ಕನ್ನಡ ಪರ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನೆ

Update: 2019-08-19 14:31 GMT

ಬೆಂಗಳೂರು, ಆ.19: ಜೈನ್ ಸಮುದಾಯದವರ ಕಟ್ಟಡದಲ್ಲಿ ಹಾಕಿದ್ದ ಹಿಂದಿ ಕಟೌಟ್ ಕಿತ್ತು ಎಸೆದಿದ್ದರಿಂದ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದನ್ನು ಖಂಡಿಸಿ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ನಗರದಲ್ಲಿಂದು ಪ್ರತಿಭಟನೆ ನಡೆಸಿತು.

ಸೋಮವಾರ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು, ಕರ್ನಾಟಕವು ಕನ್ನಡಿಗರ ಅಸ್ಮಿತೆಯಾಗಿದೆ. ಇಲ್ಲಿ ಆಡಳಿತ ಭಾಷೆ ಕನ್ನಡವಾಗಿದ್ದು, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಅಂಗಡಿ, ಮಳಿಗೆಗಳು ಸೇರಿದಂತೆ ಎಲ್ಲೆಡೆ ಶೇ.60 ದಷ್ಟು ದಪ್ಪ ಅಕ್ಷರಗಳು ಕನ್ನಡದ್ದು ಇರಬೇಕು ಎಂಬ ನಿಯಮವಿದ್ದರೂ, ಯಾರೂ ಪಾಲಿಸುತ್ತಿಲ್ಲ ಎಂದು ಹೋರಾಟಗಾರರು ಆಪಾದಿಸಿದರು.

ಕನ್ನಡದ ಪರವಾಗಿ ಮಾತನಾಡಿದ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ನಾಡು-ನುಡಿಗಾಗಿ ಹೋರಾಟ ಮಾಡಿದವರ ಬಂಧನ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇಲ್ಲಿ ಹಿಂದಿ ಹೇರಿಕೆ ಸಲ್ಲದು. ಹೀಗಾಗಿ, ಕೂಡಲೇ ಬಂಧಿಸಿ, ಜೈಲಿಗೆ ಹಾಕಿರುವ ಕನ್ನಡ ಹೋರಾಟಗಾರರನ್ನು ಕೂಡಲೇ ರಾಜ್ಯ ಸರಕಾರ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ ಶೆಟ್ಟಿ ಮಾತನಾಡಿ, ನಮ್ಮ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ. ದೇವಸ್ಥಾನ, ಜೈನ್ ಮಂದಿರ, ಮಸೀದಿ, ಚರ್ಚ್‌ಗಳ ಬಳಿ ಹಾಕಿರುವ ಬ್ಯಾನರ್‌ಗಳನ್ನು ಹರಿಯುವುದೂ ಅಲ್ಲ. ಆದರೆ, ನಮ್ಮ ಹೋರಾಟ ಕನ್ನಡ ವಿರೋಧಿಗಳ ವಿರುದ್ಧ, ಹಿಂದಿ ಹೇರಿಕೆಯ ವಿರುದ್ಧವಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಶೇ.60 ರಷ್ಟು ಬ್ಯಾನರ್, ಬೋರ್ಡ್‌ಗಳು ಕನ್ನಡದಲ್ಲಿಯೇ ಇರಬೇಕು ಎಂಬ ಕಾನೂನು ಇದೆ. ಆದರೆ, ರವಿವಾರ ನಡೆದ ಘಟನೆಯಲ್ಲಿ ಜೈನರ ತಪ್ಪಿದ್ದರೂ, ಬೋರ್ಡ್ ಹರಿದರು ಎಂಬ ಕಾರಣಕ್ಕೆ ಕನ್ನಡ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಬೇಲ್ ಇಲ್ಲದಂತಹ ಅಮಾನುಷವಾದ ಪ್ರಕರಣ ದಾಖಲು ಮಾಡಿರುವುದು ಖಂಡನಾರ್ಹ ಎಂದರು.

ಇಲ್ಲಿನ ಜನರ ಬದುಕಿಗಾಗಿ ನಾಡಪ್ರಭು ಕೆಂಪೇಗೌಡ ಬೆಂಗಳೂರು ಕಟ್ಟಿದರು. ಆದರೆ, ಇದೀಗ ಇಲ್ಲಿ ಎಲ್ಲ ಪರಭಾಷಿಕರೇ ತುಂಬಿಕೊಂಡಿದ್ದು, ಕನ್ನಡಿಗರಿಗೆ ಅವಕಾಶಗಳೇ ಇಲ್ಲದಂತಾಗುತ್ತಿದೆ. ಕರ್ನಾಟಕ ಕನ್ನಡಿಗರ ಅಸ್ಮಿತೆಯಾಗಿದ್ದು, ಇದು ನಮ್ಮ ಸಾರ್ವಭೌಮವಾಗಿದೆ. ಇದನ್ನು ಯಾರಿಗೂ ಬಿಟ್ಟುಕೊಡಲು ಸಾಧ್ಯವಿಲ್ಲ. ಇಲ್ಲಿನ ಸಂಪೂರ್ಣ ಸ್ವಾತಂತ್ರ ಕನ್ನಡಿಗರಿಗೇ ಸಿಗಬೇಕು ಎಂದು ಆಗ್ರಹಿಸಿದರು.

ಡಿವೈಎಫ್‌ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದೆ. ಕರ್ನಾಟಕದಲ್ಲಿ ಅನೇಕ ಭಾಷೆಗಳಿದ್ದರೂ ಎಲ್ಲರೂ ಒಂದೇ ಎಂದು ಬದುಕುತ್ತಿದ್ದೇವೆ. ಇಲ್ಲಿನ ಎಲ್ಲರಿಗೂ ಅನ್ನ ನೀಡುತ್ತಿರುವುದು ಕನ್ನಡ ಭಾಷೆ. ಹೀಗಾಗಿ, ಅದು ಎಲ್ಲರ ಭಾಷೆಯಾಗಿದ್ದು, ಅದನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ನಮ್ಮದಾಗಿದೆ ಎಂದರು.

ಕನ್ನಡ ಒಕ್ಕೂಟದ ಅಧ್ಯಕ್ಷ ನಾಗೇಶ್ ಮಾತನಾಡಿ, ಕನ್ನಡಿಗರಲ್ಲಿ ಒಗ್ಗಟ್ಟಿರಬೇಕು. ಎಲ್ಲ ಸಂಘಟನೆಗಳು ಒಟ್ಟಾಗಿ ಪರಭಾಷಿಕರ ದಬ್ಬಾಳಿಕೆಗಳ ವಿರುದ್ಧ ಹೋರಾಡಬೇಕು. ನಾವೇನು ಸಮಾಜಘಾತುಕ ಶಕ್ತಿಗಳಲ್ಲ. ನಾಡು-ನುಡಿಗಾಗಿ ಕೆಲಸ ಮಾಡುತ್ತಿದ್ದೇವೆ. ಅಗತ್ಯ ವಿಷಯಗಳ ಕಡೆ ಗಮನ ನೀಡುವುದಿಲ್ಲ. ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಭೀಮ ಶಂಕರ್ ಪಾಟೀಲ್, ಲೋಕೇಶ ಗೌಡ, ರಘು, ನವೀನ್, ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೇಶದಲ್ಲಿ ಯುವಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ಕನ್ನಡ ನಾಡಿನ ಯುವಕರು ಉದ್ಯೋಗವಿಲ್ಲದೆ, ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇಲ್ಲಿ ಅವರು ಅತ್ಯಂತ ಹೀನಾಯವಾಗಿ ಬದುಕುತ್ತಿದ್ದಾರೆ. ಈ ಬಗ್ಗೆ ಗಟ್ಟಿಯಾದ ಧ್ವನಿ ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ದಿಕ್ಕು ತಪ್ಪಿಸಲು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕನ್ನಡಿಗರ ಮೇಲೆ ಧರ್ಮವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.

-ಮುನೀರ್ ಕಾಟಿಪಳ್ಳಿ, ಡಿವೈಎಫ್‌ಐ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News