ಕೇಂದ್ರವು ಕೂಡಲೇ ನೆರೆ ಪರಿಹಾರ ನೀಡಲಿ: ಎಸ್‌ಡಿಪಿಐ ಪಟ್ಟು

Update: 2019-08-19 14:42 GMT

ಬೆಂಗಳೂರು, ಆ.19: ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಬೆಳೆ, ಜಾನುವಾರು ಸೇರಿದಂತೆ ಅಪಾರ ಮೌಲ್ಯದ ಆಸ್ತಿ ನಷ್ಟವಾಗಿರುವ ಹಿನ್ನೆಲೆ ಕೇಂದ್ರ ಸರಕಾರ ಈ ಕೂಡಲೇ ನೆರೆ ಪರಿಹಾರ ಬಿಡುಗಡೆ ಮಾಡಬೇಕೆಂದು ಎಸ್‌ಡಿಪಿಐ ಆಗ್ರಹಿಸಿದೆ.

ಸೋಮವಾರ ನಗರದ ಪುರಭವನದ ಮುಂಭಾಗ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಕೇಂದ್ರ ಸರಕಾರವು, ರಾಜ್ಯದ ಸಹಾಯಕ್ಕೆ ಧಾವಿಸಬೇಕು. ಜೊತೆಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ರಾಜ್ಯದ 18 ಜಿಲ್ಲೆಗಳಲ್ಲಿ 150 ಗ್ರಾಮ ಮತ್ತು 30 ನಗರಗಳು ನೆರೆ ಹಾವಳಿಗೆ ತುತ್ತಾಗಿದೆ. 71 ಜೀವ ಹಾನಿಯಾಗಿದ್ದು, ನೂರಾರು ಜಾನುವಾರು ಅಸುನೀಗಿವೆ. 7 ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದು, 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡದೇ ಕೂಡಲೇ 10 ಸಾವಿರ ಕೋಟಿ ರೂ. ಮಧ್ಯಂತರ ಪರಿಹಾರ ಮಂಜೂರು ಮಾಡಬೇಕೆಂದು ಎಂದ ಅವರು, 2009ರಲ್ಲಿ ನೆರೆ ಬಂದ ಸಂದರ್ಭದಲ್ಲಿ 20 ಸಾವಿರ ಕೋಟಿ ರೂ. ನಷ್ಟವಾಗಿತ್ತು. 229 ಜನರು ಮೃತಪಟ್ಟಿದ್ದರು. ಆದರೆ, ಇದುವರೆಗೂ ನಿರಾಶ್ರಿತರಿಗೆ ಮನೆ ಹಸ್ತಾಂತರವಾಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಫಯಾಝ್ ಅಹ್ಮದ್, ಸಮಿ ಹಝ್ರತ್, ಕೋಶಾಧಿಕಾರಿ ಜಾವೇದ್ ಆಝಾಮ್, ಬೆಂಗಳೂರು ನಗರಾಧ್ಯಕ್ಷ ಶರೀಫ್, ಪ್ರಧಾನ ಕಾರ್ಯದರ್ಶಿ ಸಲೀಮ್, ಕಾರ್ಯದರ್ಶಿ ಮುಝ್ಮುಲ್, ಉಪಾಧ್ಯಕ್ಷ ಗಂಜಪ್ಪ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News