ಪ್ರವಾಹ ಸಂದರ್ಭದಲ್ಲಿ ಫೋನ್ ಕದ್ದಾಲಿಕೆಗೆ ಮಹತ್ವ ಬೇಡ: ಮಾಜಿ ಪ್ರಧಾನಿ ದೇವೇಗೌಡ

Update: 2019-08-19 13:04 GMT

ಬೆಂಗಳೂರು, ಆ.19: ರಾಜ್ಯದಲ್ಲಿ ಭೀಕರ ಪ್ರವಾಹ ಸ್ಥಿತಿಯಿರುವ ಈ ಸಂದರ್ಭದಲ್ಲಿ ಫೋನ್ ಕದ್ದಾಲಿಕೆ ಪ್ರಕರಣವನ್ನು ವಿಜೃಂಭಿಸಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ನಗರದ ಜೆ.ಪಿ.ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಟೆಲಿಫೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ಬಿಜೆಪಿಯ ಕೇಂದ್ರ ನಾಯಕರು ಮಧ್ಯಪ್ರವೇಶಿಸಿಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ದೇಶದ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಅವರ ಸೂಚನೆ ಮೇರೆಗೆ ಸಿಬಿಐಗೆ ವಹಿಸಲಾಗಿದೆ ಎಂಬುದನ್ನು ಅಲ್ಲಗಳೆದರು.

ಫೋನ್ ಕದ್ದಾಲಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲಿನ ರಾಜಕೀಯ ಒತ್ತಡಗಳಿಂದ ಸಿಬಿಐಗೆ ಒಪ್ಪಿಸಿದ್ದಾರೆ. ಈ ಪ್ರಕರಣವನ್ನು ಮಾಧ್ಯಮಗಳಲ್ಲಿ ಇಷ್ಟೊಂದು ವಿಜೃಂಭಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ಪಕ್ಷಾಂತರ ವಿಚಾರದಲ್ಲಿ ಟೆಲಿಫೋನ್ ಟ್ಯಾಪ್ ಮಾಡುವುದು ತಪ್ಪಲ್ಲ ಎಂದು ಪ್ರಕರಣವೊಂದರಲ್ಲಿ ಹೇಳಿದೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್ ಕಮಲದ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಬಿಐಗೆ ಯಾವುದೇ ಪ್ರಕರಣ ಕೊಡುವುದಿಲ್ಲ ಎಂದು ಹೇಳಿದ್ದನ್ನು ನಾನು ಗಮನಿಸಿದ್ದೇನೆ ಎಂದು ದೇವೇಗೌಡರು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಆಪರೇಷನ್ ಕಮಲದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂದರ್ಭದಲ್ಲಿ ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದರು. ಅನಂತರ ನಂದಲ್ಲ ಎಂದು ಅಲ್ಲಗೆಳೆದಿದ್ದನ್ನೂ ನೋಡಿದ್ದೇನೆ ಎಂದ ಅವರು, ಹಿಂದಿನ ಯಾವ ಯಾವ ಸರಕಾರದಲ್ಲಿ ಎಷ್ಟು ಫೋನ್ ಟ್ಯಾಪಿಂಗ್ ಆಗಿದೆ ಎಂಬುದು ನೋಡಿದ್ದೇನೆ. ಮಮತಾ ಬ್ಯಾನರ್ಜಿ, ಕೇಜ್ರಿವಾಲ್, ನಾಯ್ಡು ಹಾಗೂ ಕಾಂಗ್ರೆಸ್ ಎಷ್ಟು ಬಾರಿ ಹೇಳಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿಯೇ ಟ್ಯಾಪಿಂಗ್ ಮಾಡಿಸುತ್ತಿದ್ದಾರೆಂದು ಹೇಳುತ್ತಿರುವುದು ನೋಡಿದ್ದೇನೆ. ಆದರೆ, ಅವರು ಈಗ ದೇಶದ ಬಗ್ಗೆ ಗಮನ ನೀಡಿದ್ದು, ಈ ಕಡೆ ಗಮನ ಹರಿಸಿಲ್ಲ. ನಾನೂ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದೇನೆ. ಎಲ್ಲ ಕಾಲದಲ್ಲಿಯೂ ಗುಪ್ತಚರ ಇಲಾಖೆ ಅದರ ಕೆಲಸ ಮಾಡುತ್ತದೆ. ಯಾರೇ ಸಿಎಂ ಇರಲಿ ಪಿಎಂ ಇರಲಿ ಅದರ ಕೆಲಸ ಅದು ಮಾಡುತ್ತದೆ. ಇದನ್ನೇ ದೊಡ್ಡದಾಗಿ ಸುದ್ದಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದು ಸರಿಯಲ್ಲ ಎಂದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೀಕರ ಪ್ರವಾಹ ಉಂಟಾಗಿದೆ. ಉತ್ತರ ಕರ್ನಾಟಕದ ಜನತೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ನೂರಾರು ಗ್ರಾಮಗಳು ನೆರೆಯಿಂದಾಗಿ ಪರಿತಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡದೇ ಕೂಡಲೇ ನೊಂದವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರವಾಹದ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ನಮ್ಮ ಪಕ್ಷದ ಶಾಸಕರಿಗೆ ಒಂದು ತಿಂಗಳ ವೇತನ ನೀಡುವಂತೆ ಸೂಚಿಸಿದ್ದೇನೆ. ಅಲ್ಲದೆ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಹಂಚಿಕೆ ಮಾಡಿದ್ದಾರೆ. ನಾನೂ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇನೆ. ಸರಕಾರ ಈ ಕಡೆಗೆ ಗಮನ ನೀಡಬೇಕು. ಅನಗತ್ಯ ಚರ್ಚೆಗೆ ಆಸ್ಪದ ನೀಡಬಾರದು ಎಂದು ದೇವೇಗೌಡ ಕೋರಿದರು.

ರವಿವಾರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಾರ್ಯಕರ್ತರ ಸಭೆಯ ನಂತರ ತುರ್ತಾಗಿ ಹೋಗಬೇಕಿದ್ದರಿಂದ ಬೇಗ ಮಾತನಾಡಿ ಹೊರಟೆ. ಅದಕ್ಕೆ ಮಾಧ್ಯಮದವರು ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಲಿಲ್ಲ ಎಂದು ಬಿತ್ತರಿಸಿದ್ದಾರೆ. ನಾನು ಜೀವನದಲ್ಲಿ ಯಾರ ಒತ್ತಡಕ್ಕೂ ಮಣಿಯದೇ ರಾಜಕೀಯ ಹೋರಾಟ ನಡೆಸಿದ್ದೇನೆ. ಅನಗತ್ಯವಾಗಿ ಬಿಂಬಿಸುವುದು ಸಲ್ಲ.

-ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News