ಭಾರತೀಯ ಸೈಕ್ಲಿಂಗ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದ ಇಸೋ ಅಲ್ಬೆನ್

Update: 2019-08-19 18:55 GMT

ಹೊಸದಿಲ್ಲಿ, ಆ.19: ಸಾಧಾರಣ ಎತ್ತರದ, ಎಲ್ಲರೂ ತಕ್ಷಣಕ್ಕೆ ವೇಟ್‌ಲಿಫ್ಟರ್ ಎಂದು ತಪ್ಪಾಗಿ ಗ್ರಹಿಸಬಹುದಾದ ಯುವಕ ಇಸೋ ಅಲ್ಬೆನ್ ಭಾರತದ ಸೈಕ್ಲಿಂಗ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದ್ದಾರೆ.

ಅಲ್ಬೆನ್ ಅವರ ಸ್ಥಿರ ಪ್ರದರ್ಶನ ಹಾಗೂ ಅಮೋಘ ಪ್ರತಿಭೆಯ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾರೆ. 18ರ ಹರೆಯದ ಅಲ್ಬೆನ್ ಏಶ್ಯನ್ ಟ್ರಾಕ್ ಚಾಂಪಿಯನ್‌ಶಿಪ್‌ನಲ್ಲಿ ಆರು ಚಿನ್ನದ ಪದಕ, ಜೂನಿಯರ್ ಟ್ರಾಕ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನದ ಪದಕ ಜಯಿಸಿದ್ದಾರೆ. ಅಂತರ್‌ರಾಷ್ಟ್ರೀಯ ಸೈಕ್ಲಿಂಗ್ ಪದಕ ಜಯಿಸಿರುವ ಭಾರತದ ಮೊದಲಿಗನಾಗಿರುವ ಅಲ್ಬಿನ್ ಜೂನಿಯರ್ ಪುರುಷರ ಕೆರಿನ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಹಾಗೂ ಜೂನಿಯರ್ ಪುರುಷರ ಸ್ಪ್ರಿಂಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಸೈಕ್ಲಿಸ್ಟ್ ಆಗಿದ್ದಾರೆ.

ಇತ್ತೀಚೆಗೆ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಕೊನೆಗೊಂಡ ಜೂನಿಯರ್ ಟ್ರಾಕ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪದಕಗಳನ್ನು ಜಯಿಸಿ ಅಪರೂಪದ ಸಾಧನೆ ಮಾಡಿದ್ದರು.

ಮೊದಲಿಗೆ ರೊಜಿತ್ ಸಿಂಗ್ ಹಾಗೂ ರೊನಾಲ್ಡೊ ಸಿಂಗ್ ಜೊತೆಗೂಡಿ ಭಾರತಕ್ಕೆ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕ ಜಯಿಸಲು ನೆರವಾಗಿದ್ದ ಅಲ್ಬೆನ್ ಈ ವೇಳೆ ತನ್ನದೇ ಏಶ್ಯನ್ ದಾಖಲೆಯನ್ನು ಮುರಿದರು. ಪುರುಷರ ವೈಯಕ್ತಿಕ ಕೆರಿನ್‌ನಲ್ಲಿ ಕಂಚು ಹಾಗೂ ಪುರುಷರ ವೈಯಕ್ತಿಕ ಸ್ಪ್ರಿಂಟ್ ಇವೆಂಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಲ್ಬೆನ್ ಏಕೈಕ ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ಜಯಿಸಿದ ಭಾರತದ ಮೊದಲ ಸೈಕ್ಲಿಸ್ಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

‘‘ಈ ದಾಖಲೆಯನ್ನು ಸದ್ಯಕ್ಕೆ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಈ ಸಾಧನೆ ಎಲ್ಲರಿಗೂ ಹೆಮ್ಮೆ ತಂದಿದೆ’’ಎಂದು ಭಾರತದ ಸ್ಪ್ರಿಂಟ್ ಕೋಚ್ ಆರ್.ಕೆ. ಶರ್ಮಾ ಹೇಳಿದ್ದಾರೆ.

ಜರ್ಮನಿಯಲ್ಲಿ ನಡೆದ ಚಾಂಪಿ ಯನ್‌ಶಿಪ್‌ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದು, ವಿಶ್ವಮಟ್ಟದ ಸೈಕ್ಲಿಂಗ್ ಇವೆಂಟ್‌ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದೆ.

ಅಲ್ಬೆನ್‌ಗೆ ರೋವರ್ ಆಗಬೇಕೆಂಬ ಬಯಕೆ ಇತ್ತು. ಬಹುಮುಖ ಪ್ರತಿಭೆಯ ಅಲ್ಬೆನ್ ಬದಲಾದ ಸನ್ನಿವೇಶದಲ್ಲಿ ಸೈಕಲಿಸ್ಟ್ ಆದರು. ಅಲ್ಬೆನ್ ತಾಯಿ 4,000 ರೂ. ಕೊಟ್ಟು ಮೊದಲ ಸೈಕಲ್ ಖರೀದಿಸಿಕೊಟ್ಟಿದ್ದರು. 2015ರಲ್ಲಿ ಪೋರ್ಟ್ ಬ್ಲೇರ್‌ನ ಸಾಯ್ ಕೇಂದ್ರದಿಂದ ದಿಲ್ಲಿಯಲ್ಲಿರುವ ರಾಷ್ಟ್ರೀಯ ಸೈಕ್ಲಿಂಗ್ ಅಕಾಡಮಿಗೆ ಸೇರ್ಪಡೆಯಾದರು. ಆ ಬಳಿಕ ಹಿಂತಿರುಗಿ ನೋಡದ ಅಲ್ಬೆನ್ ಇಂದು 10 ಲಕ್ಷ ರೂ.ಬೆಲೆ ಬಾಳುವ ಸೈಕಲ್‌ನ್ನು ಏರಿ ಸ್ಪರ್ಧಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News