ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಹಾಸ್ಟೆಲ್ ಹೊರಗುತ್ತಿಗೆ ನೌಕರರ ಧರಣಿ, ಮೆರವಣಿಗೆ

Update: 2019-08-21 13:16 GMT

ಬೆಂಗಳೂರು, ಆ.21: ಹೊರ ಗುತ್ತಿಗೆ ನೌಕರರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಬೇಕು. ಜತೆಗೆ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಾಸ್ಟೆಲ್ ಗಳ ಡಿ ವರ್ಗದ ಹೊರಗುತ್ತಿಗೆ ನೌಕರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬುಧವಾರ ನಗರದ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಹಾಸ್ಟೆಲ್ ಹೊರಗುತ್ತಿಗೆ ನೌಕರರು, ಸರಕಾರ ನಮ್ಮ ಬೇಡಿಕೆ ಈಡೇರಿಸಲಿ ಎಂದು ಆಗ್ರಹಿಸಿದರು.

ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ನೇರ ನೇಮಕಾತಿ ಮೂಲಕ ಸುಮಾರು 4 ಸಾವಿರ ಅಡುಗೆಯವರು ಅಡುಗೆ ಸಹಾಯಕರನ್ನು ಭರ್ತಿ ಮಾಡಿರುವುದರಿಂದ ಆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊರ ಸಂಪನ್ಮೂಲ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಿಂದ ನಾವು ಬೀದಿ ಪಾಲಾಗಿದ್ದೇವೆ. ಅಷ್ಟೇ ಅಲ್ಲದೆ, ನಮ್ಮ ವಯಸ್ಸು ಮೀರಿದ್ದು, ಬೇರೆ ಯಾವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ನಮ್ಮ ಕುಟುಂಬಗಳು ಸಹ ನಮ್ಮನ್ನೇ ನಂಬಿವೆ ಎಂದು ಪ್ರತಿಭಟನಾಕಾರರು ಹೇಳಿದರು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ, ಹೊಸದಾಗಿ ನೇಮಕಗೊಳ್ಳುವ ಖಾಯಂ ನೌಕರರನ್ನು ಹೊಸ ಹಾಸ್ಟೆಲ್ ಗಳಿಗೆ ಮಾತ್ರ ನಿಯೋಜಿಸುತ್ತೇವೆ. ಹಾಲಿ ಹೊರಗುತ್ತಿಗೆ ನೌಕರರ ನಿವೃತ್ತಿವರೆಗೆ ಸೇವಾ ಭದ್ರತೆ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಈ ಹಿಂದೆ ಸರಕಾರ ಭರವಸೆ ನೀಡಿತ್ತು. ಆದರೆ, ಇದೀಗ ನೇರ ನೇಮಕಾತಿಯಲ್ಲಿ ಆಯ್ಕೆಯಾದವರನ್ನು ಕೆಲಸಕ್ಕೆ ಸೇರಿಸಿಕೊಂಡು ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕುತ್ತಿದ್ದಾರೆ. ಕೆಲಸಕ್ಕೆ ಹಾಜರಾದ ನೇರ ನೇಮಕಾತಿ ಸಿಬ್ಬಂದಿ ಬದಲು ಆಳುಗಳನ್ನು ಕರೆಸಿ ಕೆಲಸ ಮಾಡಿಸುತ್ತಿರುವುದು ಖಂಡನೀಯ ಎಂದರು.

ಸುಮಾರು 5 ಸಾವಿರ ಹೊರಗುತ್ತಿಗೆ ನೌಕರರು ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಹಾಗಾಗಿ ಕೂಡಲೇ ನೌಕರರಿಗೆ ಮರಳಿ ಕೆಲಸ ಕೊಡಬೇಕು, ನಿವೃತ್ತಿವರೆಗೂ ಸೇವಾ ಭದ್ರತೆ ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ಸಂಘದ ಸಹ ಕಾರ್ಯದರ್ಶಿ ಕೆ.ಹನುಮೇಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News