ನಾಳೆ ಬೆಳಗ್ಗೆ 10:30ಕ್ಕೆ ನೂತನ ಸಚಿವರ ಪ್ರಮಾಣ ವಚನ

Update: 2019-08-19 17:20 GMT

ಬೆಂಗಳೂರು, ಆ. 19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ನಾಳೆ(ಆ.20) ಬೆಳಗ್ಗೆ 10:30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ನಡೆಯಲಿದೆ.

ನೂತನವಾಗಿ ನೇಮಕವಾದ ಮಂತ್ರಿ ಮಂಡಲ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಲಿದ್ದಾರೆ.

ಪ್ರಮಾಣ ವಚನ: ನೂತನ ಸಚಿವ ಸಂಪುಟ ವಿಸ್ತರಣೆ ನಾಳೆ ಬೆಳಗ್ಗೆ 10:30ರಿಂದ 11:30ರ ಒಳಗೆ ನಡೆಯಲಿದ್ದು, ಈ ಸಮಾರಂಭಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 13ರಿಂದ 14 ಮಂದಿ ಸದಸ್ಯರು ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಆ ಬಳಿಕ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಹೇಳಿದರು.

ಈ ಮಧ್ಯೆ ಡಾಲರ್ಸ್‌ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಸಚಿವ ಸ್ಥಾನಕಾಂಕ್ಷಿ ಆಪ್ತ ಶಾಸಕರಾದ ಬವಸರಾಜ ಬೊಮ್ಮಾಯಿ, ಡಾ.ಅಶ್ವಥ್ ನಾರಾಯಣ, ಆರ್.ಅಶೋಕ್, ಗೋವಿಂದ ಕಾರಜೋಳ, ಸುನೀಲ್‌ಕುಮಾರ್, ಅಂಗಾರ, ಪ್ರಭು ಚೌವ್ಹಾಣ್ ಸೇರಿ ಇನ್ನಿತರರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮಾಲೋಚನೆ ನಡೆಸಿದರು.

ಕೆಲದಿನ ಹಿಂದೆಯಷ್ಟೇ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿ ಹಿಡಿದು ದಿಲ್ಲಿಗೆ ತೆರಳಿದ್ದ ಯಡಿಯೂರಪ್ಪನವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿ.ಎಲ್.ಸಂತೋಷ್ ಜತೆಯಲ್ಲಿ ಸಂಪುಟ ರಚನೆ ಸಂಬಂಧ ಚರ್ಚಿಸಲು ಸೂಚನೆ ನೀಡಿದ್ದರು. ಅಲ್ಲದೆ, ‘ನಿಮ್ಮ ಅಪೇಕ್ಷೆಯಂತೆ ನೀವು ಸಿಎಂ ಆಗಿದ್ದೀರಿ, ಸಂಪುಟದಲ್ಲಿ ಯಾರು ಇರಬೇಕೆಂಬುದನ್ನು ನಾವು ನಿರ್ಧರಿಸುತ್ತೇವೆ’ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಆ ಹಿನ್ನೆಲೆಯಲ್ಲಿ ಸಂಪುಟ ಪ್ರಮಾಣ ವಚನಕ್ಕೆ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಈವರೆಗೂ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರು ಯಡಿಯೂರಪ್ಪಗೆ ರವಾನಿಸಿಲ್ಲ. ಹೀಗಾಗಿ ಬಿಎಸ್‌ವೈ ಆಪ್ತರಲ್ಲಿ ಸಚಿವ ಸ್ಥಾನ ಕೈತಪ್ಪುವ ಆತಂಕ ಮನೆ ಮಾಡಿದೆ. ಅಲ್ಲದೇ, ಎಲ್ಲ ಶಾಸಕರಿಗೂ ನಾಳೆ ರಾಜಭವನಕ್ಕೆ ಆಗಮಿಸುವಂತೆ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ.

ಈ ನಡುವೆಯೇ ಸಂಪುಟದಲ್ಲಿ ಹಿರಿಯರಿಗೆ ಆದ್ಯತೆ ನೀಡಬೇಕೇ? ಅಥವಾ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕೇ? ಎಂಬ ಗೊಂದಲಕ್ಕೆ ವರಿಷ್ಠರು ಸಿಲುಕಿದ್ದು, ಅಂತಿಮವಾಗಿ ಹೊಸಬರಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈ ಸಂಪುಟದಲ್ಲಿ ಯಾರ್ಯಾರು ಸಚಿವರಾಗಿ ಇರಬೇಕೆಂದು ಬಿ.ಎಲ್. ಸಂತೋಷ್ ಅವರೇ ತೀರ್ಮಾನಿಸುವ ಸಾಧ್ಯತೆಗಳಿವೆ. ಅವರ ಜತೆ ಸಂಭಾವ್ಯ ಸಚಿವರ ಪಟ್ಟಿಯ ಬಗ್ಗೆ ಅಮಿತ್ ಶಾ ಚರ್ಚಿಸಿ ಅಂತಿಮಗೊಳಿಸಿ ಯಡಿಯೂರಪ್ಪನವರಿಗೆ ರವಾನಿಸಲಿದ್ದಾರೆ ಎಂದು ಗೊತ್ತಾಗಿದೆ.

ಸಂಭಾವ್ಯ ಪಟ್ಟಿ: ಡಾ.ಅಶ್ವಥ್ ನಾರಾಯಣ್, ಜೆ.ಸಿ.ಮಾಧುಸ್ವಾಮಿ, ಬಿ.ಸಿ. ನಾಗೇಶ್ (ತಿಪಟೂರು), ಎಚ್.ನಾಗೇಶ್(ಪಕ್ಷೇತರ), ಶಶಿಕಲಾ ಜೊಲ್ಲೆ, ಬಿ. ಶ್ರೀರಾಮುಲು, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಅಪ್ಪಚ್ಚು ರಂಜನ್, ಕೋಟಾ ಶ್ರೀನಿವಾಸ ಪೂಜಾರಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಸಿ.ಸಿ. ಪಾಟೀಲ್ ಸಂಪುಟ ಸೇರ್ಪಡೆ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News