ಸರಕಾರದ ಅನುದಾನ; ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿಗಾಗಿ ಬಳಕೆ

Update: 2019-08-18 17:52 GMT

ಬೆಂಗಳೂರು, ಆ.18: ಮಹಾನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಮಂಜೂರು ಮಾಡಿದ್ದ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ನಗರದಲ್ಲಿ ಹೊಸರಸ್ತೆಗಳ ನಿರ್ಮಾಣ, ಫ್ಲೈಓವರ್‌ಗಳು, ಪಾದಚಾರಿ ಮಾರ್ಗ, ಸ್ಕೈ ವಾಕ್, ಮಳೆನೀರು ಸುಲಭವಾಗಿ ಹರಿದುಹೋಗಲು ಚರಂಡಿಗಳ ನಿರ್ಮಾಣ ಸೇರಿದಂತೆ, ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದರಾಮಯ್ಯ ಸರಕಾರ ಮಂಜೂರು ಮಾಡಿದ್ದ 7,255 ಕೋಟಿ ರೂ. ಗಳನ್ನು ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಾಗರಿಕರನ್ನು ಆತಂಕಕ್ಕೆ ಈಡುಮಾಡಿದೆ.

2018ಕ್ಕೆ ಮುನ್ನ 5 ವರ್ಷಗಳ ವರೆಗೆ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು, ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬೃಹತ್ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಅನುದಾನದ ಪೈಕಿ ಶೇ. 34 ರಷ್ಟನ್ನು ಗುತ್ತಿಗೆದಾರರ ಬಾಕಿ ಪಾವತಿಗಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016 ರಿಂದ 2019 ರವರೆಗಿನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಇದರಿಂದಾಗಿ ಹಣಕಾಸಿನ ದುರ್ಬಳಕೆಯಾಗುತ್ತಿದೆ, ನಿರ್ದಿಷ್ಟವಾದಂತಹ ಯೋಜನೆಗಳ ಅನುಷ್ಠಾನಕ್ಕೆ ಬಿಬಿಎಂಪಿಗೆ ಮಂಜೂರಾಗಿದ್ದ ಹಣವನ್ನು ಉದ್ದೇಶಿತ ಯೋಜನಗಳಿಗೆ ಬಳಕೆ ಮಾಡದೆ, ಗುತ್ತಿಗೆದಾರರ ಬಾಕಿಬಿಲ್ಲುಗಳ ಪಾವತಿಗೆ ವ್ಯಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಕೈಗೆತ್ತಿಕೊಂಡಿರುವ ಹಲವಾರು ಕಾಮಗಾರಿಗಳು ಶೇ.71 ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಅರ್ಧದಲ್ಲೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಗರದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆದು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News