ಲಿನ್ ಡಾನ್‌ಗೆ ಶಾಕ್ ನೀಡಿದ ಪ್ರಣಯ್ ಮೂರನೇ ಸುತ್ತಿಗೆ ಲಗ್ಗೆ

Update: 2019-08-20 18:25 GMT

 ಬಾಸೆಲ್(ಸ್ವಿಟ್ಝರ್ಲೆಂಡ್), ಆ.20: ವಿಶ್ವದ ನಂ.30ನೇ ಆಟಗಾರ ಎಚ್.ಎಸ್.ಪ್ರಣಯ್ ಐದು ಬಾರಿಯ ವಿಶ್ವ ಚಾಂಪಿಯನ್ ಚೀನಾದ ಲಿನ್ ಡಾನ್‌ರನ್ನು ಮಣಿಸಿ ಶಾಕ್ ನೀಡಿದ್ದಾರೆ. ವೃತ್ತಿಜೀವನದಲ್ಲಿ ಮಹತ್ವದ ಗೆಲುವು ದಾಖಲಿಸಿರುವ ಪ್ರಣಯ್ ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸುತ್ತಿಗೆ ತಲುಪಿದ್ದಾರೆ.

ಪ್ರಬಲ ಆಟಗಾರರನ್ನು ಮಣಿಸಿದ ಹೆಗ್ಗಳಿಕೆ ಹೊಂದಿರುವ ಪ್ರಣಯ್ ಮಂಗಳವಾರ 62 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 11ನೇ ಶ್ರೇಯಾಂಕದ ಡಾನ್‌ರನ್ನು 21-11, 13-21, 21-7 ಗೇಮ್‌ಗಳ ಅಂತರದಿಂದ ಮಣಿಸಿದರು.

ಪ್ರಣಯ್ ಮೊದಲ ಗೇಮ್‌ನ್ನು 21-11 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ತಿರುಗಿಬಿದ್ದ ಚೀನಾದ ಲೆಜೆಂಡ್ ಲಿನ್ ಡಾನ್ 21-13 ಅಂತರದಿಂದ ಜಯಿಸಿ ಸಮಬಲಗೊಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಪ್ರಣಯ್ ಆರಂಭದಲ್ಲೇ ಮೇಲುಗೈ ಸಾಧಿಸಿದರು. ಐದು ಬಾರಿಯ ಚಾಂಪಿಯನ್‌ಗೆ ಅವಕಾಶ ನಿರಾಕರಿಸಿದರು. ಮೂರನೇ ಗೇಮ್‌ನ ಮಧ್ಯಂತರದಲ್ಲಿ 6 ಅಂಕ ಮುನ್ನಡೆಯಲ್ಲಿದ್ದ ಪ್ರಣಯ್ 21-7 ಅಂತರದಿಂದ ನಿರ್ಣಾಯಕ ಗೇಮ್‌ನ್ನು ಜಯಿಸಿ ಪಂದ್ಯವನ್ನು ವಶಪಡಿಸಿಕೊಂಡರು.

ಪ್ರಣಯ್ ಈ ಹಿಂದೆ 2018ರ ಇಂಡೋನೇಶ್ಯ ಓಪನ್ ಹಾಗೂ 2015ರ ಫ್ರೆಂಚ್ ಓಪನ್‌ನಲ್ಲಿ ಲಿನ್ ಡಾನ್‌ರನ್ನು ಸೋಲಿಸಿದ್ದರು. ಪ್ರಣಯ್ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಲೀ ವಿರುದ್ಧ ಆಡಿದ 5ನೇ ಪಂದ್ಯದಲ್ಲಿ ಮೂರನೇ ಗೆಲುವು ದಾಖಲಿಸಿದರು. ಇದೀಗ ಹೆಡ್-ಟು-ಹೆಡ್ ದಾಖಲೆಯಲ್ಲಿ 3-2 ಮುನ್ನಡೆ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಫಿನ್‌ಲ್ಯಾಂಡ್‌ನ 93ನೇ ರ್ಯಾಂಕಿನ ಎಟು ಹಿನೊರನ್ನು 17-21, 21-10, 21-11 ಗೇಮ್‌ಗಳ ಅಂತರದಿಂದ ಮಣಿಸಿದ್ದ ಪ್ರಣಯ್ ವಿಶ್ವದ ನಂ.17ನೇ ಆಟಗಾರ ಡಾನ್ ಸವಾಲು ಎದುರಿಸಲು ಸಜ್ಜಾಗಿದ್ದರು. ಪ್ರಣಯ್ ಮುಂದಿನ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ಸವಾಲು ಎದುರಿಸಲಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಮೊಮೊಟೊ ಸ್ಪೇನ್‌ನ ಲೂಯಿಸ್ ಎನ್ರಿಕ್‌ರನ್ನು 21-10, 21-7 ಅಂತರದಿಂದ ಮಣಿಸಿದ್ದಾರೆ. ಮೊಮೊಟಾ ಅವರು ಪ್ರಣಯ್ ವಿರುದ್ಧ ಈ ತನಕ ಆಡಿರುವ ಎಲ್ಲ 4 ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News