‘ಆಪರೇಷನ್ ಕಮಲ’ ಬಗ್ಗೆಯೂ ತನಿಖೆಯಾಗಲಿ: ಬಸವರಾಜ್ ಹೊರಟ್ಟಿ

Update: 2019-08-18 16:50 GMT

ಬೆಂಗಳೂರು, ಆ.18: ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಎಲ್ಲ ಪಕ್ಷಗಳೂ ಆಗ್ರಹಿಸಿದ್ದವು. ಬಿಜೆಪಿಯವರು ಸಿಬಿಐ ತನಿಖೆಗೆ ಒಪ್ಪಿಸಿದ್ದು ಸ್ವಾಗತಾರ್ಹ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. 

ರವಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ನಿಷ್ಪಕ್ಷಪಾತ ತನಿಖೆ ಮಾಡಬೇಕು. ದೇಶದಲ್ಲಿ ಸಾಕಷ್ಟು ಫೋನ್ ಕದ್ದಾಲಿಕೆ ಪ್ರಕರಣಗಳು ಆಗಿವೆ. ಇದೇನು ಹೊಸದಲ್ಲ. ಹಿಂದಿನ ಘಟನೆಗಳನ್ನೂ ಸಿಬಿಐಗೆ ಒಪ್ಪಿಸಲಿ ಎಂದು ಹೇಳಿದರು.

ಸಿಬಿಐಗೆ ಕೊಟ್ಟಿದ್ದರಿಂದ ತಮಗೆ ಬೇಕಾದ ವಿಚಾರ ತಿಳಿದುಕೊಳ್ಳಬಹುದು ಎಂದು ಬಿಜೆಪಿ ಭಾವಿಸಿದೆ. ಹೀಗಾಗಿ, ಸಿಬಿಐ ತನಿಖೆಯಿಂದ ಸತ್ಯ ಹೊರ ಬೀಳುತ್ತದೆ ಅಂತ ಸಂಪೂರ್ಣವಾಗಿ ಒಪ್ಪಲು ಆಗಲ್ಲ. ಮೊದಲು ಸಂದೀಪ್ ಪಾಟೀಲ್ ಕೊಟ್ಟಿರುವ ವರದಿ ಬಹಿರಂಗವಾಗಬೇಕು. ಸಿಬಿಐ ನಿಷ್ಪಕ್ಷಪಾತ ತನಿಖೆ ಮಾಡಬೇಕು. ಬಹಳಷ್ಟು ಸಂದರ್ಭದಲ್ಲಿ ಸಿಬಿಐ ನಿಲುವು ಕೇಂದ್ರದ ಪರವಾಗಿಯೇ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಪರೇಷನ್ ಕಮಲ, ಶಾಸಕರಿಗೆ ಆಮಿಷ, ದುಡ್ಡು ಕೊಟ್ಟವರು ಹಾಗೂ ತೆಗೆದುಕೊಂಡವರ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐ ತನಿಖೆಗೆ ಒಪ್ಪಿಸಿದ್ದು ನನಗೆ ಬಹಳ ಖುಷಿಯಾಗಿದೆ. ರಾಜಕೀಯ ಒಮ್ಮೆ ಸ್ವಚ್ಛವಾಗಬೇಕಾಗಿದೆ. ಸುಮ್ಮನೆ ಕುಮಾರಸ್ವಾಮಿಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News