ಬಿಬಿಎಂಪಿ ಬಜೆಟ್ ಗೆ ತಡೆ: ಆಡಳಿತ-ಪ್ರತಿ ಪಕ್ಷಗಳ ನಡುವೆ ವಾಗ್ವಾದ

Update: 2019-08-19 17:12 GMT

ಬೆಂಗಳೂರು, ಆ.19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ತಡೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರದ ವಿರುದ್ಧ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಆಡಳಿತ ಹಾಗೂ ಪ್ರತಿ ಪಕ್ಷಗಳ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.

ಸೋಮವಾರ ನಗರದ ಬಿಬಿಎಂಪಿ ಕೆಂಪೇಗೌಡ ಸಭಾಂಗಣದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪಕ್ಷದ ನಾಯಕ ಅಬ್ದುಲ್ ವಾಜೀದ್, ಈಗಾಗಲೇ ಪಾಲಿಕೆ ಬಜೆಟ್ ಮಂಡನೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಾಲಿಕೆ ಬಜೆಟ್ ತಡೆ ಹಿಡಿದಿದ್ದಾರೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಸರಕಾರ ಏಕೆ ಬಜೆಟ್‌ನ್ನು ತಡೆ ಹಿಡಿದಿದೆ. ಅಂಗೀಕಾರ ಮಾಡುತ್ತಾ, ಇಲ್ಲವಾ ಎಂದು ಪಟ್ಟು ಹಿಡಿದರು.

ಅಂಗೀಕಾರವಾದ ಬಜೆಟ್‌ಗೆ ತಡೆಡಿಯುವ ಹೊಸ ಸಂಪ್ರದಾಯವನ್ನು ಬಿಜೆಪಿ ಸರಕಾರ ಹುಟ್ಟುಹಾಕುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆರಳಿದ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು, ಬಜೆಟ್ ಅನ್ನು ಅಂಗೀಕಾರವಾಗದಂತೆ, ತಡೆಹಿಡಿಯುವುದಕ್ಕೆ ಸಚಿವ ಸಂಪುಟಕ್ಕೆ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡರು.

ಆ ವೇಳೆ ಕಾಂಗ್ರೆಸ್‌ನ ಎಂ.ಶಿವರಾಜ್, ಮಾತನಾಡಲು ಮುಂದಾಗುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಪದ್ಮನಾಭ ರೆಡ್ಡಿ, ನನ್ನ ಮಾತು ಮುಗಿದ ಮೇಲೆ ಮಾತನಾಡಿ ಎಂದು ಹೇಳಿದರು. ಆಗ ಆಡಳಿತ ಪಕ್ಷದ ಸದಸ್ಯರು ಒಮ್ಮೆಗೆ ಎದ್ದು ನಿಲ್ಲುತ್ತಿದ್ದಂತೆ, ಪದ್ಮನಾಭ ರೆಡ್ಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಆಡಳಿತ ಈಗ ಬಿಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತ 12,961 ಕೋಟಿ ಕೌನ್ಸಿಲ್‌ನಿಂದ ಅಂಗೀಕಾರ ಪಡೆದುಕೊಂಡು ಸರಕಾರಕ್ಕೆ ಅನುಮತಿಗಾಗಿ ಕಳುಹಿಸಿಕೊಟ್ಟಿತು. ಆದರೆ ಹಣಕಾಸು ಇಲಾಖೆ ಅನುಮೋದನೆ ನೀಡದೆ, ಕೇವಲ 9 ಸಾವಿರ ಕೋಟಿ ರೂ. ಗೆ ಸೀಮಿತಗೊಳಿಸಿತು. ಆದರೆ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರು, 12,961 ಕೋಟಿಗೆ ಅಂಗೀಕಾರ ನೀಡುವುದಲ್ಲದೆ, ಹಣಕಾಸು ಸ್ಥಿತಿ ಗಮನಿಸಿ, ಪೂರಕ ಬಜೆಟ್ ಅನ್ನು ಮಂಡಿಸಿ ಎಂದು ಆದೇಶಿಸಿದ್ದರು ಎಂದು ಪದ್ಮನಾಭ ರೆಡ್ಡಿ ಹೇಳಿದರು.

ಸಚಿವ ಸಂಪುಟದಲ್ಲಿ ಬಜೆಟ್ ಮಂಡಿಸದೆ, ಅಂಗೀಕಾರ ನೀಡಲು ಉಪಮುಖ್ಯಮಂತ್ರಿಗಳಿಗೆ ಯಾರು ಅಧಿಕಾರ ಕೊಟ್ಟವರು ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಮತ್ತೊಮ್ಮೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಯು ನಡೆಯಿತು. ಮೊದಲೇ ಅಂಗೀಕಾರವಾಗಿದ್ದ ಬಜೆಟ್ ಅನ್ನು ತಡೆಹಿಡಿಯಲು ಸಚಿವ ಸಂಪುಟಕ್ಕೆ ಅಧಿಕಾರ ಇದೆಯೇ ಎಂದು ಏರಿದ ಧ್ವನಿಯಲ್ಲಿ ಅಬ್ದುಲ್ ವಾಜಿದ್ ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News