ಕಾರ್ಪೋರೇಷನ್ ಬ್ಯಾಂಕ್‌ನಿಂದ ಬೆಂಗಳೂರು ವಲಯ ಸಭೆ: ನವ ಚಿಂತನೆಗಳಿಗೆ ಮೂರ್ತರೂಪ ನೀಡಲು ಸಿದ್ಧತೆ

Update: 2019-08-19 14:44 GMT

ಬೆಂಗಳೂರು ಆ. 19: ರಾಷ್ಟ್ರದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕಾರ್ಪೋರೇಷನ್ ಬ್ಯಾಂಕ್ ಹೊಸ ಆಲೋಚನೆಗಳ ಮಂಡನೆ ಮತ್ತು ರಾಷ್ಟ್ರೀಯ ಆದ್ಯತೆಗಳ ಹಿನ್ನೆಲೆಯಲ್ಲಿ ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಮುಂದಡಿ ಇರಿಸಿದ್ದು, ಇದಕ್ಕಾಗಿ ಬ್ಯಾಂಕ್‌ನ ಬೆಂಗಳೂರು ವಲಯದ ಪ್ರಾದೇಶಿಕ ಮಟ್ಟದ ಸಭೆಯನ್ನು ಯಶಸ್ವಿಯಾಗಿ ನಡೆಸಿದೆ.

ಆ.17ರಂದು ಬೆಂಗಳೂರು ವಲಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬ್ಯಾಂಕಿನ ವಲಯ ವ್ಯಾಪ್ತಿಯ ಪ್ರಾದೇಶಿಕ ಮುಖ್ಯಸ್ಥರು ತಮ್ಮ ಅಧೀನದ ಶಾಖೆಗಳ 2014-15ರ ಅವಧಿಯಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ಇದೇ ವೇಳೆ ಕಳೆದ 8ರಿಂದ 10ರವರೆಗೆ ನಡೆದ ಸಭೆಗಳ ಸಂಪೂರ್ಣ ಮಾಹಿತಿ ಜತೆಗೆ ಸಭೆಯಲ್ಲಿ ಬ್ಯಾಂಕಿನ ಭವಿಷ್ಯದ ಸಮಸ್ಯೆಗಳು ಮತ್ತು ಕಾರ್ಯ ಯೋಜನೆಗಳ ರೂಪುರೇಷೆಗಳ ಬಗ್ಗೆ ಆದ ಚರ್ಚೆಯ ವಿಷಯವನ್ನು ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಆರ್ಥಿಕತೆಯ ವಿವಿಧ ಭಾಗಗಳಾದ ಮೂಲಸೌಕರ್ಯ, ಕೈಗಾರಿಕೆ, ಕೃಷಿ, ಎಂಎಸ್‌ಎಂಇ, ಶಿಕ್ಷಣ, ಗೃಹಸಾಲ ಮತ್ತು ರಫ್ತು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಲದ ಮಿತಿಯನ್ನು ಹೆಚ್ಚಿಸುವುದು, ನೂತನ ತಂತ್ರಾಂಶ ಬಳಕೆ ಹಾಗೂ ದತ್ತಾಂಶ ವಿಶ್ಲೇಷಣೆಯ ಬಳಕೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಹೊಸತನದತ್ತ ಸಾಗುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.

ಹಿರಿಯ ನಾಗರಿಕರು, ರೈತರು, ಲಘು ಉದ್ದಿಮೆದಾರರು, ಯುವಜನರು, ವಿದ್ಯಾರ್ಥಿಗಳು, ಮಹಿಳೆಯರ ಅಗತ್ಯತೆಗಳಿಗೆ ಅನುಗುಣವಾಗಿ ಕಾರ್ಪೋರೇಷನ್ ಬ್ಯಾಂಕ್ ಹೆಚ್ಚು ಗ್ರಾಹಕ ಸ್ನೇಹಿಯಾಗಿ ಮುಂದುವರೆಯುವ ಬಗ್ಗೆ ಮಂಥನ ನಡೆಯಿತು.

ಪ್ರಾದೇಶಿಕ ವಲಯದಲ್ಲಿ ಕಾರ್ಯನಿರ್ವಹಣೆ, ರಾಷ್ಟ್ರೀಯ ಆದ್ಯತೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಅದರಲ್ಲೂ ಕಾರ್ಪೋರೇಷನ್ ಬ್ಯಾಂಕ್‌ನ ಯಶಸ್ಸಿ ದಾಪುಗಾಲಿಗೆ ಅನುಗುಣವಾಗುವಂತೆ ಹಲವು ಸಲಹೆಗಳು ಕೇಳಿ ಬಂದವು. ಮುಂದಿನ ದಿನಗಳಲ್ಲಿ ನಡೆಯುವ ಎಸ್‌ಎಲ್ಬಿಸಿ ಮತ್ತು ರಾಜ್ಯಮಟ್ಟದ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಮತ್ತು ಪ್ರಾದೇಶಿಕ ಕಾರ್ಯಾಲಯದ ಅಧೀನದ ಶಾಖೆಗಳ ಕಾರ್ಯವೈಖರಿಯನ್ನು ತುಲನಾತ್ಮಕ ಅಧ್ಯಯನ ಮತ್ತು ಮೌಲ್ಯಮಾಪನಕ್ಕೆ ಈ ಸಭೆ ವೇದಿಕೆಯಾಗಿತ್ತು.

ಈ ಸಭೆಗಳಲ್ಲಿ ಪ್ರಕಟಗೊಳ್ಳುವ ಹೊಸ ಆಲೋಚನೆಗಳನ್ನು ಮುಂದಿನ ದಿನಗಳಲ್ಲಿ ಬ್ಯಾಂಕಿನ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಅನುಷ್ಠಾನಕ್ಕಾಗಿ ಸ್ವೀಕರಿಸಬಹುದಾದ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿರುತ್ತದೆ. ಬ್ಯಾಂಕ್ ಕೈಗೊಂಡಿರುವ ಈ ಸಮಾಲೋಚನಾ ಪ್ರಕ್ರಿಯೆಗಳ ಪರಿಣಾಮವಾಗಿ ರಾಷ್ಟ್ರೀಯ ಆದ್ಯತೆಗಳತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಹೊಸ ಪ್ರಜ್ಞೆಯೊಂದು ಜಾಗೃತಗೊಂಡಿದ್ದು, ಈ ಸಂಪೂರ್ಣ ಸಮಾಲೋಚನಾ ಸಭೆಯ ಫಲಶೃತಿಯಾಗಿ ಪಡೆದ ಸಲಹೆಗಳು ಮತ್ತು ಆಲೋಚನೆಗಳನ್ನು ಬ್ಯಾಂಕ್ ಕಾರ್ಯಗತಗೊಳಿಸುವಲ್ಲಿ ಮುಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News