ಬೆಂಗಳೂರು: ಮೊಬೈಲ್ ಕಿತ್ತುಕೊಂಡ ತಂದೆಯನ್ನು ಬೆಂಕಿ ಹಚ್ಚಿ ಕೊಲೆಗೈದ 15 ವರ್ಷದ ಪುತ್ರಿ
ಬೆಂಗಳೂರು, ಆ.19: ರಾಜಾಜಿನಗರದ ಬಟ್ಟೆ ವ್ಯಾಪಾರಿ ನಿಗೂಢ ಸಾವು ಪ್ರಕರಣವನ್ನು ಭೇದಿಸಿರುವ ಇಲ್ಲಿನ ಉತ್ತರ ವಿಭಾಗ ಪೊಲೀಸರು, ವ್ಯಾಪಾರಿಯ ಪುತ್ರಿಯೇ ಬೆಂಕಿ ಹಚ್ಚಿ ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಕೃತ್ಯವೆಸಗಿದ ಆರೋಪದಡಿ 15 ವರ್ಷದ ಪುತ್ರಿ ಹಾಗೂ ಈಕೆಯ ಪ್ರಿಯಕರ, ರಾಜಾಜಿನಗರ ನಿವಾಸಿ ಪ್ರವೀಣ್(18) ಬಂಧಿತ ಆರೋಪಿಗಳಾಗಿದ್ದು, ರಾಜಾಜಿನಗರದ 5ನೆ ಬ್ಲಾಕ್‌ನ ಬಟ್ಟೆ ವ್ಯಾಪಾರಿ, ದಿಲೀಪ್ ಅಪೆರಲ್ಸ್‌ನ ಮಾಲಕ ಜೈ ಕುಮಾರ್ ಜೈನ್(41) ಕೊಲೆಯಾದವರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ಪ್ರಕರಣ?: ಪಾಂಡಿಚೆರಿ ಮೂಲದ ಜೈ ಕುಮಾರ್ ಜೈನ್, ರಾಜಾಜಿನಗರದ 5ನೆ ಬ್ಲಾಕ್‌ನಲ್ಲಿ ಪತ್ನಿ ಪೂಜಾದೇವಿ, 12 ವರ್ಷದ ಪುತ್ರ, 15 ವರ್ಷದ ಮಗಳೊಂದಿಗೆ ನೆಲೆಸಿದ್ದರು. ಬಾಮೈದುನನ ಜೊತೆ ದಿಲೀಪ್ ಅಪೆರೆಲ್ಸ್ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಜೈ ಕುಮಾರ್ ಅವರ ಪತ್ನಿ ಪೂಜಾದೇವಿ ಹಾಗೂ ಪುತ್ರ ತಮ್ಮ ಸಹೋದರನ ಮನೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆ.17 ರಂದು ಬೆಳಗ್ಗೆ ಪಾಂಡಿಚೆರಿಗೆ ಹೋಗಿದ್ದು, ಮನೆಯಲ್ಲಿ ಜೈ ಕುಮಾರ್ ಹಾಗೂ ಅವರ ಪುತ್ರಿ ಮಾತ್ರ ಇದ್ದರು.
ರವಿವಾರ ಬೆಳಗ್ಗೆ 9ರ ವೇಳೆ ಇದ್ದಕ್ಕಿದ್ದಂತೆ, ಅವರು ನೆಲೆಸಿದ್ದ ಮನೆಯ ನಾಲ್ಕನೇ ಮಹಡಿಯಿಂದ ದಟ್ಟವಾದ ಹೊಗೆ ಬರುತ್ತಿದ್ದು, ಸ್ಥಳೀಯರು ಮಾಹಿತಿ ನೀಡಿದ ಕೂಡಲೇ, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಶೌಚಾಲಯದಲ್ಲಿ ಬೆಂಕಿ ನಂದಿಸುವಾಗ ಉರಿಯುತ್ತಿದ್ದ ಶವ ಪತ್ತೆಯಾಗಿದೆ. ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಕೊಲೆ ಎಂಬುದು ಕಂಡು ಬಂದಿತ್ತು ಎನ್ನಲಾಗಿದೆ.
ನಿಗೂಢ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಜೈ ಕುಮಾರ್ ಜೈನ್ ಅವರ ಪುತ್ರಿ ಸುಟ್ಟಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದು ಪತ್ತೆಯಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಣವೇನು?: ಪ್ರಿಯಕರ ಪ್ರವೀಣ್‌ನ ಜೊತೆ ಫೋನ್‌ನಲ್ಲಿ ಹೆಚ್ಚಿಗೆ ಮಾತನಾಡುವುದು, ಒಟ್ಟಿಗೆ ಓಡಾಡುವುದನ್ನು ಕಂಡು ಜೈ ಕುಮಾರ್ ಜೈನ್ ಹಾಗೂ ಅವರ ಪತ್ನಿ ಪೂಜಾದೇವಿ, ಆಕೆಗೆ ಬುದ್ಧಿವಾದ ಹೇಳಿ, ಮೊಬೈಲ್ ಕಿತ್ತುಕೊಂಡಿದ್ದರಿಂದ ಪುತ್ರಿ, ತಂದೆಯ ಕೊಲೆ ನಡೆಸಿರುವುದು ತನಿಖೆಯಲ್ಲಿ ಕಂಡುಬಂದಿದೆ.
ತಂದೆ ಮಾನಸಿಕ ಹಿಂಸೆ ನೀಡುತ್ತಿದ್ದು, ಇದರಿಂದ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಕುಡಿಸಿ, ಪ್ರಜ್ಞೆ ತಪ್ಪಿಸಿದೆ. ನಂತರ, ಸ್ನೇಹಿತ ಪ್ರವೀಣ್‌ನನ್ನು ಕರೆಸಿಕೊಂಡು ಕೊಲೆಮಾಡಿ, ಕೃತ್ಯವನ್ನು ಮರೆಮಾಚಲು ಮೃತದೇಹವನ್ನು ಶೌಚಾಲಯಕ್ಕೆ ಹಾಕಿ ಬೆಂಕಿ ಹಚ್ಚಿರುವುದಾಗಿ ಆರೋಪಿ ಪುತ್ರಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲು ಮಾಡಲಾಗಿದ್ದು, ಆಕೆಯ ಪ್ರಿಯಕರ ಪ್ರವೀಣ್‌ನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.