ಬೇಗ್ ಕುಟುಂಬದ ವಿರುದ್ಧ ಆಧಾರ ರಹಿತ ಪೋಸ್ಟ್ ಆರೋಪ: ನಫೀಸಾ ಖಾನ್ ಸೇರಿ 10 ಮಂದಿಯ ವಿರುದ್ಧ ಸಮನ್ಸ್

Update: 2019-08-18 14:28 GMT
ನಫೀಸಾ ಖಾನ್

ಬೆಂಗಳೂರು, ಆ.18: ಅನರ್ಹ ಶಾಸಕ ರೋಷನ್ ಬೇಗ್ ಕುಟುಂಬದವರ ವಿರುದ್ಧ ಆಧಾರ ರಹಿತ  ಪೋಸ್ಟ್ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಗರ ಸಿಟಿ ಸಿವಿಲ್ ಕೋರ್ಟ್, ನಫೀಸಾ ಖಾನ್ ಸೇರಿ 10 ಜನ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿದೆ. ಅಲ್ಲದೇ, ಪೋಸ್ಟ್ ಗಳನ್ನು ಅಳಿಸುವಂತೆ ಸೂಚಿಸಿದೆ.

ಈ ಕುರಿತು ಅನರ್ಹ ಶಾಸಕ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಗರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ನಫೀಸಾ ಖಾನ್ ಸೇರಿ 10 ಜನರು ರೋಷನ್ ಬೇಗ್ ಕುಟುಂಬದವರ ವಿರುದ್ಧ ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಬೇಗ್ ಕುಟುಂಬದವರ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ ಈಗಾಗಲೇ ಆದೇಶಿಸಿದೆ. ಆದರೂ ಪೋಸ್ಟ್ ಮಾಡುವ ಮೂಲಕ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್ ಬೆಳವಣಿಗೆಗೆ ರೋಷನ್ ಬೇಗ್ ಕಾರಣವೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಐಎಂಎ ಹಗರಣ ಇನ್ನೂ ತನಿಖೆ ಹಂತದಲ್ಲಿದ್ದು, ಬೇಗ್ ಕುಟುಂಬದ ವಿರುದ್ಧ ಪೋಸ್ಟ್ ಮಾಡಿರುವುದು ಕಾನೂನು ಬಾಹಿರ ಎಂದು ಪೀಠಕ್ಕೆ ತಿಳಿಸಿದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಾದ ನಫೀಸಾ ಖಾನ್, ಸುಲ್ತಾನ್ ಹಾಶಿಂ, ಮುಹಮ್ಮದ್ ಇಶ್ತಿಯಾಕ್ ಅಹ್ಮದ್, ಸಯ್ಯದ್ ಮುಜಾಹಿದ್ ಸೇರಿ ಹತ್ತು ಜನರ ವಿರುದ್ಧ ಸಮನ್ಸ್ ಜಾರಿಗೊಳಿಸಿ, ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತು.         

ಐಎಂಎ ಹಗರಣದಿಂದ ಜನರಿಗೆ ಅನ್ಯಾಯವಾಗಿದೆ. ಈ ಎಲ್ಲ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕಾಗಿ ರೋಷನ್ ಬೇಗ್ ಕುಟುಂಬದವರ ವಿರುದ್ಧ ಆರೋಪ ಮಾಡಲಾಗಿದೆ. ಬೇಗ್ ಕುಟುಂಬದವರ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ ಆದೇಶಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ
-ನಫೀಸಾ ಖಾನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News