ಸುಶೀಲ್ ಕುಮಾರ್‌ಗೆ ಸ್ಥಾನ

Update: 2019-08-20 18:29 GMT

ಹೊಸದಿಲ್ಲಿ, ಆ.20: ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿ ಮಂಗಳವಾರ ನಡೆದ 74 ಕೆಜಿ ಫೈನಲ್‌ನಲ್ಲಿ ಜಿತೇಂದರ್ ಕುಮಾರ್‌ರನ್ನು 4-2 ಅಂತರದಿಂದ ಮಣಿಸಿದ ಸುಶೀಲ್ ಕುಮಾರ್ ಈ ಸಾಧನೆ ಮಾಡಿದರು.

1,500 ಆಸನದ ಸಾಮರ್ಥ್ಯದ ಐಜಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಬ್ಬರೂ ಕುಸ್ತಿಪಟುಗಳು ಸಮಬಲದ ಹೋರಾಟ ನೀಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಮೊದಲ ಅವಧಿಯಲ್ಲಿ ಸುಶೀಲ್ 4-0 ಮುನ್ನಡೆ ಸಾಧಿಸಿದ್ದರು. ಎರಡನೇ ಅವಧಿಯ ಆರಂಭದಲ್ಲಿ ಜಿತೇಂದರ್ ಕಣ್ಣಿಗೆ ಗಾಯವಾಗಿತ್ತು. ಒಂದು ವರ್ಷದ ಬಳಿಕ ಕುಸ್ತಿಕಣಕ್ಕೆ ಇಳಿದಿದ್ದ ಸುಶೀಲ್ ತಕ್ಷಣವೇ ತನ್ನ ತಪ್ಪಿಗೆ ಕ್ಷಮೆಯಾಚಿಸಿದರು. ಸುಶೀಲ್ ಅವರ ಮತ್ತೊಂದು ಪಂಚ್‌ಗೆ ಜಿತೇಂದರ್ ಮೊಣಕೈಗೆ ಗಾಯವಾಯಿತು.

ಗಾಯಗೊಂಡರೂ ತನ್ನ ಹೋರಾಟವನ್ನು ಮುಂದುವರಿಸಿದ ಜಿತೇಂದರ್ ಮೂರು ಬಾರಿ ಸುಶೀಲ್ ಅವರ ಬಲಗಾಲನ್ನು ಹಿಡಿದರು. ಆದರೆ, ಸರಿಯಾದ ಹಿಡಿತ ಸಾಧಿಸದ ಕಾರಣ ಅದನ್ನು ಪಾಯಿಂಟ್ ಆಗಿ ಪರಿವರ್ತಿಸಲು ವಿಫಲರಾದರು.

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಏಕೈಕ ಕುಸ್ತಿಪಟು ಆಗಿರುವ ಸುಶೀಲ್, ‘‘ನಾನು ಉದ್ದೇಶಪೂರ್ವಕವಾಗಿ ಎದುರಾಳಿಗೆ ಗಾಯವಾಗುವಂತೆ ಆಡಿಲ್ಲ. ಜಿತೇಂದರ್ ನನ್ನ ಕಿರಿಯ ತಮ್ಮನಿದ್ದಂತೆ. ಇದೊಂದು ಉತ್ತಮ ಹೋರಾಟವಾಗಿತ್ತು. ಇಂತಹ ಫೈಟ್ ನಿರಂತರವಾಗಿ ನಡೆದರೆ, ದೇಶ ಉತ್ತಮ ಫಲಿತಾಂಶವನ್ನು ಕಾಣಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News