ಅಖಂಡ ಭಾರತಕ್ಕೆ 370 ಕಾಯ್ದೆ ವಿರೋಧಿಸಿದ್ದ ಕೆಂಗಲ್: ಡಾ.ಗುರುಮೂರ್ತಿ ಪೆಂಡಕೂರು

Update: 2019-08-18 17:53 GMT

ಬೆಂಗಳೂರು, ಆ.18: ಅಖಂಡ ಕರ್ನಾಟಕ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಅಪಾರವಾದದ್ದು ಅವರ ರಾಜಕೀಯ ಮೌಲ್ಯಗಳು, ಆದರ್ಶ, ದೇಶ ಭಕ್ತಿ ಸ್ಮರಣೀಯವಾದದ್ದು. ಅಖಂಡ ಭಾರತಕ್ಕಾಗಿ 370 ಕಾಯ್ದೆ ವಿರೋಧಿಸಿದ್ದರು ಎಂದು ಹಿರಿಯ ಸಾಹಿತಿ ಗುರುಮೂರ್ತಿ ಪೆಂಡಕೂರು ತಿಳಿಸಿದ್ದಾರೆ.

ರವಿವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸಮರ್ಥ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಡಾ.ಗುರುಮೂರ್ತಿ ಪೆಂಡಕೂರು ಅವರ ಹೊನ್ನ ಹವನ ಕವನ ಸಂಕಲನವನ್ನು ಬಿಡುಗಡೆ, ಕೆಂಗೆಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕೆಂಗಲ್ ಹನುಮಂತಯ್ಯ ಈ ನಾಡು ಕಂಡ ಅಪ್ರತಿಮ ಸರಳ ಸಜ್ಜನ ರಾಜಕಾರಣಿ, ಸ್ವಾತಂತ್ರ ನಂತರ ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಹಗಲು ಇರುಳು ಶ್ರಮಿಸಿದ ಅವರು ಭವ್ಯವಾದ ವಿಧಾನಸೌಧ ನಿರ್ಮಾಣ ಮಾಡುವಲ್ಲಿ ತನ್ನದೇ ಆದ ಸಾಂಸ್ಕೃತಿಕ ಛಾಪನ್ನು ಮೂಡಿಸಿದ್ದಾರೆ. ಅಂತಹ ರಾಜಕಾರಣಿಯ ಆದರ್ಶಗಳು ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ನೆಹರೂ ಮತ್ತು ಇಂದಿರಾ ಗಾಂಧಿ ಅವರ ಆಡಳಿತದ ವಿರುದ್ಧ ಆಗಾಗ್ಗೆ ಗುಡುಗುತ್ತಿದ್ದ ಇವರು ಅಂದಿನ ಕಾಲದಲ್ಲಿಯೇ 370 ಕಾಯ್ದೆ ರದ್ದತಿ ಮಾಡುವಂತೆ ಒತ್ತಾಯಿಸಿ ಅಖಂಡ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದ್ದರು. ರಾಜ್ಯದಲ್ಲಿ ಬೆಂಗಳೂರಿನಿಂದ ಗುಂಡಕಲ್‌ವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಶ್ರಮಿಸಿದರಲ್ಲದೇ ಕರ್ನಾಟಕದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ಅವರು ತಮ್ಮ ಜೀವಿತದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಅಧಿಕಾರ ನಡೆಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು. ನನ್ನ ಹೊನ್ನ ಹವನ ಕವನ ಸಂಕಲನವನ್ನು ಜಯ್ ಸಮರ್ಥ್ ಅವರು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಿರುವುದು ಸಂತಸ ತಂದಿದೆ. ಯುವ ಲೇಖಕರು ಬರೆಯುವ ಪುಸ್ತಕ, ಕವನ, ಮುಂತಾದವುಗಳನ್ನು ಹೊರ ತರುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರಮೂರ್ತಿ ಸ್ವಾಮೀಜಿ, ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್, ಕೃಷಿ ವಿಜ್ಞಾನಿ ಡಾ.ಎಂ.ವಿ.ನಾಗರಾಜ ಶೆಟ್ಟಿ, ನಾಡೋಜ ಡಾ.ಮಹೇಶ್ ಜೋಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News