ನೆಹರೂ ಮಹಾನ್ ವ್ಯಕ್ತಿ, ಜೆಎನ್‍ಯು ಹೆಸರು ಬದಲಿಸಬೇಕೆಂದು ಯಾವತ್ತೂ ಬಯಸಿಲ್ಲ

Update: 2019-08-20 10:35 GMT

ಹೊಸದಿಲ್ಲಿ, ಆ.20: “ಜೆಎನ್‍ಯು ಮರುನಾಮಕರಣವಾಗಬೇಕೆಂದು ನಾನೇಕೆ ಬಯಸಬೇಕು?, ನಾನೇನು ಮೂರ್ಖನಲ್ಲ. ಪಂಡಿತ್ ನೆಹರೂ ಅವರಂತಹ ಮಹಾನ್ ವ್ಯಕ್ತಿಯ ಹೆಸರನ್ನು ನಾನು ಯಾಕಾದರೂ ಎತ್ತಲು ಸಾಧ್ಯ?, ಅಷ್ಟಕ್ಕೂ ಅವರು ನಮ್ಮ ಮೊದಲ ಪ್ರಧಾನ ಮಂತ್ರಿ”… ಹೀಗೆಂದು ಹೇಳಿದವರು ವಾಯುವ್ಯ ದಿಲ್ಲಿಯ ಬಿಜೆಪಿ ಸಂಸದ ಹಂಸ್ ರಾಜ್ ಹಂಸ್.

ರಾಜಧಾನಿಯ ಪ್ರತಿಷ್ಠಿತ ಜೆಎನ್‍ ಯುವಿಗೆ ಎಂಎನ್‍ಯು( ಮೋದಿ ನರೇಂದ್ರ ಯುನಿವರ್ಸಿಟಿ) ಎಂದು ಮರು ನಾಮಕರಣಗೊಳಿಸಬೇಕು ಎಂದು ಅವರು ವಿವಿಯಲ್ಲಿ ಎಬಿವಿಪಿ ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದ್ದಾರೆನ್ನಲಾದ ವಿಚಾರ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತಲ್ಲದೆ ವಿವಾದಕ್ಕೂ ಈಡಾಗಿತ್ತು.

“ವಾರ್ತೆಗಳನ್ನು ನೋಡಿ ಆಘಾತವಾಯಿತು” ಎಂದು  ಏಮ್ಸ್ ಗೆ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದಾಗ ಹಂಸ್ ಹೇಳಿದರು. “ಅಲ್ಲಿ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಯಿತು. ಖುಷಿಯಾಯಿತು, ಸಕಾರಾತ್ಮಕ ಧೋರಣೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದೆ'' ಎಂದರು.

ಜೆಎನ್‍ಯು ಎಂದರೆ ಏನೆಂದು ವಿದ್ಯಾರ್ಥಿಯೊಬ್ಬ ಕೇಳಿದಾಗ ಉತ್ತರ ಗೊತ್ತಿದ್ದರೂ ಸುಮ್ಮನೆ ಗೊತ್ತಿಲ್ಲ ಎಂದೆ. ಆಗ ವಿದ್ಯಾರ್ಥಿ ಜವಾಹರಲಾಲ್ ನೆಹರೂ ವಿವಿ, ನಮ್ಮ ನಾಯಕನ ಹೆಸರು ಎಂದಾಗ ನಾನು ನನ್ನ ನಾಯಕ ಎಂಎನ್‍ಯು ಎಂದೆ. ಆಗ ವಿದ್ಯಾರ್ಥಿಗಳಿಗೆ ಅರ್ಥವಾಗಲಿಲ್ಲ. ಹಾಗೆಂದರೆ ಮೋದಿ ನರೇಂದ್ರ ಭಾಯಿ ಯುನಿವರ್ಸಿಟಿ ಎಂದೆ ನಂತರ ನಾವೆಲ್ಲಾ ನಕ್ಕೆವು,'' ಎಂದರು.

“ಆದರೆ ಸುದ್ದಿಯನ್ನು ತಿರುಚಿ ತಪ್ಪು ಅರ್ಥ ಬರುವಂತೆ ಪ್ರಕಟಿಸಲಾಗಿದೆ. ನನ್ನ ಇಡೀ ರಾಜಕೀಯ ಜೀವನ ಹಾಗೂ ಗೌರವಕ್ಕೆ ಧಕ್ಕೆಯಾಗಿದೆ. ಮೋದೀಜಿಗೆ ಇದು ತಿಳಿದರೆ ನನ್ನನ್ನು ಖಂಡಿತ ಗದರುತ್ತಾರೆ. ಜೆಎನ್‍ಯುವಿಗೆ ಎಂಎನ್‍ಯು ಎಂದು ನಾಮಕರಣ ಮಾಡಿದರೆ ಅವರಿಗೆ ಖಷಿಯಾಗದು, ಅವರೊಬ್ಬ ಬಲಿಷ್ಠ ನಾಯಕ,'' ಎಂದು ಸಂಸದ ಹೇಳಿದರು.

``ನಾನು ಜೀವನದಲ್ಲಿ ಯಾವತ್ತೂ  ವಿವಾದಾತ್ಮಕ ಹೇಳಿಕೆ ನೀಡಿಲ್ಲ, ನಾನೊಬ್ಬ ಕಲಾವಿದ ಹಾಗೂ ರಾಜಕಾರಣಿ. ಪ್ರೀತಿ ಹಂಚಲು ನಾನು ಹುಟ್ಟಿದ್ದೇನೆ.  ನನಗೆ ಪದ್ಮ ಶ್ರೀ ಸಹಿತ ಹಲವು ಪ್ರಶಸ್ತಿ ದೊರಕಿದೆ. ಇಂತಹ ಒಂದು ವಿವಾದ ನಾನೇಕೆ ಹುಟ್ಟು ಹಾಕಬೇಕು?'' ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News