​ಮಳೆ ಹಾನಿ: ಕೇರಳಕ್ಕೆ ಸಿಗದ ಕೇಂದ್ರ ನೆರವು

Update: 2019-08-21 06:40 GMT

ಹೊಸದಿಲ್ಲಿ : ಒಡಿಶಾ, ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಳೆದ ಹಣಕಾಸು ವರ್ಷ ನೈಸರ್ಗಿಕ ವಿಕೋಪಗಳಿಂದ ಆದ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ 4432 ಕೋಟಿ ರೂ. ನೆರವು ಮಂಜೂರು ಮಾಡಿದೆ. ಆದರೆ ಭೀಕರ ಪ್ರವಾಹದಿಂದ ತತ್ತರಿಸಿದ್ದ ಕೇರಳಕ್ಕೆ ಚಿಕ್ಕಾಸು ನೆರವು ಕೂಡಾ ದಕ್ಕಿಲ್ಲ.

ವ್ಯಾಪಕ ಮಳೆ ಹಾಗೂ ಪ್ರವಾಹದಿಂದ 11 ರಾಜ್ಯಗಳಲ್ಲಿ ಸಂಭವಿಸಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ತಕ್ಷಣವೇ ಅಂತರ ಸಚಿವಾಲಯ ಕೇಂದ್ರ ತಂಡವನ್ನು ರಚಿಸಿ ನಿಯೋಜಿಸಲು ಕೂಡಾ ನಿರ್ಧರಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ, ಫನಿ ಚಂಡಮಾರುತದಿಂದ ತತ್ತರಿಸಿದ್ದ ಒಡಿಶಾಗೆ 3338 ಕೋಟಿ ರೂ., ಬರ ಪರಿಸ್ಥಿತಿ ಎದುರಿಸಿದ ಕರ್ನಾಟಕಕ್ಕೆ 1029 ಕೋಟಿ ಹಾಗೂ ಹಿಮಪಾತ ಹಾಗೂ ಆಲಿಕಲ್ಲು ಮಳೆಯಿಂದ ಆದ ಹಾನಿಗಾಗಿ ಹಿಮಾಚಲ ಪ್ರದೇಶಕ್ಕೆ 64 ಕೋಟಿ ರೂ. ಹೆಚ್ಚುವರಿ ಕೇಂದ್ರೀಯ ನೆರವು ನೀಡಲು ನಿರ್ಧರಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈ ಮೊತ್ತ ನೀಡಲಾಗುತ್ತದೆ.

ಈ ಪಟ್ಟಿಯಲ್ಲಿ ಕೇರಳದ ಹೆಸರು ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಇಸಾಕ್ ಹೇಳಿದ್ದಾರೆ.

"ಪ್ರವಾಹಪೀಡಿತ ರಾಜ್ಯಗಳಿಗೆ ಎನ್‌ಡಿಆರ್‌ಎಫ್‌ನಿಂದ 4432 ಕೋಟಿ ರೂ. ನೆರವು ನೀಡಲು ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ತೀವ್ರ ನೆರೆಹಾನಿಯಿಂದ ಕಂಗೆಟ್ಟ ಕೇರಳಕ್ಕೆ ಸಿಕ್ಕಿದ್ದು ಶೂನ್ಯ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಸ್ಸಾಂ, ಮೇಘಾಲಯ, ತ್ರಿಪುರಾ, ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದ ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಅಂತರ ಸಚಿವಾಲಯ ತಂಡಗಳನ್ನು ರಚಿಸಿ, ನಿಯೋಜಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News