‘ಸರಳ ಸುಧಾ ಮೂರ್ತಿ’ಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

Update: 2019-08-18 18:32 GMT

ಇನ್ಫೋಸಿಸ್ ಸುಧಾ ಮೂರ್ತಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ.. ಕೋಟ್ಯಾಂತರ ರೂ. ಆಸ್ತಿಯ ಒಡೆಯರಾದರೂ, ಇನ್ಫೋಸಿಸ್ ಎಂಬ ಅತಿ ದೊಡ್ಡ ಸಂಸ್ಥೆಯ ಅಧ್ಯಕ್ಷರಾಗಿದ್ದರೂ ಇವರ ಸರಳತೆಯನ್ನು ಕಂಡು ಎಲ್ಲರೂ ನಿಬ್ಬೆರಗಾಗುತ್ತಾರೆ.

ಹಾವೇರಿಯ ಶಿಗ್ಗಾಂವ್ ನಲ್ಲಿ 1950ರ ಆಗಸ್ಟ್ 19ರಂದು ಜನಿಸಿದ ಸುಧಾ ಮೂರ್ತಿಯವರ ಬಾಲ್ಯದ ಹೆಸರು ಸುಧಾ ಕುಲಕರ್ಣಿ. ಸುಧಾ ಮೂರ್ತಿಯವರ ತಂದೆಯ ಹೆಸರು ಡಾ.ಆರ್.ಎಚ್. ಕುಲಕರ್ಣಿ, ತಾಯಿ ವಿಮಲಾ ಕುಲಕರ್ಣಿ. ಸಾಮಾನ್ಯ ಕುಟುಂಬವೊಂದರ ಹೆಣ್ಣುಮಗಳಾದ ಸುಧಾ ಮೂರ್ತಿಯವರು ಬಿ.ವಿ.ಬಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ನಡೆಸಿದರು. ನಂತರ ಟಾಟಾ ಇಂಜಿನಿಯರಿಂಗ್ ಆ್ಯಂಡ್ ಲೋಕೊಮೊಟಿವ್ ಕಂಪೆನಿ (TELCO)ಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಭಾರತದ ಅತಿ ದೊಡ್ಡ ವಾಹನ ತಯಾರಿಕಾ ಕಂಪೆನಿTELCOಗೆ ಆಯ್ಕೆಯಾದ ಪ್ರಪ್ರಥಮ ಮಹಿಳಾ ಎಂಜಿನಿಯರ್ ಆಗಿದ್ದಾರೆ ಸುಧಾಮೂರ್ತಿ. ಪುಣೆಯಲ್ಲಿ TELCOದಲ್ಲಿ ಉದ್ಯೋಗದಲ್ಲಿದ್ದಾಗ ಎನ್. ಆರ್. ನಾರಾಯಣ ಮೂರ್ತಿಯವರ ಪರಿಚಯವಾಯಿತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.

1996ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿಯವರು ಹಲವು ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ರಾಜ್ಯದ ಹಲವೆಡೆ ಪ್ರವಾಹದಿಂದ ಸಂಕಷ್ಟದಲ್ಲಿದ್ದವರಿಗೆ ಫೌಂಡೇಶನ್ ನೆರವು ನೀಡಿದೆ. ಈ ಬಾರಿ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಕಂಗೆಟ್ಟಿರುವ ಸಾವಿರಾರು ಮಂದಿಗಾಗಿ 10 ಕೋಟಿ ರೂ. ಸಹಾಯ ನೀಡುವುದಾಗಿ ಈಗಾಗಲೇ ಇನ್ಫೋಸಿಸ್ ಘೋಷಿಸಿದೆ.

ಇಷ್ಟೇ ಅಲ್ಲದೆ ಪ್ರವಾಹ ಸಂತ್ರಸ್ತರಿಗಾಗಿ ನೀಡಲಾಗುವ ಕಿಟ್ ಗಳನ್ನು ಸ್ವತಃ ಸುಧಾಮೂರ್ತಿಯವರೇ ಪ್ಯಾಕ್ ಮಾಡುತ್ತಿರುವ ಫೋಟೊಗಳು ಇತ್ತೀಚೆಗೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

ಕೋಟ್ಯಾಂತರ ರೂ. ಆಸ್ತಿಯಿದ್ದರೂ ಸುಧಾ ಮೂರ್ತಿಯವರು ಕೊನೆಯ ಬಾರಿ ಹೊಸ ಸೀರೆ ಖರೀದಿಸಿದ್ದು 21 ವರ್ಷಗಳ ಮೊದಲು ಎಂದರೆ ನಂಬಲೇಬೇಕು. 2017ರಲ್ಲಿ ಈ ಬಗ್ಗೆ ಪಿಟಿಐ ವರದಿ ಮಾಡಿತ್ತು. ಸೀರೆ ಖರೀದಿಸದೆ ಇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ನಾನು ಪುಣ್ಯ ಸ್ನಾನಕ್ಕಾಗಿ ಕಾಶಿಗೆ ತೆರಳಿದ್ದೆ.  ನೀವು ಯಾವುದನ್ನು ಹೆಚ್ಚು ಇಷ್ಟಪಡುತ್ತೀರೋ ಕಾಶಿಗೆ ಭೇಟಿ ನೀಡಿದ ಮೇಲೆ ಅದನ್ನು ತೊರೆಯಬೇಕಿದೆ. ನಾನು ನನ್ನ ಶಾಪಿಂಗ್ ಮುಖ್ಯವಾಗಿ ಸೀರೆ ಖರೀದಿಯನ್ನು ತೊರೆದೆ. ಆ ನಂತರ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸುತ್ತೇನೆ” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News