ಶ್ರೀಶಾಂತ್ ಮೇಲಿನ ನಿಷೇಧ 2020ರ ಆಗಸ್ಟ್‌ನಲ್ಲಿ ಅಂತ್ಯ

Update: 2019-08-20 18:46 GMT

 ಮುಂಬೈ, ಆ.20: ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಆಜೀವ ನಿಷೇಧಕ್ಕೊಳಗಾಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ ಮೇಲಿನ ನಿಷೇಧವನ್ನು 7 ವರ್ಷಕ್ಕೆ ಇಳಿಸಲಾಗಿದ್ದು, ನಿಷೇಧದ ಅವಧಿ 2020ರ ಆಗಸ್ಟ್ ನಲ್ಲಿ ಕೊನೆಗೊಳ್ಳಲಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ ಬಿಸಿಸಿಐ ಒಂಬುಡ್ಸ್‌ಮನ್ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್ ಈ ಆದೇಶ ನೀಡಿದ್ದಾರೆ.

  ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ವೇಗಿ ಶ್ರೀಶಾಂತ್ 2013ರಲ್ಲಿ ಐಪಿಎಲ್ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ತನ್ನ ಸಹ ಆಟಗಾರರಾದ ಅಜಿತ್ ಚಾಂಡಿಲ ಮತ್ತು ಅಂಕಿತ್ ಚೌಹಾಣ್ ಜೊತೆ ಕ್ರಿಕೆಟ್‌ನಿಂದ ಅಜೀವ ನಿಷೇಧಕ್ಕೊಳಗಾಗಿದ್ದರು.

ಬಿಸಿಸಿಐ 2013 ಆಗಸ್ಟ್‌ನಲ್ಲಿ ಮೂವರು ಆಟಗಾರರಿಗೂ ಆಜೀವ ನಿಷೇಧ ವಿಧಿಸಿತ್ತು. ತನ್ನ ನಿಷೇಧದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶ್ರೀಶಾಂತ್ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಶ್ರೀಶಾಂತ್ ಪರ ತೀರ್ಪು ನ್ಯಾಯಾಲಯದಿಂದ ಹೊರ ಬಂದಿತ್ತು.

 ಇದೀಗ ಸ್ಪಷ್ಟನೆ ನೀಡಿರುವ ತನಿಖಾಧಿಕಾರಿ ಡಿ.ಕೆ.ಜೈನ್ ಅವರು ಶ್ರೀಶಾಂತ್‌ಗೆ 2013 ಆಗಸ್ಟ್ 13ರಿಂದ 2020 ಆ.7ರ ತನಕ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಅವರು ಕ್ರಿಕೆಟ್‌ನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 36ರ ಹರೆಯದ ಶ್ರೀಶಾಂತ್ ಈಗಾಗಲೇ 6 ವರ್ಷಗಳ ಕಾಲ ನಿಷೇಧದ ಸಜೆಯನ್ನು ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News