ಹಾಸ್ಟೆಲ್ ವಿದ್ಯಾರ್ಥಿಗಳ ಸಾವಿಗೆ ಜಿಲ್ಲಾಡಳಿತ, ಹಿಂ.ವರ್ಗಗಳ ಕಲ್ಯಾಣ ಇಲಾಖೆ ಹೊಣೆ: ಕೆವಿಎಸ್ ಆರೋಪ

Update: 2019-08-18 17:08 GMT

ಬೆಂಗಳೂರು, ಆ.18: ಸ್ಥಳೀಯ ವಾರ್ಡನ್, ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಕೊಪ್ಪಳದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ವಿದ್ಯುತ್‌ಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.

ಬಹುತೇಕ ಹಾಸ್ಟೆಲ್‌ಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಧ್ವಜ ಕಂಭ ತೆರವುಗೊಳಿಸಲು ಹೋಗಿ 5 ಜನ ವಿದ್ಯಾರ್ಥಿಗಳು ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕಟ್ಟಡ ಬಾಡಿಗೆ ಕಟ್ಟಡವಾಗಿದ್ದು, ರಾಜ್ಯದ ಹಲವಾರು ಹಾಸ್ಟೆಲ್‌ಗಳು ಬಾಡಿಗೆ ಹಣದ ಲಾಭಿಗಾಗಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದೆ. ಖಾಸಗಿ ಕಟ್ಟಡಗಳಲ್ಲಿ ಹಾಸ್ಟೆಲ್ ಗೆ ಬೇಕಾದ ರಚನೆ ಇಲ್ಲದೆ, ಮೂಲಭೂತ ಸೌಕರ್ಯವೂ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಂದು ದೇಶದ ಭವಿಷ್ಯವಾಗಬೇಕಿದ್ದ ಐದು ಜನ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು, ಸರಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಸಾವನ್ನಪ್ಪುವಂತಾಗಿದೆ ಎಂದು ಕೆವಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಸಾವಿಗೀಡಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಮುಂದಿನ ದಿನಗಳಲ್ಲಿ ಸರಕಾರ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯೂ ಎಚ್ಚೆತ್ತುಕೊಂಡು ಜವಾಬ್ದಾರಿ ಕಾಯ್ದುಕೊಳ್ಳಬೇಕಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದೆ.

ಹಕ್ಕೋತ್ತಾಯಗಳು: ಎಲ್ಲ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡವನ್ನು ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕು. ಪ್ರತಿ ಹಾಸ್ಟೆಲ್ ಗೂ ನಿಲಯ ಪಾಲಕರ ನೇಮಕವಾಗಬೇಕು. ಅವರು ಪ್ರತಿದಿನ ಹಾಸ್ಟೆಲ್ ಗೆ ಭೇಟಿ ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕು. ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿ ಸ್ನೇಹಿಯಾಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News