ರಾಷ್ಟ್ರೀಯ ಶಿಕ್ಷಣ ನೀತಿ ತಿದ್ದುಪಡಿಗೆ ಸಿಎಫ್‌ಐ ಆಗ್ರಹ

Update: 2019-08-19 13:06 GMT

ಬೆಂಗಳೂರು, ಆ.19: ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡು ನೀತಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹ ಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಹೊಸ ಶಿಕ್ಷಣ ನೀತಿ ಕರಡಿನಲ್ಲಿ ಉತ್ತಮ ಉದ್ದೇಶಗಳಿದ್ದರೂ ಅದರ ಅನೇಕ ಸಲಹೆಗಳ ಬಗ್ಗೆ ತೀವ್ರವಾದ ಕಳವಳಗಳಿವೆ. ಕರಡು ದೇಶದ ಒಕ್ಕೂಟ ಸ್ವರೂಪಕ್ಕೆ ಹಾನಿಯುಂಟು ಮಾಡಲಿದೆ. ಕರಡು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಕ್ತ ಮಾರುಕಟ್ಟೆ ನೀತಿಯನ್ನು ಪ್ರಸ್ತಾಪಿಸುತ್ತದೆ. ಅದು ಶಿಕ್ಷಣದ ಸಾಂಸ್ಥಿಕರಣಕ್ಕೆ ಕಾರಣವಾಗುತ್ತದೆ. ಇದು ವೈವಿಧ್ಯಮಯ ಸಂಸ್ಕೃತಿಯ ಬದಲಿಗೆ ಒಂದು ಸಂಸ್ಕೃತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತದೆ ಎಂದರು.

ಕರಡಿನಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡುವುದು ಅನಿರ್ವಾಯವಾಗಿದೆ. ಮಕ್ಕಳಲ್ಲಿ ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಪಠ್ಯಕ್ರಮವನ್ನು ಪರಿಗಣಿಸಬೇಕು. ನಿರ್ದಿಷ್ಟ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಲಭ್ಯತೆ ಮತ್ತು ಪ್ರವೇಶವನ್ನು ಖಚಿತಪಡಿಸಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯವನ್ನು ನೀಡಬೇಕು. ಅಲ್ಪಸಂಖ್ಯಾತ ಕೇಂದ್ರೀಕೃತ ಸ್ಥಳಗಳಲ್ಲಿ ಹೆಚ್ಚಿನ ಸಂಸ್ಥೆಗಳೊಂದಿಗೆ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವಂತೆ ಕೆಲವು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಕರಡನ್ನು ಅಂತಿಮಗೊಳಿಸುವ ಮೊದಲು, ನೀತಿ ನಿರೂಪಕರು ಈ ಮಹಾನ್ ದೇಶದ ಜಾತ್ಯತೀತ ಮತ್ತು ಏಕೀಕೃತ ಸ್ವರೂಪವನ್ನು ಉಳಿಸಿಕೊಳ್ಳಬೇಕು. ಇದರಿಂದಾಗಿ ಈ ನೀತಿಯು ವೈವಿಧ್ಯತೆಯಲ್ಲಿ ಏಕತೆ ಎಂಬ ಮಂತ್ರಕ್ಕೆ ಬೆದರಿಕೆಯಾಗಿ ನಿಲ್ಲಲಾರದು. ಇಲ್ಲದಿದ್ದರೆ, ಈ ನೀತಿಯು ಭಾರತ ಮತ್ತು ಭಾರತೀಯರ ಪರಿಕಲ್ಪನೆಯನ್ನು ನಾಶ ಮಾಡುತ್ತದೆ ಎಂದು ವಿಷಾದಿಸಿದರು.

ಸಂಶೋಧನಾ ಹಂತದವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಬೇಕು. ಅದರ ಪ್ರಸ್ತುತ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಹೆಣ್ಣುಮಕ್ಕಳ ಉನ್ನತಿಗಾಗಿ ಸರಕಾರ ಅನನ್ಯ ಯೋಜನೆಗಳನ್ನು ತರಬೇಕು. ರಾಷ್ಟ್ರ ವ್ಯಾಪ್ತಿ ಪ್ರಚಾರದ ಮೂಲಕ ಸಾಮಾಜಿಕ ನಿಷೇಧ, ಬಾಲ್ಯ ವಿವಾಹವನ್ನು ರದ್ದುಗೊಳಿಸಬೇಕು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕೊರತೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News