ಕಳವು ಪ್ರಕರಣ: ಇಬ್ಬರ ಬಂಧನ, 39 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2019-08-21 13:07 GMT

ಬೆಂಗಳೂರು, ಆ.21: ಮನೆಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿರುವ ಇಲ್ಲಿನ ಉತ್ತರ ವಿಭಾಗದ ಬಾಗಲಗುಂಟೆ ಠಾಣಾ ಪೊಲೀಸರು 39 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ. 

ಮೂಲತಃ ತಿಪಟೂರು ತಾಲೂಕಿನ ಹಾಲಕುರ್ಕಿ ಗ್ರಾಮದ ಯೋಗೇಶ್(26) ಮತ್ತು ಕಳವು ಮಾಲು ಸ್ವೀಕರಿಸುತ್ತಿದ್ದ ಬೊಮ್ಮನಹಳ್ಳಿ ಶಾಖೆಯ ಅಟ್ಟಿಕಾ ಗೋಲ್ಡ್ ವ್ಯವಸ್ಥಾಪಕ ದೇವೇಂದ್ರ ಬಾಬು(26) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್ವರಿ ನಗರದ 5ನೆ ಕ್ರಾಸ್ ನಿವಾಸಿ ಆದಿ ನಾರಾಯಣ ಎಂಬವರು ಐದು ತಿಂಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಪ್ರವಾಸ ಹೋಗಿದ್ದ ವೇಳೆ, ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ತನಿಖೆ ನಡೆಸಿದ ಬಾಗಲಗುಂಟೆ ಠಾಣೆ ಪೊಲೀಸರು, ಅನುಮಾನದ ಮೇಲೆ ನಾಗಸಂದ್ರದ ಚನ್ನನಾಯಕನಪಾಳ್ಯದಲ್ಲಿ ವಾಸವಾಗಿದ್ದ ಯೋಗೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈತನಿಂದ 39 ಲಕ್ಷ ರೂ. ಬೆಲೆಬಾಳುವ 1.13 ಕೆ.ಜಿ. ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತುಗಳು 2 ಬೈಕ್ ಜಪ್ತಿ ಮಾಡಲಾಗಿದ್ದು, ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.

ಯೋಗೇಶ್‌ನಿಂದ ಅಟ್ಟಿಕಾ ಗೋಲ್ಡ್ ಕಂಪೆನಿಯ ಬೊಮ್ಮನಹಳ್ಳಿ ಶಾಖೆಯ ವ್ಯವಸ್ಥಾಪಕ ದೇವೇಂದ್ರ ಸುಮಾರು 600 ಗ್ರಾಂ ಚಿನ್ನಾಭರಣಗಳನ್ನು ಖರೀದಿಸಿದ್ದು ಆತನ ಬಳಿ ಎರಡು ಬಿಲ್ ಬುಕ್ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News