ಮೂರನೇ ಆ್ಯಶಸ್ ಟೆಸ್ಟ್ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ

Update: 2019-08-19 19:14 GMT

ಲಂಡನ್, ಆ.19: ಈ ವಾರ ಹೆಡ್ಡಿಂಗ್ಲೆಯಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕಾಗಿ ಇಂಗ್ಲೆಂಡ್ ಸೋಮ ವಾರ ಪ್ರಕಟಿಸಿರುವ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಗಾಯಗೊಂಡಿರುವ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ಚೇತರಿಸಿಕೊಳ್ಳಲು ಮತ್ತಷ್ಟು ಕಾಲಾವಕಾಶ ನೀಡಲಾಗಿದ್ದು, ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ.

ರವಿವಾರ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿರುವ ಆಡುವ-11ರ ಬಳಗದ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿದ್ದಾರೆ. ಕುತೂಹಲ ಕೆರಳಿಸಿದ್ದ ಕೊನೆಯ ದಿನದಾಟ ಡ್ರಾನಲ್ಲಿ ಕೊನೆಗೊಳ್ಳುವುದರೊಂದಿಗೆ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆಯದ ಸರ್ರೆಯ ಎಡಗೈ ವೇಗದ ಬೌಲರ್ ಸ್ಯಾಮ್ ಕರನ್ ಮೂರನೇ ಟೆಸ್ಟ್‌ನಲ್ಲಿ 12 ಸದಸ್ಯರ ತಂಡದಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ. ಮೂರನೇ ಟೆಸ್ಟ್ ಗುರುವಾರ ನಾಯಕ ಜೋ ರೂಟ್ ಅವರ ತವರು ಮೈದಾನ ಹೆಡ್ಡಿಂಗ್ಲೆಯಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬೌಲರ್ ಆ್ಯಂಡರ್ಸನ್ ಮೊದಲ ಟೆಸ್ಟ್‌ನಲ್ಲಿ ಕೇವಲ 4 ಓವರ್ ಬೌಲಿಂಗ್ ಮಾಡಿ ಗಾಯಗೊಂಡು ನಿವೃತ್ತಿಯಾಗಿದ್ದರು. ಲಾರ್ಡ್ಸ್ ಟೆಸ್ಟ್‌ನಿಂದ ಹೊರಗುಳಿದಿದ್ದ ಆ್ಯಂಡರ್ಸನ್ ಬದಲಿಗೆ ಆಡಿದ್ದ ಇನ್ನೋರ್ವ ವೇಗದ ಬೌಲರ್ ಜೊಫ್ರಾ ಅರ್ಚರ್ ತನ್ನ ಚೊಚ್ಚಲ ಪಂದ್ಯದಲ್ಲಿ ಒಟ್ಟು 5 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದಾರೆ.

ಸೆಪ್ಟಂಬರ್ 4 ರಂದು ಬುಧವಾರ ಓಲ್ಡ್ ಟ್ರಾಫೋರ್ಡ್‌ನಲ್ಲಿ 4ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆ್ಯಂಡರ್ಸನ್ ತನ್ನ ತವರು ಮೈದಾನದಲ್ಲಿ ಆಡುವ ಸಾಧ್ಯತೆಯಿದೆ.

ಇಂಗ್ಲೆಂಡ್ ತಂಡ

ರೊರಿ ಬರ್ನ್ಸ್, ಜೇಸನ್ ರಾಯ್, ಜೋ ರೂಟ್(ನಾಯಕ), ಡೆನ್ಲಿ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್, ಕ್ರಿಸ್ ವೋಕ್ಸ್, ಜೋಫ್ರಾ ಅರ್ಚರ್, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್, ಸ್ಯಾಮ್ ಕರನ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News