆ ಅಥವಾ ಯಾವುದೇ ನಿರ್ದಿಷ್ಟ ಚಿಕಿತ್ಸೆ ಪಡೆಯದಿದ್ದರೂ ಕೆಲವು ವಾರಗಳಲ್ಲಿ ಅದರ ತೀವ್ರತೆ ಕಡಿಮೆಯಾಗುತ್ತದೆ. ಎಲ್ಲ ಸಂದರ್ಭಗಳಲ್ಲಿಯೂ ವರ್ಟಿಗೋವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಆರಂಭದ ಲ್ಲಿಯೇ ಲಕ್ಷಣಗಳನ್ನು ಗಮನಿಸಿ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೆ ಲಕ್ಷಣಗಳು ತೀವ್ರಗೊಳ್ಳುವುದನ್ನು ತಡೆಯಬಹುದು ಮತ್ತು ರೋಗಿಯು ಅನುಭವಿಸುವ ತೊಂದರೆಗಳನ್ನು ಕಡಿಮೆ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News