ಮೌಲ್ಯಗಳನ್ನು ಕುಸಿಯುವಂತೆ ಮಾಡುವ ಅನಪೇಕ್ಷಿತ ಅಂಶಗಳ ಬಗ್ಗೆ ಎಚ್ಚರವಿರಲಿ: ಸದಾನಂದ ಗೌಡ

Update: 2019-08-19 14:50 GMT

ಬೆಂಗಳೂರು, ಆ. 19: ಭಾರತೀಯ ಸಂಸ್ಕೃತಿಯಲ್ಲಿರುವ ಅನೇಕ ಆರೋಗ್ಯಕರ ಮೌಲ್ಯಗಳನ್ನು ಆಧುನಿಕ ಬದುಕಿನಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಕರೆ ನೀಡಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆಯ ಬದುಕಿನಲ್ಲಿ ಅನೇಕ ಅನಪೇಕ್ಷಿತ ಅಂಶಗಳು ನಮ್ಮ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತಿದ್ದು ಅವುಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಆಧುನಿಕತೆ ಮತ್ತು ಪರಂಪರೆಯು ಒಂದಕ್ಕೊಂದು ಸಮ್ಮಿಲನಗೊಂಡು ಇವತ್ತಿನ ಸಂಕೀರ್ಣ ಬದುಕನ್ನು ರೂಪಿಸಬೇಕಾಗಿದೆ ಎಂದ ಅವರು, ಜಾನಪದ ಮತ್ತು ಶಿಷ್ಟ ಸಂಸ್ಕೃತಿ ಎರಡನ್ನೂ ಪರಿಗಣಿಸಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿದೆ ಎಂದು ಶ್ಲಾಘಿಸಿದರು.

ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ಯುವಜನತೆಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಉತ್ತಮ ಮೌಲ್ಯಗಳನ್ನು ಪುನರ್ ಸೃಷ್ಟಿಸಬೇಕಾದ ಅಗತ್ಯವಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಜ್ಞಾನವನ್ನು ಸಾಂಸ್ಕೃತಿಕ ಅನುಸಂಧಾನದ ಮೂಲಕ ಮನುಷ್ಯನ ಬದುಕಿನ ಒಳ್ಳೆಯದಕ್ಕಾಗಿ ಉಪಯೋಗಿಸಿಕೊಳ್ಳಿ ಎಂದರು. ಲೇಖಕ ಎಚ್.ಎಸ್.ವೆಂಕಟೇಶಮೂರ್ತಿ, ಕಲಾವಿದೆ ಮಲ್ಲವ್ವ ಮ್ಯಾಗೇರಿ, ಸಂಗೀತ ನಿರ್ದೇಶಕ ಶ್ರೀನಿವಾಸ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News